SEBI 
ಸುದ್ದಿಗಳು

ರಿಲಯನ್ಸ್ ಹೋಮ್ ಫೈನಾನ್ಸ್ ಪ್ರಕರಣ: ಅನಿಲ್ ಅಂಬಾನಿ ಪುತ್ರನಿಗೆ ₹1 ಕೋಟಿ ದಂಡ ವಿಧಿಸಿದ ಸೆಬಿ

ಜೈ ಅನ್ಮೋಲ್ ಅಂಬಾನಿ ಅವರು ಸೆಬಿ ನಿಯಮಾವಳಿ ಉಲ್ಲಂಘಿಸಿ ಸೂಕ್ತ ಮೇಲ್ವಿಚಾರಣೆ ನಡೆಸದೆ ಪ್ರವರ್ತಕ ಸಂಬಂಧಿತ ಸಂಸ್ಥೆಗಳಿಗೆ ಸಾಲ ನೀಡಲು ಅನುಮೋದಿಸಿದ್ದರು ಎಂದು ಸೆಬಿ ಆದೇಶ ತಿಳಿಸಿದೆ.

Bar & Bench

ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್‌ನ (RHFL) ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಸಾಮಾನ್ಯ ಉದ್ದೇಶದ ಕಾರ್ಪೊರೇಟ್ ಸಾಲಗಳನ್ನು (ಜಿಪಿಸಿಎಲ್) ಅನುಮೋದಿಸುವವ ವೇಳೆ ಸೂಕ್ತ ಕಾರ್ಯತತ್ಪರತೆ ತೋರುವಲ್ಲಿ ವಿಫಲವಾದ ಕಾರಣಕ್ಕಾಗಿ ಉದ್ಯಮಿ ಅನಿಲ್ ಅಂಬಾನಿ ಅವರ ಪುತ್ರ ಜೈ ಅನ್ಮೋಲ್ ಅಂಬಾನಿ ಅವರಿಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ₹1 ಕೋಟಿ ದಂಡ ವಿಧಿಸಿದೆ [ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್‌ಗೆ ಸಂಬಂಧಿಸಿದ ಪ್ರಕರಣ].

ಈ ಸಾಲಗಳನ್ನು ನೀಡಲಾದ ರಿಲಯನ್ಸ್ ಎಡಿಎಜಿ ಸಮೂಹದಲ್ಲಿನ ಜೈ ಅಂಬಾನಿಯವರ ಪಾತ್ರವನ್ನು ಸಹ ತನಿಖೆ ನಡೆಸಲಾಗಿದ್ದು ಈ ವಹಿವಾಟುಗಳಲ್ಲಿ ಅವರು ಸಮಂಜಸವಾದ ಮೇಲ್ವಿಚಾರಣೆ  ನಡೆಸಲಿಲ್ಲ ಎನ್ನುವುದನ್ನು ಸೆಬಿ ಗಮನಿಸಿದೆ.

ಇದಲ್ಲದೆ ಸಾಲ ಮಂಜೂರಾತಿಯಲ್ಲಿ ವಹಿಸಲಾದ ಪಾತ್ರಕ್ಕಾಗಿ ಆರ್‌ಎಚ್‌ಎಫ್‌ಎಲ್‌ನ ಮಾಜಿ ಮುಖ್ಯ ರಿಸ್ಕ್ ಅಧಿಕಾರಿ ಕೃಷ್ಣನ್ ಗೋಪಾಲಕೃಷ್ಣನ್ ಅವರಿಗೆ ಸೆಬಿ ₹15 ಲಕ್ಷ ದಂಡ  ವಿಧಿಸಿದೆ.

ಇಬ್ಬರೂ ನಿಯಮಾವಳಿ ಉಲ್ಲಂಘಿಸಿರುವುದು ಕಂಡುಬಂದಿದೆ ಎಂದಿರುವ ನ್ಯಾಯಾಲಯ 45 ದಿನಗಳಲ್ಲಿ ದಂಡ ಪಾವತಿಸುವಂತೆ ಸೂಚಿಸಿದೆ.

ರಿಲಯನ್ಸ್ ಹೋಮ್ ಫೈನಾನ್ಸ್‌ನಿಂದ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದಕ್ಕಾಗಿ ಅನಿಲ್ ಅಂಬಾನಿ ಹಾಗೂ  24 ಮಂದಿಗೆ ಐದು ವರ್ಷಗಳ ಕಾಲ ಷೇರುಪೇಟೆಯಲ್ಲಿ ವ್ಯವಹರಿಸದಂತೆ ನಿರ್ಬಂಧ ವಿಧಿಸಿ ₹25 ಕೋಟಿ ದಂಡ ವಿಧಿಸಿದ ಕ್ರಮಕ್ಕೆ ಸಂಬಂಧಿಸಿದ ಆದೇಶ ಇದಾಗಿದೆ.

ಜೈ ಅನ್ಮೋಲ್ ಅಂಬಾನಿ ಅವರು ಸೆಬಿ ನಿಯಮಾವಳಿ ಉಲ್ಲಂಘಿಸಿ ಸೂಕ್ತ ಮೇಲ್ವಿಚಾರಣೆ ನಡೆಸದೆ ಪ್ರವರ್ತಕ ಸಂಬಂಧಿತ ಸಂಅಸ್ಥೆಗಳಿಗೆ ಸಾಲ ನೀಡಲು ಅನುಮೋದಿಸಿದ್ದರು ಎಂದು ಸೆಬಿಯ ತೀರ್ಪುಗಾರ ಬರ್ನಾಲಿ ಮುಖರ್ಜಿ ಅವರ ಆದೇಶ ತಿಳಿಸಿದೆ.

ಸೆಬಿಯ ತೀರ್ಪುಗಾರ ಬರ್ನಾಲಿ ಮುಖರ್ಜಿ ಹೊರಡಿಸಿದ ಆದೇಶದಲ್ಲಿ, ಜೈ ಅನ್ಮೋಲ್ ಅಂಬಾನಿ ಅವರು ಸೆಬಿ (LODR) ನಿಯಮಗಳ ಬಹು ನಿಬಂಧನೆಗಳನ್ನು ಉಲ್ಲಂಘಿಸಿ ಸರಿಯಾದ ಮೇಲ್ವಿಚಾರಣೆ ಅಥವಾ ಶ್ರದ್ಧೆ ಇಲ್ಲದೆ ಪ್ರವರ್ತಕ-ಸಂಬಂಧಿತ ಸಂಸ್ಥೆಗಳಿಗೆ ಸಾಲಗಳನ್ನು ಅನುಮೋದಿಸಿದ್ದಾರೆ ಎಂದು ಕಂಡುಹಿಡಿದಿದೆ.

ಆರ್‌ಎಚ್‌ಎಫ್‌ಎಲ್‌ನಲ್ಲಿ ಜೈ ಅಂಬಾನಿ ಕಾರ್ಯನಿರ್ವಾಹಕೇತರ ನಿರ್ದೇಶಕರ ಸ್ಥಾನವನ್ನು ಹೊಂದಿದ್ದರೂ, ಅವರು ಕಂಪನಿಯಲ್ಲಿ ದಿನನಿತ್ಯದ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂಬುದನ್ನು ಪುರಾವೆಗಳು ತೋರಿಸಿವೆ ಎಂದು ಆದೇಶ ವಿವರಿಸಿದೆ.