Justices Abdul Nazeer and Krishna Murari

 
ಸುದ್ದಿಗಳು

ಹಿಂದೂ ಉತ್ತರಾಧಿಕಾರ ಕಾಯಿದೆಗೂ ಮುನ್ನ ಮರಣಿಸಿದ ವ್ಯಕ್ತಿಯ ಸ್ವಯಾರ್ಜಿತ ಆಸ್ತಿಯ ಮೇಲೆ ಪುತ್ರಿಗೆ ಹಕ್ಕಿದೆ: ಸುಪ್ರೀಂ

ತಾನು ಸ್ವತಃ ಸಂಪಾದನೆ ಮಾಡಿದ ಆಸ್ತಿಯ ಉಯಿಲು ಬರೆಯದೇ ಹಿಂದೂ ಪುರುಷ ಸಾವನ್ನಪ್ಪಿದರೆ ಅದು ವಾರಸುದಾರಿಕೆಯಿಂದ ದಕ್ಕುತ್ತದೆಯೇ ವಿನಾ ಉತ್ತರಜೀವಿತಾಧಿಕಾರದ ಕಾರಣಕ್ಕಲ್ಲ ಎಂದು ನ್ಯಾಯಾಲಯ ಹೇಳಿದೆ.

Bar & Bench

ಹಿಂದೂ ಉತ್ತರಾಧಿಕಾರ ಕಾಯಿದೆ-1956 ಅಸ್ತಿತ್ವಕ್ಕೆ ಬರುವುದಕ್ಕೂ ಮುನ್ನ ಹಿಂದೂ ವ್ಯಕ್ತಿಯು ಸ್ವಯಾರ್ಜಿತವಾಗಿ ಸಂಪಾದಿಸಿದ ಅಥವಾ ಭಾಗವಾಗಿದ್ದರಿಂದ ದೊರೆತ ಅಥವಾ ಕೌಟುಂಬಿಕ ಸ್ವತ್ತನ್ನು ಉಯಿಲು ಬರೆಯದೇ ಸಾವನ್ನಪ್ಪಿದರೆ ಅಂಥ ಆಸ್ತಿಯು ವಾರಸುದಾರಿಕೆಯಿಂದ (ಇನ್ಹೆರಿಟೆನ್ಸ್) ದಕ್ಕುತ್ತದೆಯೇ ವಿನಾ ಉತ್ತರಜೀವಿತಾಧಿಕಾರದ (ಸರ್ವೈವರ್‌ಶಿಪ್‌) ಕಾರಣಕ್ಕಲ್ಲ. ಈ ಸಂದರ್ಭದಲ್ಲಿ ಮೃತ ವ್ಯಕ್ತಿಯ ಪುತ್ರಿಯು ಆ ಆಸ್ತಿಯ ವಾರಸುದಾರಿಕೆ ಪಡೆಯಲು ಇತರೆ ದಾಯಾದಿಗಳಿಗಿಂತ (ಕೊಲ್ಯಾಟರಲ್ಸ್) ಆದ್ಯತೆಯ ಹಕ್ಕು ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ತೀರ್ಪು ನೀಡಿದೆ.

ಸ್ವಯಾರ್ಜಿತ ಆಸ್ತಿಯನ್ನು ಉಯಿಲು ಬರೆಯದೇ ಮಾರಪ್ಪ ಗೌಂಡರ್‌ ಎಂಬುವರು ಹಿಂದೂ ಉತ್ತರಾಧಿಕಾರ ಕಾಯಿದೆ ಜಾರಿಗೂ ಮುನ್ನ 1949ರಲ್ಲಿ ಸಾವನ್ನಪ್ಪಿದ್ದು, ಅವರ ಪುತ್ರಿ ಕುಪಾಯಿ ಅಮ್ಮಾಳ್‌ ಅವರು ಮುಂದೆ ಸಂತಾನವಿಲ್ಲದೆ ಅಗಲಿದರು. ಆಗ ಕುಪಾಯಿ ಅಮ್ಮಾಳ್‌ ಅವರು ಪಡೆದಿದ್ದ ತಂದೆಯ ಆಸ್ತಿಯನ್ನು ಮಾರಪ್ಪ ಗೌಂಡರ್‌ ಅವರ ತಮ್ಮ ರಾಮಸಾಮಿ ಗೌಂಡರ್‌ ಅವರ ಐವರು ಮಕ್ಕಳು ಐದನೇ ಒಂದಂಶದ ಪಾಲಿನಂತೆ ಹಂಚಿಕೊಂಡರು. ಮುಂದೆ ಈ ಐವರು ಮಕ್ಕಳಲ್ಲಿ ಒಬ್ಬರಾದ ತಂಗಮ್ಮಾಳ್‌ ಎನ್ನುವವರು ಆಸ್ತಿಯನ್ನು ಪಾಲುಮಾಡಿಕೊಳ್ಳುವ ಸಲುವಾಗಿ ದಾವೆ ಹೂಡಿದರು.

ಪ್ರಕರಣವನ್ನು ಅಲಿಸಿದ ವಿಚಾರಣಾ ನ್ಯಾಯಾಲಯವು. ಮಾರಪ್ಪ ಗೌಂಡರ್‌ ಹಿಂದೂ ಉತ್ತರಾಧಿಕಾರ ಕಾಯಿದೆ ಜಾರಿಗೂ ಮುನ್ನ ಏಪ್ರಿಲ್‌ 15, 1949ರಲ್ಲಿ ಸಾವನ್ನಪ್ಪಿದ್ದಾರೆ. ಹಾಗಾಗಿ, ವ್ಯಾಜ್ಯದಲ್ಲಿರುವ ಆಸ್ತಿಯು ರಾಮಸ್ವಾಮಿ ಗೌಂಡರ್‌ ಅವರ ಮಗನಿಗೆ ಉತ್ತರಜೀವಿತಾಧಿಕಾರ (ಸರ್ವೈವರ್‌ಶಿಪ್‌) ಅನ್ವಯ ಲಭ್ಯವಾಗುತ್ತದೆ. ಹಾಗಾಗಿ, ಅರ್ಜಿದಾರೆ ತಂಗಮ್ಮಾಳ್‌ ಅದರಲ್ಲಿ ಪಾಲು ಕೋರಿ ದಾವೆ ಹೂಡಲು ಯಾವುದೇ ಹೊಕ್ಕು ಹೊಂದಿರುವುದಿಲ್ಲ ಎಂದು ಹೇಳಿ ದಾವೆಯನ್ನು ವಿಲೇವಾರಿ ಮಾಡಿತು.

ಈ ಹಿನ್ನೆಲೆಯಲ್ಲಿ ಪ್ರಕರಣವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್‌ ಅಬ್ದುಲ್‌ ನಜೀರ್‌ ಮತ್ತು ಕೃಷ್ಣ ಮುರಾರಿ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಪ್ರಾಚೀನ ಕಾಲದ ಬರಹ, ಸ್ಮೃತಿ ಹಾಗೂ ನ್ಯಾಯಿಕ ಆದೇಶಗಳಲ್ಲಿ ಹಲವಾರು ಮಹಿಳಾ ಉತ್ತರಾಧಿಕಾರಿಗಳ ಹಕ್ಕುಗಳನ್ನು ಗುರುತಿಸಲಾಗಿದೆ. ಅದರಲ್ಲಿ ಪತ್ನಿ ಮತ್ತು ಮಗಳು ಅವರಲ್ಲಿ ಅಗ್ರಗಣ್ಯರಾಗಿತ್ತಾರೆ” ಎಂದು ಪೀಠವು ಹೇಳಿತು.

“ಈ ವಿಷಯದಲ್ಲಿ ಮಿತಾಕ್ಷರನ ಅಭಿಪ್ರಾಯಗಳು ತಪ್ಪಾಗಲಾರವು. ಸ್ತ್ರೀಯರು ಉತ್ತರಾಧಿಕಾರವನ್ನು ಪಡೆಯಲು ಅಸಮರ್ಥರು ಎಂಬ ದೃಷ್ಟಿಕೋನವನ್ನು ವಿಜ್ಞೇಶ್ವರರು ಸಹ ಎಲ್ಲಿಯೂ ಅನುಮೋದಿಸಿಲ್ಲ” ಎಂದು ಅಭಿಪ್ರಾಯಪಟ್ಟ ಪೀಠವು ತೀರ್ಪಿನಲ್ಲಿ ಹೀಗೆ ದಾಖಲಿಸಿತು:

ಹಿಂದೂ ಉತ್ತರಾಧಿಕಾರ ಕಾಯಿದೆ-1956 ಅಸ್ತಿತ್ವಕ್ಕೆ ಬರುವುದಕ್ಕೂ ಮುನ್ನ ಹಿಂದೂ ವ್ಯಕ್ತಿಯು ಸ್ವಯಾರ್ಜಿತವಾಗಿ ಸಂಪಾದಿಸಿದ ಅಥವಾ ಭಾಗವಾಗಿದ್ದರಿಂದ ದೊರೆತ ಅಥವಾ ಕೌಟುಂಬಿಕ ಸ್ವತ್ತನ್ನು ಉಯಿಲು ಬರೆಯದೇ ಸಾವನ್ನಪ್ಪಿದರೆ ಅಂಥ ಆಸ್ತಿಯು ವಾರಸುದಾರಿಕೆಯಿಂದ (ಇನ್ಹೆರಿಟೆನ್ಸ್) ದಕ್ಕುತ್ತದೆಯೇ ವಿನಾ ಉತ್ತರಜೀವಿತಾಧಿಕಾರದ (ಸರ್ವೈವರ್‌ಶಿಪ್‌) ಕಾರಣಕ್ಕಲ್ಲ. ಈ ಸಂದರ್ಭದಲ್ಲಿ ಮೃತ ವ್ಯಕ್ತಿಯ ಪುತ್ರಿಯು ಆ ಆಸ್ತಿಯ ವಾರಸುದಾರಿಕೆ ಪಡೆಯಲು ಇತರೆ ದಾಯಾದಿಗಳಿಗಿಂತ (ಕೊಲ್ಯಾಟರಲ್ಸ್) ಆದ್ಯತೆಯ ಹಕ್ಕು ಹೊಂದಿರುತ್ತಾರೆ.

ಪ್ರಸ್ತುತ ಪ್ರಕರಣದಲ್ಲಿ ವ್ಯಾಜ್ಯಕ್ಕೆ ಕಾರಣವಾಗಿರುವ ಆಸ್ತಿಯು, ಇಡೀ ಕುಟುಂಬವು ಅವಿಭಕ್ತವಾಗಿಯೇ ಇದ್ದರೂ ಸಹ ಮಾರಪ್ಪ ಗೌಂಡರ್‌ ಅವರು ಸ್ವಯಾರ್ಜಿತವಾಗಿ ಮಾಡಿರುವುದಾಗಿದೆ. ಮಾರಪ್ಪ ಗೌಂಡರ್ ಉಯಿಲು ಬರೆಯದೇ ಹೋದರೂ ಸಹ ಇದನ್ನು ಅವರ ಪುತ್ರಿ ಕುಪಾಯಿ ಅಮ್ಮಾಳ್‌ ಅವರು ವಾರಸುದಾರಿಕೆಯಿಂದಾಗಿ ಪಡೆಯುತ್ತಾರೆಯೇ ಹೊರತು ಅದು ಉತ್ತರಜೀವಿತಾಧಿಕಾರದ ಮೂಲಕ (ಬೇರೆಯವರಿಗೆ) ದಕ್ಕುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತು.

ಮುಂದುವರೆದು, ಸಂತಾನ ರಹಿತ ಕುಪಾಯಿ ಅಮ್ಮಾಳ್‌ ಅವರ ನಿಧನಾನಂತರ ಅವರ ಆಸ್ತಿಯ ಹಕ್ಕುದಾರರು ಯಾರಾಗಬೇಕು ಎನ್ನುವ ಪ್ರಶ್ನೆಯನ್ನು ನ್ಯಾಯಾಲಯ ಪರಿಗಣಿಸಿತು. ಇಂತಹ ಸನ್ನಿವೇಶಗಳ ಬಗ್ಗೆ ವ್ಯತಿರಿಕ್ತ ಅಭಿಪ್ರಾಯಗಳು ಪಾರಂಪರಿಕ ಹಿಂದೂ ಕಾನೂನುಗಳಲ್ಲಿ ಇರುವುದನ್ನು ಪೀಠವು ಗಮನಿಸಿತು. ಅದೇನೇ ಇದ್ದರೂ, ಪ್ರಸಕ್ತ ಪ್ರಕರಣದಲ್ಲಿ ಕುಪಾಯಿ ಅಮ್ಮಾಳ್‌ ಅವರು ಹಿಂದೂ ಉತ್ತರಾಧಿಕಾರ ಕಾಯಿದೆಯ ಜಾರಿ ನಂತರ ಮರಣವನ್ನಪ್ಪಿರುವುದರಿಂದ ಈ ಪಾರಂಪರಿಕ ಕಾನೂನುಗಳ ಅಭಿಪ್ರಾಯವು ಇಲ್ಲಿ ಪರಿಣಾಮ ಬೀರುವುದಿಲ್ಲ ಎನ್ನುವುದನ್ನು ನ್ಯಾಯಾಲಯವು ಹೇಳಿತು.

ಅಂತಿಮವಾಗಿ ನ್ಯಾಯಾಲಯವು ರಾಮಸ್ವಾಮಿ ಗೌಂಡರ್‌ ಅವರ ಪುತ್ರಿಯರು ಸಹ ವ್ಯಾಜ್ಯಕ್ಕೆ ಕಾರಣವಾಗಿರುವ ಆಸ್ತಿಯಲ್ಲಿ ಕ್ಲಾಸ್‌-1 ವಾರಸುದಾರರಾಗುತ್ತಾರೆ. ಆ ಮೂಲಕ ಅವರೂ ಸಹ ಐದನೇ ಒಂದಂಶದ ಪಾಲಿಗೆ ಆಸ್ತಿಯಲ್ಲಿ ಹಕ್ಕುದಾರರಾಗುತ್ತಾರೆ ಎಂದು ತೀರ್ಪು ನೀಡಿತು.