Arshad Warsi and Maria Goretti Instagram
ಸುದ್ದಿಗಳು

ಷೇರುಪೇಟೆ ಅಕ್ರಮ: ನಟ ಅರ್ಷದ್ ವಾರ್ಸಿ ಮತ್ತು ಪತ್ನಿಗೆ ಸೆಬಿ ನಿಷೇಧ

ಮಾರ್ಚ್ 2023ರಲ್ಲಿ, ಸೆಬಿ ಮಧ್ಯಂತರ ಆದೇಶದಲ್ಲಿ ವಾರ್ಸಿ ದಂಪತಿಗೆ ನಿರ್ಬಂಧ ವಿಧಿಸಿತ್ತು. ಆದರೆ ಎಸ್ಎಟಿ ನಂತರ ಅವರಿಗೆ ಭಾಗಶಃ ಪರಿಹಾರ ನೀಡಿತ್ತು.

Bar & Bench

ಸಾಧನಾ ಬ್ರಾಡ್‌ಕಾಸ್ಟ್ ಲಿಮಿಟೆಡ್ (ಎಸ್ ಬಿ ಎಲ್) ಷೇರುಗಳಿಗೆ ಸಂಬಂಧಿಸಿದ ಅಕ್ರಮದಲ್ಲಿ ಭಾಗಿಯಾಗಿದ್ದಕ್ಕಾಗಿ ಬಾಲಿವುಡ್ ನಟ ಅರ್ಷದ್ ಹುಸೇನ್ ವಾರ್ಸಿ ಮತ್ತು ಅವರ ಪತ್ನಿ ಮಾರಿಯಾ ಗೊರೆಟ್ಟಿ ವಾರ್ಸಿ ಇನ್ನಿತರರು ಒಂದು ವರ್ಷದ ಅವಧಿಗೆ ಷೇರು ಮಾರುಕಟ್ಟೆ ವ್ಯವಹಾರದಿಂದ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಗುರುವಾರ ನಿಷೇಧಿಸಿದೆ.

ವಾರ್ಸಿಯ ಸಹೋದರ ಇಕ್ಬಾಲ್ ವಾರ್ಸಿ ಸೇರಿದಂತೆ 57 ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಒಂದರಿಂದ ಐದು ವರ್ಷಗಳ ಅವಧಿಗೆ ಮಾರುಕಟ್ಟೆಯಿಂದ ನಿಷೇಧಿಸಲಾಗಿದೆ.

ಅರ್ಷದ್ ವಾರ್ಸಿ, ಅವರ ಸಹೋದರ ಇಕ್ಬಾಲ್ ಮತ್ತು ಪತ್ನಿ ಮಾರಿಯಾ ಗೊರೆಟ್ಟಿ ಅವರು ಪ್ರಕರಣದ ಸೂತ್ರಧಾರ ಮನೀಶ್ ಮಿಶ್ರಾ ರೂಪಿಸಿದ್ದ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಸೆಬಿಯ ಪೂರ್ಣಾವಧಿ ಸದಸ್ಯರಾದ ಅಶ್ವನಿ ಭಾಟಿಯಾ ಅವರು ಹೊರಡಿಸಿದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಮಾರ್ಚ್ 2023 ರಲ್ಲಿ, ಸೆಬಿ ಈ ವಿಷಯದಲ್ಲಿ ವಾರ್ಸಿ, ಅವರ ಪತ್ನಿ ಮತ್ತು ಇತರ ಹಲವರನ್ನು ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ನಿಷೇಧಿಸುವ ಮಧ್ಯಂತರ ಆದೇಶವನ್ನು ಹೊರಡಿಸಿತ್ತು . ಆದರೆ, ಆ ತಿಂಗಳ ನಂತರ ಸೆಕ್ಯುರಿಟೀಸ್ ಮೇಲ್ಮನವಿ ನ್ಯಾಯಮಂಡಳಿ (ಎಸ್‌ಎಟಿ) ನಿಷೇಧವನ್ನು ಎಸ್‌ಬಿಎಲ್‌ನ ಸ್ಕ್ರಿಪ್‌ಗೆ ಮಾತ್ರ ಸೀಮಿತಗೊಳಿಸಿತು.

ಸೆಬಿ ಮಾರ್ಚ್ 8, 2022ರಿಂದ ನವೆಂಬರ್ 30, 2022ರವರೆಗೆ ತನಿಖೆ ನಡೆಸಿತ್ತು. ದಾರಿತಪ್ಪಿಸುವ ಯೂಟ್ಯೂಬ್ ವಿಡಿಯೋಗಳು ಮತ್ತು ದೊಡ್ಡ ಪ್ರಮಾಣದ ಪ್ರಚಾರ ಅಭಿಯಾನದ ಮೂಲಕ ಪ್ರಚಾರ ನಡೆಸಿ ಸಾಧನಾ ಕಂಪೆನಿಯ ಷೇರುಗಳ ಮೌಲ್ಯ ಹೆಚ್ಚಳ ಮಾಡಿದ್ದ ಕುರಿತ ದೂರುಗಳು ಜುಲೈ ಮತ್ತು ಸೆಪ್ಟೆಂಬರ್ 2022ರ ನಡುವೆ ಕೇಳಿ ಬಂದಿದ್ದವು.

ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಸಾಧನಾ ಕಂಪನಿ ಟಿವಿ ಮತ್ತು ಚಲನಚಿತ್ರ ಮಾಧ್ಯಮ ವ್ಯವಹಾರದಲ್ಲಿ ಜನವರಿ 2018ರಿಂದ ತೊಡಗಿಸಿಕೊಂಡಿದೆ. ತನಿಖಾವಧಿಯಲ್ಲಿ, ಸಾರ್ವಜನಿಕ ಷೇರುದಾರರ ಸಂಖ್ಯೆ 885ರಿಂದ 72,509ಕ್ಕೆ ತೀವ್ರ ಗತಿಯಲ್ಲಿ ಏರಿಕೆ ಕಂಡಿತ್ತು. ಆದರೆ ಪ್ರವರ್ತಕ ಷೇರುಗಳು 40.95%ರಿಂದ 25.58%ಕ್ಕೆ ಇಳಿದಿದ್ದವು.