ಸುದ್ದಿಗಳು

ದೇಶದ್ರೋಹ ಕಾನೂನು ಕುರಿತ ಸುಪ್ರೀಂ ಆದೇಶ ದುರ್ಬಲ, ಅದು ವಿವರವಾದ ತಾರ್ಕಿಕ ಆದೇಶ ನೀಡಬೇಕಿತ್ತು: ಸೌರಭ್ ಕಿರ್ಪಾಲ್

Bar & Bench

ದೇಶದ್ರೋಹ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಆದೇಶ ದುರ್ಬಲವಾಗಿದ್ದು ಅದು ತನ್ನ ಅಧಿಕಾರ ಚಲಾಯಿಸಲು ವಿಫಲವಾಗಿದೆ ಎಂದು ಹಿರಿಯ ನ್ಯಾಯವಾದಿ ಸೌರಭ್‌ ಕಿರ್ಪಾಲ್‌ ಅಭಿಪ್ರಾಯಪಟ್ಟಿದ್ದಾರೆ.

ʼಸಾಮಾಜಿಕ ಮಾಧ್ಯಮ ಮತ್ತು ವಾಕ್ ಸ್ವಾತಂತ್ರ್ಯʼ ಕುರಿತು ಆಕ್ಸ್‌ಫರ್ಡ್‌ ಮತ್ತು ಕೇಂಬ್ರಿಜ್‌ ಸೊಸೈಟಿ ಆಫ್ ಇಂಡಿಯಾ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತೆ ಮಾಯಾ ಮೀರ್‌ಚಾಂದನಿ ಅವರೊಂದಿಗೆ ಕೃಪಾಲ್‌ ಈ ವಿಚಾರ ಹಂಚಿಕೊಂಡರು.

ದೇಶದ್ರೋಹವನ್ನು ಅಪರಾಧೀಕರಿಸುವ ಐಪಿಸಿ ಸೆಕ್ಷನ್‌ 124 ಎ ತೆಗೆದುಹಾಕುವ ವಿಚಾರದಲ್ಲಿ ಕಾರ್ಯಾಂಗದಿಂದ ನಿರೀಕ್ಷೆ ಅಥವಾ ಭರವಸೆ ಇರಿಸಿಕೊಳ್ಳಲಾಗದು. ಹೀಗಾಗಿ ಸುಪ್ರೀಂ ಕೋರ್ಟ್‌ ತಾನೇ ಮುಂದಾಗಿ ಕಾನೂನಿಗೆ ಸಂಬಂಧಿಸಿದಂತೆ ವಿವರವಾದ ಮತ್ತು ತಾರ್ಕಿಕ ಆದೇಶ ನೀಡಬೇಕಿತ್ತು ಎಂದು ಕಿರ್ಪಾಲ್‌ ಅಭಿಪ್ರಾಯಪಟ್ಟರು.

ನಿಜಕ್ಕೂ ನನಗೆ ಇದರಿಂದ ದಿಗ್ಭ್ರಮೆಯಾಗಿದೆ. ಸುಪ್ರೀಂ ಕೋರ್ಟ್ ತನ್ನ ಅಧಿಕಾರ ಚಲಾಯಿಸಲು ವಿಫಲವಾಗಿದೆ ಎಂದು ನಾನು ಭಾವಿಸುತ್ತೇನೆ, ದೇಶದ್ರೋಹ ಕಾನೂನು ಏಕೆ ಕೆಟ್ಟದ್ದು ಎಂಬುದಕ್ಕೆ ಅದು ವಿವರವಾದ ಆದೇಶವನ್ನು ನೀಡಬೇಕಿತ್ತು. ಎಫ್‌ಐಆರ್‌ ದಾಖಲಿಸದಂತೆ. ಬಾಕಿ ಉಳಿದಿರುವ ವಿಚಾರಣೆಗಳನ್ನು ಮುನ್ನಡೆಸದಂತೆ ಸರ್ಕಾರಕ್ಕೆ ನಿರ್ದೇಶಿಸುವ ಬದಲಿಗೆ ಸುಪ್ರೀಂ ಕೋರ್ಟ್‌ ಸಡಿಲವಾದ ಆದೇಶ ನೀಡಿದೆ. ಸರ್ಕಾರ ಏನಾದರೂ ಮಾಡುತ್ತದೆ ಎಂದು ಎಂದಿಗೂ ಆಶಿಸಲು ಅಥವಾ ನಿರೀಕ್ಷಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.

ಕೆಲವೊಮ್ಮೆ ಇಂತಹ ಆದೇಶಗಳು ಭಾವೋದ್ರೇಕವನ್ನು ತಣಿಸಲು ಸಹಾಯಕ ಎಂದು ಕೂಡ ಅಭಿಪ್ರಾಯಪಟ್ಟ ಕಿರ್ಪಾಲ್‌ “ಆದರೆ ಸುಪ್ರೀಂ ಕೋರ್ಟ್‌ ಎದ್ದು ನಿಲ್ಲುವ ಸಂದರ್ಭ ಇದಾಗಿತ್ತು” ಎಂಬುದಾಗಿ ತಿಳಿಸಿದರು.

“ಇದನ್ನು ಮಹಾನ್‌ ಸಂಗತಿ, ವಾಕ್‌ ಸ್ವಾತಂತ್ರ್ಯದ ಜಯ ಎಂದು ಬಣ್ಣಿಸುತ್ತಿರುವಾಗ ನನಗನ್ನಿಸುವಂತೆ ಅದು ಸುಪ್ರೀಂ ಕೋರ್ಟ್‌ನ ಬಹುದೊಡ್ಡ ಸಾಧನೆಯೇನೂ ಅಲ್ಲ” ಎಂದು ತಿಳಿಸಿದ ಅವರು “ದೇಶದ್ರೋಹ ಕಾನೂನು ಏಕೆ ಕೆಟ್ಟದು ಎಂಬ ಕುರಿತು ಸುಪ್ರೀಂ ಕೋರ್ಟ್‌ ಸೂಕ್ತ ನಿಲುವು ತಳೆಯಬೇಕಿತ್ತು” ಎಂದು ಹೇಳಿದರು.

"ಅದು ಸರಿ ಇಲ್ಲದಿದ್ದರೆ, ಏಕೆ ಎಂದು ನಮಗೆ ತಿಳಿಸಿ! ಏಕೆಂದರೆ ಸುಪ್ರೀಂ ಕೋರ್ಟ್‌ನ ಪ್ರತಿಯೊಂದು ಕೆಲಸವೂ ನಮ್ಮ ನ್ಯಾಯಾಂಗ ಪಿರಮಿಡ್‌ ವ್ಯವಸ್ಥೆಯಲ್ಲಿ ಇತರ ನ್ಯಾಯಾಲಯಗಳಿಗೂ ಪಸರಿಸುತ್ತದೆ” ಎಂದು ಅವರು ಒತ್ತಾಯಿಸಿದರು.