ಭಾರತದ ಏಕತೆ ಮತ್ತು ಸಮಗ್ರತೆಗೆ ಅಪಾಯ ಉಂಟುಮಾಡುವ ಕೃತ್ಯಗಳನ್ನು ಅಪರಾಧೀಕರಿಸುವ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 152 ಅನ್ನು ನ್ಯಾಯಸಮ್ಮತ ಅಭಿಪ್ರಾಯ ಭೇದದ ವಿರುದ್ಧ ಝಳಪಿಸುವ ಕತ್ತಿಯಾಗಿ ಬಳಸಬಾರದು ಎಂದು ರಾಜಸ್ಥಾನ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ತೇಜೇಂದರ್ ಪಾಲ್ ಸಿಂಗ್ ಮತ್ತು ರಾಜಸ್ಥಾನ ಸರ್ಕಾರ ನಡುವಣ ಪ್ರಕರಣ].
ಬಿಎನ್‌ಎಸ್ ಸೆಕ್ಷನ್‌ನ ಮೂಲ ದೇಶದ್ರೋಹವನ್ನು ಅಪರಾಧೀಕರಿಸುವ ಬ್ರಿಟಿಷರು ಜಾರಿಗೆ ತಂದಿದ್ದ ಐಪಿಸಿ ಸೆಕ್ಷನ್ 124ಎರಲ್ಲಿ ಇದೆ ಎಂದು ನ್ಯಾ. ಅರುಣ್ ಮೋಂಗಾ ತಿಳಿಸಿದ್ದಾರೆ.
"ಇದು ಪ್ರತ್ಯೇಕತೆ, ಸಶಸ್ತ್ರ ದಂಗೆ, ಅಥವಾ ವಿಧ್ವಂಸಕ ಚಟುವಟಿಕೆಗಳನ್ನು ಪ್ರಚೋದಿಸುವ ಅಥವಾ ದೇಶದ ಸ್ಥಿರತೆಗೆ ಬೆದರಿಕೆ ಹಾಕುವ ಪ್ರತ್ಯೇಕತಾವಾದಿ ಭಾವನೆಗಳನ್ನು ಉತ್ತೇಜಿಸುವ ಕೃತ್ಯಗಳು ಅಥವಾ ಪ್ರಯತ್ನಗಳನ್ನು ಅಪರಾಧೀಕರಿಸುತ್ತದೆ. ಮೇಲ್ನೋಟಕ್ಕೆ, ಇದು ಸೆಕ್ಷನ್ 124-ಎ (ದೇಶದ್ರೋಹ) ಅನ್ನು ಮತ್ತೊಂದು ಹೆಸರಿನಿಂದ ಮರುಜಾರಿಗೊಳಿಸಿದೆ ಎಂದು ತೋರುತ್ತದೆ. ರದ್ದಾಗಿರುವ (ದೇಶದ್ರೋಹ ಕಾನೂನು) ಸೆಕ್ಷನ್ ಇಲ್ಲವೇ ಜಾರಿಗೊಂಡಿರುವ (ಬಿಎನ್‌ಎಸ್ ಸೆಕ್ಷನ್ 152) ಸೆಕ್ಷನ್‌ನಲ್ಲಿ ಯಾವುದು ಹೆಚ್ಚು ಕಠಿಣವಾದುದು ಎಂಬುದು ಚರ್ಚಾಸ್ಪದ ವಿಚಾರವಾಗಿದೆ” ಎಂದು ನ್ಯಾಯಾಲಯ ತಿಳಿಸಿದೆ.
ತಮ್ಮ ವಿರುದ್ಧ ಬಿಎನ್‌ಎಸ್ ಸೆಕ್ಷನ್ 152 ಮತ್ತು ಸೆಕ್ಷನ್ 197(1)(ಸಿ) (ಆರೋಪಗಳು, ರಾಷ್ಟ್ರೀಯ ಏಕೀಕರಣಕ್ಕೆ ಪ್ರತಿಕೂಲವಾದ ಸಮರ್ಥನೆಗಳು) ಅಡಿ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಿಖ್ ಬೋಧಕ ತೇಜೇಂದರ್ ಪಾಲ್ ಸಿಂಗ್ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅವಲೋಕನ ಮಾಡಿದೆ.
ಖಲಿಸ್ತಾನ ಪರ ನಾಯಕ ಮತ್ತು ಸಂಸದ ಅಮೃತಪಾಲ್ ಸಿಂಗ್ ಅವರಿಗೆ ಸಹಾನುಭೂತಿ ತೋರಿದ್ದ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ತೇಜೇಂದರ್ ಅವರ ವಿರುದ್ದ ಕಳೆದ ಜುಲೈನಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ದುರುದ್ದೇಶಪೂರಿತವಾಗಿ ಕೈಗೊಂಡ ಕ್ರಮಗಳು ಮಾತ್ರವೇ ಬಿಎನ್‌ಎಸ್ ಸೆಕ್ಷನ್ 152ರ ವ್ಯಾಪ್ತಿಯಲ್ಲಿ ಬರುತ್ತವೆ. ಬಿಎನ್‌ಎಸ್ ಸೆಕ್ಷನ್ 152ಕ್ಕೆ ಇರುವ ವಿವರಣೆಯು ಸರ್ಕಾರದ ನೀತಿಗಳ ನ್ಯಾಯಸಮ್ಮತ ಟೀಕೆಗೆ ವಿನಾಯಿತಿ ನೀಡುವ ಮೂಲಕ ಅಗತ್ಯವಾದ ಸುರಕ್ಷತೆಯನ್ನು ಒದಗಿಸುತ್ತದೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ಭಾಷಣಗಳಿಗೆ ಸಂಬಂಧಿಸಿದಂತೆ ಅಂತಹ ಸೆಕ್ಷನ್‌ನಡಿ ಕ್ರಮ ಕೈಗೊಳ್ಳಲು ಆ ಭಾಷಣಗಳಿಗೆ ದಂಗೆ ಅಥವಾ ಪ್ರತ್ಯೇಕತೆಯ ಸಾಧ್ಯತೆ ಕುರಿತಂತೆ ನೇರ ನಂಟು ಇರಬೇಕು. ನ್ಯಾಯಸಮ್ಮತವಾದ ಅಭಿಪ್ರಾಯ ಭೇದ ಇಲ್ಲವೇ ಟೀಕೆಗಳನ್ನು ದೇಶದ್ರೋಹ ಅಥವಾ ದೇಶವಿರೋಧಿ ಕೃತ್ಯಗಳೊಂದಿಗೆ ಸಮೀಕರಿಸಲಾಗದು ಎಂದು ಅದು ಹೇಳಿದೆ.
ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ ಅನುಗುಣವಾಗಿ ಬಿಎನ್‌ಎಸ್ ಸೆಕ್ಷನ್ 152ನ್ನು ಎಚ್ಚರಿಕೆಯಿಂದ ಅನ್ವಯಿಸುವಂತೆ ಅದು ಕರೆ ನೀಡಿದೆ. ರಚನಾತ್ಮಕ ಸಂವಾದ ಅಥವಾ ರಾಜಕೀಯ ಅಭಿಪ್ರಾಯ ಭೇದವನ್ನು ಹತ್ತಿಕ್ಕುವುದನ್ನು ತಪ್ಪಿಸುವುದಕ್ಕಾಗಿ ಕಾನೂನು ಜಾರಿ ಅಧಿಕಾರಿಗಳು ಸಂಯಮ ಮತ್ತು ವಿವೇಚನೆಯನ್ನು ಬಳಸಬೇಕು ಎಂದು ಪೀಠ ಕಿವಿಮಾತು ಹೇಳಿದೆ.
ಈ ನಿಬಂಧನೆಯನ್ನು ರಾಷ್ಟ್ರೀಯ ಭದ್ರತೆ ಅಪಾಯ ಒದಗಿದಾಗ ಗುರಾಣಿಯಾಗಿ ಬಳಸಬೇಕೆ ಹೊರತು ನ್ಯಾಯಸಮ್ಮತ ಅಭಿಪ್ರಾಯ ಭೇದದ ವಿರುದ್ಧ ಕತ್ತಿ ಝಳಪಿಸಲು ಅಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ನ್ಯಾಯಾಲಯ ಒತ್ತಿಹೇಳಿತು .
ಪ್ರಸ್ತುತ ಪ್ರಕರಣದಲ್ಲಿ ಆರೋಪಿಯ ಉಳಿದ ಹೇಳಿಕೆಗಳನ್ನು ಪರಿಶೀಲಿಸಿದಾಗ ಅವರು ಪ್ರತ್ಯೇಕತೆ ಅಥವಾ ಸಶಸ್ತ್ರ ದಂಗೆ ಅಥವಾ ವಿಧ್ವಂಸಕ ಚಟುವಟಿಕೆಗಳನ್ನು ಪ್ರಚೋದಿಸಲು ಇಲ್ಲವೇ ಪ್ರತ್ಯೇಕತಾವಾದಿ ಚಟುವಟಿಕೆಗಳ ಭಾವನೆಗಳನ್ನು ಉತ್ತೇಜಿಸಲು ಅಥವಾ ಭಾರತದ ಸಾರ್ವಭೌಮತ್ವ ಅಥವಾ ಏಕತೆ ಮತ್ತು ಸಮಗ್ರತೆಗೆ ಅಪಾಯ ಉಂಟುಮಾಡಲು ಯತ್ನಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಅಂತೆಯೇ ಬಿಎನ್‌ಎಸ್ ಸೆಕ್ಷನ್ 197 (1) (ಆರೋಪಗಳು, ರಾಷ್ಟ್ರೀಯ ಏಕೀಕರಣಕ್ಕೆ ಪ್ರತಿಕೂಲವಾದ ಸಮರ್ಥನೆಗಳು) ಅಡಿಯಲ್ಲಿಯೂ ಅವರ ವಿರುದ್ಧದ ಆರೋಪ ಸಾಬೀತಾಗಿಲ್ಲ ಎಂದ ಪೀಠ ಆರೋಪಿ ವಿರುದ್ಧದ ಎಫ್‌ಐಆರ್ ಮತ್ತು ಎಲ್ಲಾ ವಿಚಾರಣೆಗಳನ್ನು ರದ್ದುಗೊಳಿಸಿತು.
ಹಿರಿಯ ವಕೀಲ ವಿಕಾಸ್ ಬಲಿಯಾ ಮತ್ತು ವಕೀಲ ನಿತಿನ್ ಗೋಕ್ಲಾನಿ ಅರ್ಜಿದಾರರ ಪರ ವಾದ ಮಂಡಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ವಿಕ್ರಮ್ ಸಿಂಗ್ ರಾಜಪುರೋಹಿತ್ ರಾಜಸ್ಥಾನ ಸರ್ಕಾರವನ್ನು ಪ್ರತಿನಿಧಿಸಿದ್ದರು.