SEBI
SEBI 
ಸುದ್ದಿಗಳು

ಲಿಸ್ಟೆಡ್‌ ಕಂಪೆನಿಗಳ ನಿರ್ದೇಶಕರ ಹುದ್ದೆ ಸ್ವೀಕರಿಸದಂತೆ ಸುಭಾಷ್ ಚಂದ್ರ, ಗೋಯೆಂಕಾಗೆ ಸೆಬಿ ನಿರ್ಬಂಧ

Bar & Bench

ಎಸ್ಸೆಲ್ ಗ್ರೂಪ್ ಅಧ್ಯಕ್ಷ ಸುಭಾಷ್ ಚಂದ್ರ ಮತ್ತು ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ (ಝೀಲ್) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪುನೀತ್ ಗೋಯೆಂಕಾ ಅವರು ಯಾವುದೇ ಪಟ್ಟಿ ಮಾಡಲಾದ ಕಂಪೆನಿಗಳು ಅಥವಾ ಅವುಗಳ ಅಂಗಸಂಸ್ಥೆಗಳಲ್ಲಿ ನಿರ್ದೇಶಕ ಹುದ್ದೆ ಸ್ವೀಕರಿಸುವಂತಿಲ್ಲ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸೋಮವಾರ ನಿರ್ಬಂಧ ವಿಧಿಸಿದೆ.

ಸುಭಾಷ್‌ ಚಂದ್ರ ಮತ್ತು ಗೋಯೆಂಕಾ ಅವರು ಲಿಸ್ಟೆಡ್‌ ಕಂಪೆನಿಯೊಂದರಲ್ಲಿನ ತಮ್ಮ ಹುದ್ದೆಗಳನ್ನು ದುರುಪಯೋಗಪಡಿಸಿಕೊಂಡು ತಮ್ಮ ವೈಯಕ್ತಿಕ ಲಾಭಕ್ಕಾಗಿ ಈ ಕಂಪೆನಿಯ ಹಣವನ್ನು ಅಕ್ರಮ ಮಾರ್ಗಕ್ಕೆ ಹೊರಳಿಸಿಕೊಂಡಿದ್ದಾರೆ. ತಮ್ಮ ಒಡೆತನ ಮತ್ತು ನಿಯಂತ್ರಣದ ಸಹವರ್ತಿ ಘಟಕಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಝೀಲ್‌ (ZEEL) ಮತ್ತು ಎಸ್ಸೆಲ್‌ ಸಮೂಹದ ಇತರೆ ಲಿಸ್ಟೆಡ್‌ ಕಂಪೆನಿಗಳ ಸ್ವತ್ತುಗಳನ್ನು ಪರಕೀಯಗೊಳಿಸಿದ್ದಾರೆ ಎಂಬುದನ್ನು ಸೆಬಿ ಪೂರ್ಣಕಾಲಿಕ ಸದಸ್ಯರಾದ ಅಶ್ವನಿ ಭಾಟಿಯಾ ಅವರು ಆದೇಶದ ವೇಳೆ ಗಮನಿಸಿದ್ದಾರೆ.

"ನೋಟಿಸ್‌ ಪಡೆದ (ಸುಭಾಷ್‌ ಚಂದ್ರ ಮತ್ತು ಗೋಯೆಂಕಾ) ಮುಂದಿನ ಆದೇಶದವರೆಗೆ ಯಾವುದೇ ಲಿಸ್ಟೆಡ್‌ ಕಂಪನಿ ಅಥವಾ ಅದರ ಅಂಗಸಂಸ್ಥೆಗಳಲ್ಲಿ ನಿರ್ದೇಶಕ ಅಥವಾ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ ಹುದ್ದೆಗಳನ್ನು ಪಡೆಯದಂತೆ ನಿರ್ಬಂಧಿಸಲಾಗಿದೆ" ಎಂದು ಸೆಬಿ ಆದೇಶಿಸಿದೆ.

ಯೋಜನಾಬದ್ಧವಾಗಿ ಹಣದ ದುರ್ಬಳಕೆ ಮಾಡಿರುವುದು ಕಂಡುಬಂದಿದೆ. ಪ್ರಕರಣದಲ್ಲಿ ಝೀಲ್‌ನ ಹಣವನ್ನು ಬೇರೆಯದಕ್ಕೆ ಬಳಸಲಾಗಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದ್ದು ಹೆಚ್ಚಿನ ತನಿಖೆ ಅಗತ್ಯವಿದೆ. 2018-19ರ ಹಣಕಾಸು ವರ್ಷದಿಂದ 2022-23 ರ ಅವಧಿಯಲ್ಲಿ ಝೀಲ್‌ನ ಷೇರು ಬೆಲೆ ಪ್ರತಿ ಷೇರಿಗೆ  ₹600 ರ ಸಮೀಪದಿಂದ ₹200ಕ್ಕೂ ಕಡಿಮೆ ಬೆಲೆಗೆ ಕುಸಿದಿದೆ. ಕಂಪನಿಯು ತುಂಬಾ ಲಾಭದಾಯಕವಾಗಿದ್ದರೂ ಮತ್ತು ತೆರಿಗೆಯ ನಂತರದ ಲಾಭವನ್ನು ಸ್ಥಿರವಾಗಿ ಉತ್ಪಾದಿಸುತ್ತಿದ್ದರೂ ಈ ಸಂಪತ್ತಿನ ಸವಕಳಿ, ಕಂಪೆನಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ತೀರ್ಮಾನಕ್ಕೆ ಇಂಬು ನೀಡುತ್ತದೆ. ಈ ಅವಧಿಯಲ್ಲಿ, ಪ್ರವರ್ತಕರ ಷೇರುಗಳು 41.62% ರಿಂದ ಪ್ರಸ್ತುತ 3.99% ಕ್ಕೆ ಇಳಿದಿವೆ. ಹೂಡಿಕೆದಾರರಿಗೆ ಹಾಗೂ ನಿಯಂತ್ರಕರಿಗೆ ಸಹವರ್ತಿ ಘಟಕಗಳು ಹಣ ಮರಳಿಸಿವೆ ಎಂದು ತಪ್ಪಾಗಿ ಬಿಂಬಿಸಲು ಯತ್ನಿಸಲಾಗಿದೆ. ಆದರೆ ವಾಸ್ತವದಲ್ಲಿ ಝೀಲ್‌ನ ಸ್ವಂತ ನಿಧಿಗಳನ್ನು ವಿವಿಧ ಸ್ತರಗಳ ಮೂಲಕ ಹಂಚಿ ಅಂತಿಮವಾಗಿ ಝೀಲ್‌ ಖಾತೆಗೆ ಬರುವಂತೆ ಮಾಡಲಾಯಿತು ಎಂದು ಸೆಬಿ ನುಡಿದಿದೆ.

ಝೀಲ್‌ನ ಇಬ್ಬರು ಸ್ವತಂತ್ರ ನಿರ್ದೇಶಕರಾದ ಸುನೀಲ್ ಕುಮಾರ್ ಮತ್ತು ನಿಹಾರಿಕಾ ವೋಹ್ರಾ ಅವರು 2019ರ ನವೆಂಬರ್‌ನಲ್ಲಿ ರಾಜೀನಾಮೆ ನೀಡಿದ್ದರು. ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಬಿ ತನಿಖೆ ಆರಂಭಿಸಿತ್ತು.