ಅತ್ಯಾಚಾರ ಸಂತ್ರಸ್ತೆಯ ಪರೀಕ್ಷೆ ವೇಳೆ ವೀರ್ಯ ಪತ್ತೆಯಾಗಿಲ್ಲ ಎಂದ ಮಾತ್ರಕ್ಕೆ ಆರೋಪಿಯು ಸಂತ್ರಸ್ತೆಯ ಮೇಲೆ ಲೈಂಗಿಕ ದೌಜನ್ಯ ಎಸಗಿಲ್ಲ ಎಂದರ್ಥವಲ್ಲ ಎಂದು ಆಂಧ್ರಪ್ರದೇಶ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆಯ ಸೆಕ್ಷನ್ 3ರ ಪ್ರಕಾರ, ಶಿಶ್ನ ಸಂಭೋಗದ ಲೈಂಗಿಕ ದೌರ್ಜನ್ಯದ ಅಪರಾಧವನ್ನು ನಿರೂಪಿಸುವಾಗ ವೀರ್ಯ ಸ್ಖಲನ ಅಗತ್ಯವಾದ ಪೂರ್ವೇಪೇಕ್ಷಿತ ಸಂಗತಿಯಲ್ಲ ಎಂದು ನ್ಯಾ. ಚೀಕಟಿ ಮಾನವೇಂದ್ರನಾಥ್ ರಾಯ್ ಸ್ಪಷ್ಟಪಡಿಸಿದ್ದಾರೆ.
ವೀರ್ಯ ಸ್ಖಲನವಾಗದಿದ್ದರೂ ಅಪ್ರಾಪ್ತ ಬಾಲಕಿಯ ಯೋನಿಯೊಳಗೆ ಶಿಶ್ನ ಅಥವಾ ಯಾವುದೇ ವಸ್ತು ಇಲ್ಲವೇ ಆರೋಪಿಯ ದೇಹದ ಅಂಗ ಪ್ರವೇಶಿಸಿದೆ ಎಂದು ಸಾಕ್ಷ್ಯಗಳ ಮೂಲಕ ತಿಳಿದು ಬಂದರೆ ಅದು ಅಂಗ ಪ್ರವೇಶಿಕೆಯ (ಪೆನೆಟ್ರೇಟಿವ್ ಸೆಕ್ಸ್) ಲೈಂಗಿಕ ದೌರ್ಜನ್ಯ ಅಪರಾಧವಾಗುತ್ತದೆ ಎಂದು ತೀರ್ಪು ಹೇಳಿದೆ.
ಆ ಮೂಲಕ ಪೋಕ್ಸೊ ಕಾಯಿದೆ ಮತ್ತು ಐಪಿಸಿ ಸೆಕ್ಷನ್ 376(2)(i) ಅಡಿಯಲ್ಲಿ ಶಿಕ್ಷೆ ನೀಡಿದ್ದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿತು. ಆರೋಪಿಗೆ 10 ವರ್ಷಗಳ ಕಠಿಣ ಸಜೆ ಮತ್ತು ₹ 5,000 ದಂಡ ವಿಧಿಸಿದ್ದ ಕೆಳ ನ್ಯಾಯಾಲಯದ ಆದೇಶವನ್ನು ಅದು ಎತ್ತಿ ಹಿಡಿಯಿತು.