Prannoy Roy, SEBI and Radhika Roy
Prannoy Roy, SEBI and Radhika Roy 
ಸುದ್ದಿಗಳು

ಷೇರುದಾರರಿಂದ ದರ ಸಂವೇದಿ ಮಾಹಿತಿ ಬಚ್ಚಿಟ್ಟ ಆರೋಪ: ಪ್ರಣಯ್‌, ರಾಧಿಕಾ, ಆರ್‌ಆರ್‌ಪಿಆರ್‌‌ಗೆ ₹27 ಕೋಟಿ ದಂಡ

Bar & Bench

ಎನ್‌ಡಿಟಿವಿಯ ಷೇರುದಾರರಿಗೆ ದರ ಸಂವೇದಿ ಮಾಹಿತಿ ಬಹಿರಂಗಪಡಿಸದೇ ಇರುವ ಕಾರಣಕ್ಕೆ ವಾಹಿನಿಯ ಮೂವರು ಪ್ರವರ್ತಕರಾದ ಪ್ರಣಯ್‌ ರಾಯ್‌, ರಾಧಿಕಾ ರಾಯ್‌ ಮತ್ತು ಆರ್‌ಆರ್‌ಪಿಆರ್‌ ಹೋಲ್ಡಿಂಗ್‌ ಲಿಮಿಟೆಡ್‌ಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಗುರುವಾರ ₹27 ಕೋಟಿ ದಂಡ ವಿಧಿಸಿದೆ.

ಎಲ್ಲಾ ಮೂವರು ಪ್ರವರ್ತಕರಿಗೆ ಒಟ್ಟಾಗಿ ₹25 ಕೋಟಿ ದಂಡ ವಿಧಿಸಲಾಗಿದ್ದು, ಪ್ರಣಯ್‌ ಮತ್ತು ರಾಧಿಕಾ ರಾಯ್‌ ಅವರಿಗೆ ಹೆಚ್ಚುವರಿಯಾಗಿ ಪ್ರತ್ಯೇಕವಾಗಿ ತಲಾ ಒಂದು ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.

ವಿಶ್ವಪ್ರಧಾನ್‌ ಕಮರ್ಷಿಯಲ್‌ ಪ್ರೈವೇಟ್‌ ಲಿಮಿಟೆಡ್‌ (ವಿಸಿಪಿಎಲ್‌) ಮತ್ತು ಐಸಿಐಸಿಐ ಬ್ಯಾಂಕ್‌ ಜೊತೆ ಅವರು ಮಾಡಿಕೊಂಡಿರುವ ಮೂರು ಸಾಲದ ಒಪ್ಪಂದ ಮಾಹಿತಿಯನ್ನು ಬಹಿರಂಗಪಡಿಸಿದೇ ಸೆಬಿ ಕಾಯಿದೆಯ ಸೆಕ್ಷನ್ 12ಎ ಹಾಗೂ ಸಂಬಂಧಿತ ಸೆಬಿ ನಿಯಂತ್ರಣ ನಿಯಮಗಳು (ಷೇರು ಮಾರುಕಟ್ಟೆಗೆ ಸಂಬಂಧಿಸಿದ ವಂಚನೆ ವಹಿವಾಟು ಅಭ್ಯಾಸಗಳ ನಿಷೇಧ)- 2003 ಅನ್ನು (ಪಿಎಫ್‌ಯುಟಿಪಿ ನಿಯಂತ್ರಣಗಳು) ರಾಯ್‌ ದಂಪತಿ ಉಲ್ಲಂಘಿಸಿದ್ದಾರೆ ಎಂದು ಸೆಬಿ ಹೇಳಿದೆ.

ಅಲ್ಲದೆ, ವಿಸಿಪಿಎಲ್‌ ಸಾಲದ ಒಪ್ಪಂದದ ಅನುಸಾರ ಎನ್‌ಡಿಟಿವಿಯ ಷೇರುಗಳ ವರ್ಗಾವಣೆ ಅಗತ್ಯವಾಗಿತ್ತು. ಈ ವರ್ಗಾವಣೆಯನ್ನು ಮಾರುಕಟ್ಟೆಯ ಗಮನಕ್ಕೆ ತಾರದೆ ಬೃಹತ್‌ ವರ್ಗಾವಣೆಗಳ ಮೂಲಕ ನಡೆಸಲಾಗಿದೆ. ಸಾಲಗಳ ಒಪ್ಪಂದದ ಕುರಿತು ಹಾಗೂ ಮಾರುಕಟ್ಟೆಯ ಹೊರತಾದ ಷೇರು ವರ್ಗಾವಣೆಗಳ ಕುರಿತ ಮಾಹಿತಿಯು ಬಂಡವಾಳ ಹೂಡಿಕೆದಾರರು ನಿರ್ಣಯಗಳನ್ನು ಕೈಗೊಳ್ಳಲು ಅಗತ್ಯವಾದ, ದರ ಸಂವೇದಿಯಾದ, ಮಾಹಿತಿಯಾಗಿದ್ದು ಅದನ್ನು ಮುಚ್ಚಿಡಲಾಗಿದೆ ಎಂದು ಸೆಬಿ ಹೇಳಿದೆ.

ಇಂತಹ ಮಾಹಿತಿಯ ಕೊರತೆಯು ಎನ್‌ಡಿಟಿವಿ ಷೇರುಗಳ ಕುರಿತು ಷೇರುದಾರರು ಮಾಹಿತಿಪೂರ್ಣ ನಿರ್ಣಯಗಳ ಮೂಲಕ ಭಾಗಿಯಾಗುವ ನ್ಯಾಯಯುತ ಸಾಧ್ಯತೆಯಿಂದ ವಂಚಿಸಿದೆ ಎಂದು ಸೆಬಿ ಅಭಿಪ್ರಾಯಪಟ್ಟಿದೆ.

2008ರ ಅಕ್ಟೋಬರ್‌ನಲ್ಲಿ ಆರ್‌ಆರ್‌ಪಿಆರ್‌ ಹೋಲ್ಡಿಂಗ್ಸ್‌ ಐಸಿಐಸಿಐಯ ಬ್ಯಾಂಕ್‌ ಜೊತೆ ಸಾಲದ ಒಪ್ಪಂದ ಮಾಡಿಕೊಂಡಿದೆ. ಕ್ರಮವಾಗಿ ₹350 ಕೋಟಿ ಹಾಗೂ ₹50 ಕೋಟಿ ಮೊತ್ತದ ಸಾಲಕ್ಕಾಗಿ ಆರ್‌ಆರ್‌ಪಿಆರ್‌ ಹೋಲ್ಡಿಂಗ್ಸ್‌ 2009 ಮತ್ತು 2010ರಲ್ಲಿ ವಿಪಿಸಿಎಲ್‌ ಜೊತೆಯೂ ಸಾಲದ ಒಪ್ಪಂದ ಮಾಡಿಕೊಂಡಿತ್ತು.

ಐಸಿಐಸಿಐ ಮತ್ತು ವಿಪಿಸಿಎಲ್‌ನ ಎರಡು ಸಾಲದ ಒಪ್ಪಂದಗಳಲ್ಲಿ ಹಲವು ನಿಯಮಗಳು ಮತ್ತು ಷರತ್ತುಗಳಿದ್ದು, ಇವು ಎನ್‌ಡಿಟಿವಿಯ ಕಾರ್ಯಾಚರಣೆಗೆ ಸಮಸ್ಯೆಯಾಗಿವೆ ಎಂದು ಸೆಬಿ ಹೇಳಿದೆ. ಇಂಥ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸದೇ ಇರುವುದು ಎನ್‌ಡಿಟಿವಿಯ ಷೇರುದಾರರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಹೇಳಲಾಗಿದೆ.

ಮೂರು ವಿವಾದಾಸ್ಪದ ಸಾಲದ ಒಪ್ಪಂದಗಳಿಗೆ ಸಂಬಂಧಿಸಿದ ವಿಚಾರದ ಕುರಿತು 2019ರಲ್ಲಿ ಎರಡು ವರ್ಷಗಳ ಕಾಲ ಷೇರು ಮಾರುಕಟ್ಟೆ ಪ್ರವೇಶಿಸದಂತೆ ರಾಧಿಕಾ ಮತ್ತು ಪ್ರಣಯ್‌ ರಾಯ್‌ ಅವರಿಗೆ ಸೆಬಿ ನಿರ್ಬಂಧ ವಿಧಿಸಿತ್ತು. ಇದರ ಜೊತೆಗೆ ಎರಡು ವರ್ಷಗಳ ಕಾಲ ಎನ್‌ಡಿಟಿವಿಯಲ್ಲಿ ನಿರ್ದೇಶಕ ಅಥವಾ ವಾಹಿನಿ ನಿರ್ವಹಣಾ ಸ್ಥಾನದಂಥ ಮಹತ್ವದ ಸ್ಥಾನಗಳನ್ನು ಅಲಂಕರಿಸದಂತೆಯೂ ಅವರಿಗೆ ಆದೇಶದಲ್ಲಿ ಸೂಚಿಸಲಾಗಿತ್ತು.