ಆರ್‌ಬಿಐ ಕೋವಿಡ್ ಸೌಲಭ್ಯ ಸಾಂಕ್ರಾಮಿಕ ರೋಗಕ್ಕೂ ಮೊದಲಿನ ಸುಸ್ತಿದಾರರಿಗೆ ಅನ್ವಯಿಸದು: ದೆಹಲಿ ಹೈಕೋರ್ಟ್

ಅರ್ಜಿದಾರರ ಸಾಲದ ಮರುಪಾವತಿ ವಿಚಾರ ಬಹಳ ಹಿಂದಿನದಾಗಿದ್ದು ಸಾಂಕ್ರಾಮಿಕ ರೋಗದಿಂದ ಆರ್ಥಿಕ ಒತ್ತಡ ಉಂಟಾಗಿದೆ ಎನ್ನಲು ಯಾವುದೇ ಕಾರಣಗಳಿಲ್ಲ ಎಂಬುದನ್ನು ಪರಿಗಣಿಸಿದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು.
ಆರ್‌ಬಿಐ ಕೋವಿಡ್ ಸೌಲಭ್ಯ ಸಾಂಕ್ರಾಮಿಕ ರೋಗಕ್ಕೂ ಮೊದಲಿನ ಸುಸ್ತಿದಾರರಿಗೆ ಅನ್ವಯಿಸದು: ದೆಹಲಿ ಹೈಕೋರ್ಟ್

ಕೋವಿಡ್‌-19ನಿಂದ ಎದುರಾಗುವ ಆರ್ಥಿಕ ಸಂಕಷ್ಟ ಕಡಿಮೆ ಮಾಡಲು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಒದಗಿಸಿರುವ ಸೌಲಭ್ಯಗಳು ಸಾಂಕ್ರಾಮಿಕ ರೋಗಕ್ಕೂ ಮೊದಲು ಸಾಲ ಮರುಪಾವತಿ ಮಾಡದವರಿಗೆ ಅನ್ವಯಿಸುವುದಿಲ್ಲ ಎಂದು ದೆಹಲಿ ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಅರ್ಜಿದಾರರ ಒಂದಾವರ್ತಿ ಪಾವತಿಗೆ (ಒನ್‌ ಟೈಂ ಸೆಟಲ್ಮೆಂಟ್‌) ನೀಡಲಾದ ತಾತ್ವಿಕ ಒಪ್ಪಂದವನ್ನು ಹಿಂತೆಗೆದುಕೊಳ್ಳುವ ಐಎಲ್ ಅಂಡ್‌ ಎಫ್ಎಸ್ ಆರ್ಥಿಕ ಸೇವಾ ಸಂಸ್ಥೆಯ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರಿದ್ದ ಏಕಸದಸ್ಯ ಪೀಠ ಈ ನಿಟ್ಟಿನಲ್ಲಿ ಆದೇಶ ಹೊರಡಿಸಿದೆ.

Also Read
[ಚಕ್ರ ಬಡ್ಡಿ ವಿಚಾರ] ಎಕ್ಸ್‌ಗ್ರೇಷಿಯಾ ಯೋಜನೆ ನಿಬಂಧನೆಗಳಿಂದ ಮಾರ್ಗದರ್ಶಿತವಾಗಲು ಬ್ಯಾಂಕುಗಳಿಗೆ ಸೂಚಿಸಿರುವ ಆರ್‌ಬಿಐ

ಅರ್ಜಿದಾರರು 2006ರಿಂದ 2018ರ ಅವಧಿಯಲ್ಲಿ ಐಎಲ್ ಮತ್ತು ಎಫ್ಎಸ್ ನಿಂದ ವಿವಿಧ ಸಾಲ ಸೌಲಭ್ಯಗಳನ್ನು ಪಡೆದುಕೊಂಡಿದ್ದರು. ಸುಸ್ತಿದಾರರಾದ ಬಳಿಕ ಖಾತೆಯನ್ನು ಕಾರ್ಯನಿರ್ವಹಿಸದ ಆಸ್ತಿ ಎಂದು ವರ್ಗೀಕರಿಸಲಾಗಿತ್ತು.

ಸಾಲ ಮರುಪಾವತಿ ನ್ಯಾಯಮಂಡಳಿ (Debt Recovery Tribunal) ಎದುರು ಸರ್ಫೇಸಿ ಕಾಯಿದೆಯಡಿ (SARFAESI Act) ವಿಚಾರಣೆ ಪ್ರಾರಂಭಿಸಿದ ನಂತರ, ಅರ್ಜಿದಾರರು 2020 ರ ಜನವರಿಯಲ್ಲಿ ರೂ. 93 ಕೋಟಿ ರೂ. ಬಾಕಿ ಇರುವ ಸಾಲಕ್ಕೆ ಸಂಬಂಧಿಸಿದಂತೆ 100 ಕೋಟಿ ರೂ ಪ್ರಸ್ತಾವನೆ ನೀಡಿದರು. ಮಾರ್ಚ್‌ 27 ಅಥವಾ ಅದಕ್ಕೂ ಮೊದಲು 100 ಕೋಟಿಗಳನ್ನು ಒಂದೇ ಬಾರಿಗೆ ಪಾವತಿಸಲು ಐಎಲ್ ಅಂಡ್‌ ಎಫ್ಎಸ್ ತಾತ್ವಿಕವಾಗಿ ಒಪ್ಪಿಕೊಂಡಿತು. ಒಟಿಎಸ್‌ ಫಲಪ್ರದವಾಗದ ಪರಿಣಾಮ ಐಎಲ್ ಅಂಡ್‌ ಎಫ್ಎಸ್‌ ತನ್ನ ಪಾವತಿ ಪ್ರಸ್ತಾವನೆ ಹಿಂಪಡೆಯಿತು.

Also Read
ಮೊರಟೊರಿಯಂ ವಿಸ್ತರಣೆ ಅಸಮರ್ಥನೀಯ, ಇದು ಸಾಲದ ಶಿಸ್ತಿಗೆ ಹೊಡೆತ ನೀಡಿ ಅಪರಾಧಗಳಿಗೆ ಕಾರಣವಾಗಲಿದೆ ಎಂದ ಆರ್‌ಬಿಐ

ಹೀಗೆ ಪ್ರಸ್ತಾವನೆ ಹಿಂಪಡೆದದ್ದು ‘ಕೋವಿಡ್ -19 ನಿಯಂತ್ರಣ ಪ್ಯಾಕೇಜ್‌ʼಗೆ ಸಂಬಂಧಿಸಿದಂತೆ ಆರ್‌ಬಿಐ ಹೊರಡಿಸಿದ ಸುತ್ತೋಲೆ ಮತ್ತು ʼಸ್ಟೇಟ್‌ಮೆಂಟ್‌ ಆನ್‌ ಡೆವಲಪ್‌ಮೆಂಟಲ್‌ ಅಂಡ್‌ ರೆಗ್ಯುಲೇಟರಿ ಪಾಲಿಸೀಸ್ʼ‌ ಎಂಬ ಮಾರ್ಗಸೂಚಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ಕೋವಿಡ್‌ ಸಮಯದಲ್ಲಿ ಸಾಲಗಾರರು ನಿರಾಳವಾಗಿರುವಂತೆ ನೋಡಿಕೊಳ್ಳುವುದು ಸುತ್ತೋಲೆ ಮತ್ತು ಮಾರ್ಗಸೂಚಿಗಳ ಉದ್ದೇಶವಾಗಿತ್ತು ಎಂದು ಹೇಳಿದ್ದರು. ಆದರೆ “ವಿವಾದಗಳು ಒಪ್ಪಂದದ ಕಾನೂನಿನ ವ್ಯಾಪ್ತಿಯಲ್ಲಿವೆ ಮತ್ತು ಸರ್ಫೇಸಿ ಕಾಯಿದೆಯೇ ಅರ್ಜಿದಾರರಿಗೆ ಲಭ್ಯವಿರುವ ಏಕೈಕ ಪರಿಹಾರ” ಎಂದು ಐಎಲ್ ಅಂಡ್‌ ಎಫ್ಎಸ್ ಪ್ರತಿಪಾದಿಸಿತ್ತು. "ಬೇರೆ ಪ್ರಕರಣಗಳಲ್ಲಿ ಕೂಡ ಸಾಂಕ್ರಾಮಿಕ ರೋಗಕ್ಕೂ ಮೊದಲೇ ಸಾಲ ಬಾಕಿ ಉಳಿಸಿಕೊಂಡವರಿಗೆ ಆರ್‌ಬಿಐ ಸುತ್ತೋಲೆ ರಕ್ಷಣೆ ನೀಡಿಲ್ಲ" ಎಂದು ಸಂಸ್ಥೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿತ್ತು. ಈ ವಾದವನ್ನು ಮನ್ನಿಸಿದ ನ್ಯಾಯಾಲಯ "ಅರ್ಜಿದಾರರ ಸಾಲದ ಮರುಪಾವತಿ ವಿಚಾರ ಬಹಳ ಹಿಂದಿನದಾಗಿದ್ದು ಸಾಂಕ್ರಾಮಿಕ ರೋಗದಿಂದ ಆರ್ಥಿಕ ಒತ್ತಡ ಉಂಟಾಗಿದೆ ಎನ್ನಲು ಯಾವುದೇ ಕಾರಣಗಳಿಲ್ಲ" ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲೆ ಮೀನಾಕ್ಷಿ ಅರೋರಾ, ವಕೀಲರಾದ ವಿವೇಕ್ ಜೈನ್, ನಿರ್ವಿಕರ್ ಸಿಂಗ್, ಮನೀಶ್ ಶೇಖರಿ, ಜುಲ್ಫಿಕರ್ ಮೆಮನ್, ಹಾಜರಿದ್ದರು. ಐಎಲ್ & ಎಫ್ಎಸ್ ಪರವಾಗಿ ಹಿರಿಯ ವಕೀಲ ರಾಜೀವ್ ಮೆಹ್ರಾ, ವಕೀಲರಾದ ಅತುಲ್ ಶರ್ಮಾ, ಅಬು ಜಾನ್ ಮ್ಯಾಥ್ಯೂ, ಮಧುಸೂದನ್, ಬೈಜು ಮ್ಯಾಥ್ಯೂ ವಾದ ಮಂಡಿಸಿದರು.

Related Stories

No stories found.
Kannada Bar & Bench
kannada.barandbench.com