Supreme Court and sedition law
Supreme Court and sedition law 
ಸುದ್ದಿಗಳು

ದೇಶದ್ರೋಹ ಸೆಕ್ಷನ್ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ 7 ಅರ್ಜಿಗಳು ಇವು…

Bar & Bench

ದೇಶದ್ರೋಹವನ್ನು ಅಪರಾಧೀಕರಿಸುವ ಐಪಿಸಿಯ 124 ಎ ಸೆಕ್ಷನ್‌ ಅನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಸೆಕ್ಷನ್‌ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಪ್ರಸ್ತುತ ಸುಪ್ರೀಂಕೋರ್ಟ್‌ಗೆ ಏಳು ಅರ್ಜಿಗಳನ್ನು ಸಲ್ಲಿಸಲಾಗಿದೆ.

ಮುಕ್ತ ಅಭಿವ್ಯಕ್ತಿಯನ್ನು ಬಗ್ಗುಬಡಿಯಲು ಬ್ರಿಟಿಷರು ಬಳಸಿದ ವಸಾಹತುಶಾಹಿ ಅವಧಿಯ ಕಾನೂನನ್ನು ಈ ಹಿಂದೆಯೂ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. 1962ರಲ್ಲಿ, ಕೇದಾರ ನಾಥ್ ಸಿಂಗ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ದೇಶದ್ರೋಹ ಸೆಕ್ಷನ್‌ ಅನ್ನು ಎತ್ತಿ ಹಿಡಿದಿತ್ತು.

ಆದರೆ, ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರವೂ ಈ ಕಾನೂನಿನ ಅವಶ್ಯಕತೆ ಇದೆಯೇ ಎಂದು ಈಗ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಈ ನಿಬಂಧನೆ ಪ್ರಶ್ನಿಸಿ ನಿವೃತ್ತ ಸೇನಾಧಿಕಾರಿ ಕರ್ನಾಟಕ ಮೂಲದ ಎಸ್‌ ಜಿ ಒಂಬತ್ತುಕೆರೆ ಅವರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಸರ್ವೋಚ್ಚ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಒಂಬತ್ತುಕೆರೆ ಅವರದ್ದಲ್ಲದೆ ಇತರೆ ಆರು ಅರ್ಜಿಗಳು ಕೂಡ ನ್ಯಾಯಾಲಯದಲ್ಲಿ ಬಾಕಿ ಇವೆ. ಪ್ರತಿ ಅರ್ಜಿಯ ವಿವರ, ಅದರ ಸ್ಥಿತಿಗತಿ ಹಾಗೂ ಅದರ ಪ್ರತಿಯನ್ನು ಕೆಳಗೆ ನೀಡಲಾಗಿದೆ.

ಮಣಿಪುರದ ಪತ್ರಕರ್ತರು

ಸಾಮಾಜಿಕ ಮಾಧ್ಯಮಗಳಲ್ಲಿ ತಾವು ಪ್ರಕಟಿಸಿದ ಪೋಸ್ಟ್‌ಗಳು ಮತ್ತು ವ್ಯಂಗ್ಯಚಿತ್ರಗಳಿಗೆ ಸಂಬಂಧಿಸಿದಂತೆ ಕಿಶೋರ್‌ಚಂದ್ರ ವಾಂಗ್‌ಚೆಮ್ಚಾ ಮತ್ತು ಕನ್ಹಯ್ಯ ಲಾಲ್ ಶುಕ್ಲಾ ಎಂಬ ಇಬ್ಬರು ಪತ್ರಕರ್ತರ ವಿರುದ್ಧ ದೂರು ದಾಖಲಿಸಲಾಗಿತ್ತು ಇದನ್ನು ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಸಂವಿಧಾನದ 19 (1) (ಎ) ವಿಧಿಯಡಿ ಒದಗಿಸಲಾದ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಸೆಕ್ಷನ್‌ 124 ಎ ಉಲ್ಲಂಘಿಸುತ್ತದೆ ಎಂದು ಅವರು ವಾದಿಸಿದ್ದಾರೆ.

ಸ್ಥಿತಿ: ಮನವಿಯ ಮೇರೆಗೆ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಈ ತಿಂಗಳ ಅಂತ್ಯದ ವೇಳೆಗೆ ಸರ್ಕಾರ ತನ್ನ ಪ್ರತಿ-ಅಫಿಡವಿಟ್ ಸಲ್ಲಿಸುವ ನಿರೀಕ್ಷೆ ಇದೆ.

ಪಿಯುಸಿಎಲ್‌

ದೇಶದ್ರೋಹ ಎಂಬುದು ರಾಜಕೀಯ ಅಪರಾಧವಾಗಿದ್ದು ಮೂಲತಃ ಅರಸೊತ್ತಿಗೆ ವಿರುದ್ಧದ ರಾಜಕೀಯ ದಂಗೆಗಳನ್ನು ಹತ್ತಿಕ್ಕಲು ಮತ್ತು ಬ್ರಿಟಿಷ್‌ ವಸಾಹತನ್ನು ನಿಯಂತ್ರಿಸಲು ಇದನ್ನು ಜಾರಿಗೊಳಿಸಲಾಯಿತು ಎಂಬುದು ಸರ್ಕಾರೇತರ ಸಂಸ್ಥೆ ಪೀಪಲ್‌ ಯೂನಿಯನ್‌ ಆಫ್‌ ಸಿವಿಲ್‌ ಲಿಬರ್ಟೀಸ್‌ನ (ಪಿಯುಸಿಎಲ್‌) ವಾದ. ಈ ನಿಬಂಧನೆ ಹಳೆಯ ಕಾಲದ್ದಾಗಿದ್ದು ಭಾರತದಂತಹ ಮುಕ್ತ ಪ್ರಜಾಪ್ರಭುತ್ವದಲ್ಲಿ ತನ್ನೆಲ್ಲಾ ಪ್ರಸ್ತುತತೆಯನ್ನು ಕಳೆದುಕೊಂಡಿದೆ. ಸ್ವತಂತ್ರ ಭಾರತದಲ್ಲಿ ಅದಕ್ಕೆ ಯಾವುದೇ ಸ್ಥಾನ ಇಲ್ಲ.

ಸ್ಥಿತಿ: ಅರ್ಜಿಯನ್ನು ಇನ್ನೂ ಆಲಿಸಿಲ್ಲ.

ನಿವೃತ್ತ ಸೇನಾಧಿಕಾರಿ ಎಸ್‌ ಜಿ ಒಂಬತ್ತುಕೆರೆ

ಕೇದಾರ ನಾಥ್ ಸಿಂಗ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ 1962ರಲ್ಲಿ ಎತ್ತಿಹಿಡಿದಿರುವ ಸೆಕ್ಷನ್ 124 ಎ ನಿಬಂಧನೆಯನ್ನು ಹೊಸದಾಗಿ ಪರಿಶೀಲನೆಗೊಳಪಡಿಸಬೇಕು ಎಂದು ಕರ್ನಾಟಕ ಮೂಲದ ನಿವೃತ್ತ ಮೇಜರ್‌ ಜನರಲ್‌ ಎಸ್‌ ಜಿ ಒಂಬತ್ತುಕೆರೆ ಮನವಿ ಸಲ್ಲಿಸಿದ್ದಾರೆ.

ಸಂವಿಧಾನದ 19 (1) (ಎ) ಅಡಿ ಒದಗಿಸಲಾದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇದು ಅಸಮಂಜಸವಾದ ನಿರ್ಬಂಧ ಹೇರಲಿದ್ದು ಮುಕ್ತ ಅಭಿವ್ಯಕ್ತಿ ಮೇಲೆ ಸಂವಿಧಾನಾತ್ಮಕವಾಗಿ ಅನುಮತಿಸಲಾಗದ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಸ್ಥಿತಿ: ಕೇಂದ್ರ ಸರ್ಕಾರ ಮತ್ತು ಭಾರತದ ಅಟಾರ್ನಿ ಜನರಲ್‌ ಕಚೇರಿಗೆ ನ್ಯಾಯಾಲಯ ನೋಟಿಸ್ ನೀಡಿದೆ. ವಿಚಾರಣೆಯ ಸಮಯದಲ್ಲಿ, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು “ಸರ್ಕಾರ ಅನೇಕ ಹಳೆಯ ಕಾನೂನುಗಳನ್ನು ರದ್ದುಗೊಳಿಸಿದ್ದರೂ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ದೇಶದ್ರೋಹ ಸೆಕ್ಷನ್‌ ಇನ್ನೂ ಅಸ್ತಿತ್ವದಲ್ಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಸಂಪಾದಕರ ಕೂಟ

ಸಂವಿಧಾನದ 19 (1) (ಎ) ಅಡಿ ಒದಗಿಸಲಾದ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಸೆಕ್ಷನ್ 124 ಎ ಉಲ್ಲಂಘಿಸುತ್ತಿದೆ ಎಂದು ಎಡಿಟರ್ಸ್‌ ಗಿಲ್ಡ್‌ ಆಫ್‌ ಇಂಡಿಯಾ (ಭಾರತೀಯ ಸಂಪಾದಕರ ಕೂಟ) ತನ್ನ ಅರ್ಜಿಯಲ್ಲಿ ತಿಳಿಸಿದೆ.

ಸ್ಥಿತಿ: ಈ ಅರ್ಜಿಯನ್ನುಎಸ್‌ಜಿ ಒಂಬತ್ತುಕೆರೆ ಅವರ ಅರ್ಜಿಯೊಂದಿಗೆ ಆಲಿಸಲು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ಪೀಠ ನಿರ್ಧರಿಸಿದೆ.

ಫೌಂಡೇಶನ್ ಫಾರ್‌ ಮೀಡಿಯಾ ಪ್ರೊಫೆಶನಲ್ಸ್‌

ಸಂಘಟನೆ ಸಲ್ಲಿಸಿರುವ ಮಧ್ಯಪ್ರವೇಶ ಅರ್ಜಿ “ದೇಶದ್ರೋಹ ಕಾನೂನು ವಸಾಹತುಶಾಹಿ ಆದೇಶವಾಗಿದೆ. ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಇದನ್ನು ರೂಪಿಸಲಾಗಿದ್ದು ಪ್ರಜಾಸತ್ತಾತ್ಮಕ ಅಂತಃಪ್ರಜ್ಞೆಯಿಂದಲ್ಲ ಎಂದು ಅದು ತಿಳಿಸಿದೆ.

"ಕ್ರಿಯೆಯಲ್ಲಿ ಮಾತ್ರವಲ್ಲದೆ ಚಿಂತನೆಯಲ್ಲಿಯೂ ಕೂಡ ತಮಗೆ ಭಾರತೀಯ ನಾಗರಿಕರು ಸಂಪೂರ್ಣ ನಿಷ್ಠೆ ತೋರಬೇಕು ಮತ್ತು ಅನುಸರಿಸಬೇಕು ಎಂಬುದನ್ನು ಖಚಿತ ಪಡಿಸಿಕೊಳ್ಳುವ ಬ್ರಿಟಿಷರ ಧೋರಣೆಯಿಂದಾಗಿ ದೇಶದ್ರೋಹ ಕುರಿತಾದ ಕಾನೂನು ವಿಕಸನಗೊಂಡಿತು ಎಂಬುದು ಸ್ಪಷ್ಟವಾಗಿದೆ…” ಎಂದು ಅದು ವಾದಿಸಿದೆ.

ಸ್ಥಿತಿ: ಮನವಿಯ ಮೇರೆಗೆ ನ್ಯಾಯಮೂರ್ತಿ ಯು ಯು ಲಲಿತ್ ನೇತೃತ್ವದ ಪೀಠ ನೋಟಿಸ್ ಜಾರಿಗೊಳಿಸಿದ್ದು ಪ್ರಕರಣ ಜುಲೈ 27 ರಂದು ವಿಚಾರಣೆಗೆ ಬರಲಿದೆ.

ಹಿರಿಯ ಪತ್ರಕರ್ತ ಶಶಿ ಕುಮಾರ್

2016ರಿಂದೀಚೆಗೆ ದೇಶದ್ರೋಹದ ಅಪರಾಧವನ್ನು ಹೊರಿಸುವುದರಲ್ಲಿ ನಾಟಕೀಯ ಜಿಗಿತ ಕಂಡುಬಂದಿದೆ ಎಂದು ಕುಮಾರ್‌ ಅವರು ಸಲ್ಲಿಸಿರುವ ಮಧ್ಯಪ್ರವೇಶ ಅರ್ಜಿ ತಿಳಿಸಿದೆ. ದೇಶದ್ರೋಹ ಕಾನೂನಿನಡಿ 2016ರಲ್ಲಿ ದಾಖಲಾದ 35 ಪ್ರಕರಣಗಳಿಗೆ ಹೋಲಿಸಿದರೆ 2019ರಲ್ಲಿ 93 ಪ್ರಕರಣಗಳು ದಾಖಲಾಗಿದ್ದು ಪ್ರಕರಣ ದಾಖಲಿಸುವ ಪ್ರಮಾಣ ಶೇ 165 ರಷ್ಟು ಹೆಚ್ಚಳವಾಗಿದೆ. ಆದರೆ ಶಿಕ್ಷೆಯ ಪ್ರಮಾಣ ಶೇಕಡಾ 3.3 ರಷ್ಟು ಕಡಿಮೆಯಾಗಿದೆ ಎಂದು ಅವರು ಅರ್ಜಿಯಲ್ಲಿ ವಿವರಿಸಿದ್ದಾರೆ.

ಸ್ಥಿತಿ: ಈ ಮನವಿಯನ್ನು ನ್ಯಾ. ಯು ಯು ಲಲಿತ್ ಅವರ ನೇತೃತ್ವದ ಪೀಠದ ಮುಂದೆ ಪಟ್ಟಿ ಮಾಡಲಾಗಿದ್ದು, ಮುಂದಿನ ಜುಲೈ 27 ರಂದು ವಿಚಾರಣೆ ನಡೆಯಲಿದೆ.

ಅರುಣ್ ಶೌರಿ ಮತ್ತು ಕಾಮನ್‌ ಕಾಸ್‌ ಆಫ್‌ ಇಂಡಿಯಾ

ಸೆಕ್ಷನ್ 124 ಎಯಿಂದಾಗಿ ಸಂವಿಧಾನದ 14 ಮತ್ತು 19 (1) (ಎ) ವಿಧಿಯ ಉಲ್ಲಂಘನೆಯಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಅರುಣ್‌ ಶೌರಿ ಮತ್ತು ಸರ್ಕಾರೇತರ ಸಂಸ್ಥೆ ಕಾಮನ್‌ ಕಾಸ್‌ ಆಫ್‌ ಇಂಡಿಯಾ ಸಲ್ಲಿಸಿರುವ ಅರ್ಜಿ ತಿಳಿಸಿದೆ. ದೇಶದ್ರೋಹದ ಅಪರಾಧ ಅಸ್ಪಷ್ಟವಾಗಿದ್ದು ಸಾಕಷ್ಟು ಸ್ಪಷ್ಟತೆಯೊಂದಿಗೆ ಅಪರಾಧವನ್ನು ವ್ಯಾಖ್ಯಾನಿಸಲು ಅದು ವಿಫಲವಾಗಿದೆ ಎಂದು ಅವರು ವಾದಿಸಿದ್ದಾರೆ. ಅಲ್ಲದೆ ನಿಬಂಧನೆಯಲ್ಲಿ ಬಳಸಲಾದ ನಿಂದನೆ, ದ್ವೇಷ, ಅವಿಧೇಯತೆ ಎಂಬ ಪದಗಳು ಅಸ್ಪಷ್ಟವಾಗಿವೆ ಎಂದು ತಿಳಿಸಲಾಗಿದೆ.

ಸ್ಥಿತಿ: ಮನವಿಯನ್ನು ನ್ಯಾಯಾಲಯ ಇನ್ನೂ ವಿಚಾರಣೆಗೆ ಪಟ್ಟಿ ಮಾಡಿಲ್ಲ.