ಕೋವಿಡ್ ಮತ್ತು ಶಾಲಾ ಶುಲ್ಕ: ಖಾಸಗಿ ಶಾಲೆಗಳ ವಿರುದ್ಧ ಒತ್ತಾಯದ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್

ಶೇ. 70ರಷ್ಟು ಶುಲ್ಕವನ್ನು ಮಾತ್ರ ಸಂಗ್ರಹಿಸುವಂತೆ ಖಾಸಗಿ, ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಸೂಚನೆ ನೀಡಿದೆ.
High Court of Karnataka, KJ George
High Court of Karnataka, KJ George

2020-21ರ ಶೈಕ್ಷಣಿಕ ವರ್ಷದಲ್ಲಿ ಕೇವಲ ಶೇ 70ರಷ್ಟು ಮಾತ್ರ ಬೋಧನಾ ಶುಲ್ಕ ಸಂಗ್ರಹಿಸುವುದನ್ನು ಕಡ್ಡಾಯಗೊಳಿಸುವಂತೆ ಸರ್ಕಾರ ಹೊರಡಿಸಿದ್ದ ಆದೇಶದ ಉಲ್ಲಂಘನೆಗಾಗಿ ಭಾರತೀಯ ಶಾಲೆಗಳ ಸಂಘದ (ಎಐಎಸ್) ಸದಸ್ಯರ ವಿರುದ್ಧ ಯಾವುದೇ ಒತ್ತಾಯಪೂರ್ವಕ ಕ್ರಮ ತೆಗೆದುಕೊಳ್ಳದಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚಿದ್ದ ಕಾರಣಕ್ಕೆ 2020-21ರ ಶೈಕ್ಷಣಿಕ ಸಾಲಿನಲ್ಲಿ ಕೇವಲ ಶೇ. 70ರಷ್ಟು ಶುಲ್ಕ ಸಂಗ್ರಹಿಸುವಂತೆ ಜನವರಿ 29 ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ವಿವಿಧ ಅರ್ಜಿಗಳು ಸಲ್ಲಿಕೆಯಾಗಿತ್ತು.

ವಿಚಾರಣೆ ವೇಳೆ ನ್ಯಾಯಾಲಯವು,ʼ ಪೋಷಕರು ನಿಜವಾಗಿಯೂ ಸಮಸ್ಯೆಗಳನ್ನು ಪ್ರಸ್ತಾಪಿಸಿದರೆ ಪೂರ್ಣ ಶಾಲಾ ಶುಲ್ಕ ಪಾವತಿಸಲು ಅವರನ್ನು ಒತ್ತಾಯಿಸುವುದಿಲ್ಲʼ ಎಂಬ ಸೂಚನೆಯನ್ನು ತಮ್ಮ ಶಾಲೆಗಳ ನೋಟಿಸ್‌ ಬೋರ್ಡ್‌ನಲ್ಲಿ ಹಾಕುವಂತೆ ಭಾರತೀಯ ಪ್ರೌಢ ಶಿಕ್ಷಣ ಮಂಡಳಿ (ಐಸಿಎಸ್‌ಇ) ಮತ್ತು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪಠ್ಯಕ್ರಮದ ಹಾಗೂ ಎಐಎಸ್‌ಗೆ ಸಂಬಂಧಿಸಿದ ಶೈಕ್ಷಣಿಕ ಸಂಸ್ಥೆಗಳಿಗೆ ಸೂಚಿಸಿದೆ.

Also Read
ಕೋವಿಡ್‌ನಿಂದಾಗಿ ಶಿಕ್ಷಣ ಸ್ಥಗಿತಗೊಳ್ಳಬಾರದು, ಇದರಿಂದ ದೇಶದ ಪ್ರಗತಿ ಆಗದು: ಕರ್ನಾಟಕ ಹೈಕೋರ್ಟ್

ಹೈಕೋರ್ಟ್‌ ನ್ಯಾಯಮೂರ್ತಿ ಆರ್‌ ದೇವದಾಸ್‌ ಈ ಆದೇಶ ಹೊರಡಿಸಿದರು. "ಅದೇನೇ ಇದ್ದರೂ, ಈ ಸಮಯದಲ್ಲಿ ಸಮತೋಲನ ಸಾಧಿಸುವ ಸಲುವಾಗಿ, ಅರ್ಜಿದಾರರಾದ ಸಂಸ್ಥೆಗಳು ಪೋಷಕರ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ, ಏಕೆಂದರೆ ಅದು ನೈಜ ಸಮಸ್ಯೆಯಾಗಿದ್ದು, ಕೋವಿಡ್‌ - 19 ಕಾರಣದಿಂದಾಗಿ ದೇಶದ ಪ್ರಜೆಗಳ ಮೇಲೆ ಪರಿಣಾಮ ಬೀರಿ ಅವರ ಜೀವನೋಪಾಯಕ್ಕೆ ಕುಟುಂಬದ ಆದಾಯಕ್ಕೆ ಕುತ್ತು ಉಂಟಾಗಿದೆ. ಸಂದರ್ಭಕ್ಕೆ ತಕ್ಕಂತೆ ಶಿಕ್ಷಣ ಸಂಸ್ಥೆಗಳು ಅಣಿಯಾಗಬೇಕು. ಶಾಲಾ ಶುಲ್ಕ ಪಾವತಿಸುವ ವಿಚಾರದಲ್ಲಿ ಪೋಷಕರ ಕುಂದುಕೊರತೆಗಳನ್ನು ಪ್ರತಿಯೊಂದು ಪ್ರಕರಣದ ಆಧಾರದಲ್ಲಿ ಪರಿಗಣಿಸಬೇಕು” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿತು.

“ಕೆಲ ಪೋಷಕರು ಮತ್ತು ಪೋಷಕರ ಸಂಘಟನೆಗಳು ಕೂಡ ಪ್ರಕರಣದಲ್ಲಿ ತಮ್ಮನ್ನು ಪಕ್ಷಕಾರರನ್ನಾಗಿ ಮಾಡಿಕೊಳ್ಳುವಂತೆ ಕೋರಿಕೊಂಡಿದ್ದು ಅವುಗಳ ಪರವಾಗಿ ಅರ್ಜಿ ಸಲ್ಲಿಸುತ್ತಿರುವುದಾಗಿ ವಿಚಾರಣೆಯ ಸಮಯದಲ್ಲಿ, ವಕೀಲ ನರೇಂದ್ರ ದೇವ್ ಅವರು ತಿಳಿಸಿದರು. ಈ ಹಿನ್ನೆಲೆಯಲ್ಲಿ, ಒಂದೊಮ್ಮೆ ಶೈಕ್ಷಣಿಕ ಸಂಸ್ಥೆಗಳು ಪೋಷಕರ ಸಮಸ್ಯೆಗಳನ್ನು ಆಲಿಸಲು ಮುಂದಾಗದೆ ಹೋದರೆ ನ್ಯಾಯಾಲಯದ ಗಮನಕ್ಕೆ ತರಲು ಸ್ವತಂತ್ರರು ಎಂದು ಇದೇ ವೇಳೆ ಪೀಠವು ಹೇಳಿತು.

ಈ ಹಿಂದಿನ ವಿಚಾರಣೆ ವೇಳೆ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರು ಬೋಧನಾ ಶುಲ್ಕ ನಿಗದಿ ಅಥವಾ ನಿಯಂತ್ರಣ ವಿಚಾರದಲ್ಲಿ ಐಸಿಎಸ್‌ಇ ಮತ್ತು ಸಿಬಿಎಸ್‌ಇ ಮಂಡಳಿ ವ್ಯಾಪ್ತಿಯ ಸಂಸ್ಥೆಗಳ ವಿರುದ್ಧ ಯಾವುದೇ ಒತ್ತಾಯಪೂರ್ವಕ ಕ್ರಮ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಕೋವಿಡ್‌ ಹಿನ್ನೆಲೆಯಲ್ಲಿ ಸರ್ಕಾರ ಶಿಕ್ಷಣ ಶುಲ್ಕಕ್ಕೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಿತ್ತು. ಶಾಲಾ ಸಂಘಗಳೊಡನೆ ಸಭೆಗಳನ್ನು ನಡೆಸಿದ ನಂತರ ಪೋಷಕರ ಪ್ರತಿನಿಧಿಗಳೊಂದಿಗೂ ಚರ್ಚೆ ನಡೆಸಲಾಗಿತ್ತು. ಇಂತಹ ಸಭೆಗಳಿಗೆ ತನ್ನ ವ್ಯಾಪ್ತಿಯ ಶಾಲೆಗಳನ್ನು ಕರೆದಿರಲಿಲ್ಲ ಎಂದು ಎಐಎಸ್‌ ನ್ಯಾಯಾಲಯಕ್ಕೆ ತಿಳಿಸಿತ್ತು. ಐಸಿಎಸ್‌ಇ ಮತ್ತು ಸಿಬಿಎಸ್‌ಇ ಶಾಲೆಗಳಿಗೆ ರಾಜ್ಯ ಸರ್ಕಾರವು ನಿರ್ದೇಶನಗಳನ್ನು ನೀಡಬಹುದೇ ಎಂಬ ಪ್ರಶ್ನೆಯನ್ನು ಪರಿಗಣಿಸುವುದು ಬಾಕಿ ಇದೆ ಎಂದು ನ್ಯಾ. ದೇವದಾಸ್‌ ಆಗ ತಿಳಿಸಿದ್ದರು. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 24 ರಂದು ನಡೆಯಲಿದೆ.

Related Stories

No stories found.
Kannada Bar & Bench
kannada.barandbench.com