Karnataka High Court 
ಸುದ್ದಿಗಳು

ಆನ್‌ಲೈನ್‌ ಶಿಕ್ಷಣ ನಿರಾಕರಿಸುತ್ತಿರುವ ಶಾಲೆಗಳ ಪಟ್ಟಿ ನೀಡಿ: ಕರ್ನಾಟಕ ಹೈಕೋರ್ಟ್ ಎಚ್ಚರಿಕೆ

ಒಂದು ಹಂತದಲ್ಲಿ ನ್ಯಾಯಾಲಯವು "ಹೈಕೋರ್ಟ್ ಆದೇಶ ಉಲ್ಲಂಘಿಸಿದ ಶಾಲೆಗಳ ಪಟ್ಟಿ ನೀಡಿ. ಪೋಷಕರ ಅಹವಾಲು ಪರಿಗಣಿಸದ ಶಾಲೆಗಳ ಬಗ್ಗೆ ಮಾಹಿತಿ ಇದೆಯೇ ?” ಎಂದು ಪ್ರಶ್ನಿಸಿತು.

Bar & Bench

ಪೋಷಕರು ಶುಲ್ಕ ಪಾವತಿಸುತ್ತಿಲ್ಲ ಎಂಬ ನೆಪವೊಡ್ಡಿ ಆನ್‌ಲೈನ್‌ ಶಿಕ್ಷಣ ನೀಡಲು ನಿರಾಕರಿಸುತ್ತಿರುವ ಕೆಲ ಶಾಲೆಗಳ ವಿರುದ್ಧ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಕಿಡಿಕಾರಿದೆ. ಆನ್‌ಲೈನ್‌ ಶಿಕ್ಷಣ ನಿರಾಕರಿಸುವುದು ಸೂಕ್ತವಲ್ಲ. ಆನ್‌ಲೈನ್‌ ಐಡಿಗಳನ್ನು ಬ್ಲಾಕ್‌ ಮಾಡಿದ ಶಾಲೆಗಳ ವಿರುದ್ಧ ದೂರು ದಾಖಲಿಸಲು ಅವಕಾಶ ಕೊಡಲಾಗುವುದು ಎಂದ ನ್ಯಾಯಾಲಯ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲೂ ಅನುಮತಿ ನೀಡಿತು.

ಕಳೆದ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಹಲವು ಖಾಸಗಿ ಶಾಲೆಗಳು ಉಲ್ಲಂಘಿಸಿ ಆನ್‌ಲೈನ್‌ ಐಡಿ ಬ್ಲಾಕ್‌ ಮಾಡಿದ್ದವು. ಅಂತಹ ಶಾಲೆಗಳ ವಿರುದ್ಧ ದೂರು ನೀಡುವುದರ ಜೊತೆಗೆ ಆ ಶಾಲೆಗಳ ವಿವರವನ್ನೂ ಸಲ್ಲಿಸಲು ನ್ಯಾಯಾಲಯ ಸೂಚಿಸಿದೆ.

ಪೂರ್ಣಾವಧಿ ಬೋಧನೆ ನಡೆಯದೇ ಇರುವುದರಿಂದ ಆನ್‌ಲೈನ್‌ ಮೂಲಕವೇ ಶಿಕ್ಷಣ ನೀಡುತ್ತಿರುವುದರಿಂದ ಶೇ 70ರಷ್ಟು ಶುಲ್ಕ ಮಾತ್ರ ಸ್ವೀಕರಿಸುವಂತೆ ಖಾಸಗಿ ಶಾಲೆಗಳಿಗೆ ಹೈಕೋರ್ಟ್‌ ಈ ಹಿಂದೆ ನಿರ್ದೇಶನ ನೀಡಿತ್ತು. ಸರ್ಕಾರ, ಪೋಷಕರು ಹಾಗೂ ಖಾಸಗಿ ಶಾಲೆಗಳೊಂದಿಗೆ ಚರ್ಚಿಸಿ ಈ ಆದೇಶ ನೀಡಲಾಗಿತ್ತು. ಇದಕ್ಕೆ ಖಾಸಗಿ ಶಾಲೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಸಂಬಂಧ ಮಧ್ಯಂತರ ಆದೇಶ ನೀಡಿದ್ದ ಹೈಕೋರ್ಟ್‌ ಬಲವಂತದ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ಸೂಚಿಸಿತ್ತು. ಮತ್ತೊಂದೆಡೆ ಖಾಸಗಿ ಶಾಲೆಗಳು ಕೂಡ ಪೋಷಕರ ಅಹವಾಲನ್ನು ಕೇಳಬೇಕು ಎಂದಿತ್ತು. ಆದರೆ ಶಾಲೆಗಳು ಪೋಷಕರ ಅಹವಾಲನ್ನು ಸ್ವೀಕರಿಸಿರಲಿಲ್ಲ ಇತ್ತ ಹೈಕೋರ್ಟ್‌ ಆದೇಶದಿಂದಾಗಿ ಸರ್ಕಾರ ಕೂಡ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ ಎಂಬುದಾಗಿ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಏಕಸದಸ್ಯ ಪೀಠಕ್ಕೆ ಮಂಗಳವಾರ ತಿಳಿಸಿದರು.

ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣ ಕುರಿತು ಪ್ರಸ್ತಾಪಿಸಿದ ಅವರು “ಸಂಕಷ್ಟದ ಸಮಯದಲ್ಲಿ ಮಕ್ಕಳು ಮತ್ತು ಪೋಷಕರ ಹಿತ ಕಾಪಾಡಬೇಕಿದ್ದು ಹೀಗಾಗಿ ಖಾಸಗಿ ಶಾಲೆಗಳ ಶುಲ್ಕ ನಿಗದಿಗೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ಯೋಚಿಸಲಾಗಿದೆ. ಇದು ನಿರ್ದಿಷ್ಟ (ಕೋವಿಡ್‌) ಸಂಕಷ್ಟದ ಅವಧಿಗೆ ಮಾತ್ರ” ಎಂದರು.

ಕೋವಿಡ್‌ನಿಂದಾಗಿ ಮಕ್ಕಳ ಪೋಷಕಕರು ಸಂಪೂರ್ಣ ಶುಲ್ಕ ನೀಡುವ ಸ್ಥಿತಿಯಲ್ಲಿಲ್ಲ. ಇದು ಸರ್ಕಾರ ಹಾಗೂ ಖಾಸಗಿ ಶಾಲೆಗಳ ನಡುವಿನ ಜಗಳವಲ್ಲ. ಪೋಷಕರ ಹಿತ ಮುಖ್ಯ ಎಂದ ಅವರು ಸಮಿತಿಯಲ್ಲಿ ಖಾಸಗಿ ಶಾಲೆ ಹಾಗೂ ಪೋಷಕರ ಪ್ರತಿನಿಧಿಗಳು ಇರಲಿದ್ದಾರೆ ಎಂಬುದಾಗಿ ಮಾಹಿತಿ ನೀಡಿದರು.

ಕೋವಿಡ್‌ ನಿಂದಾಗಿ ಪೋಷಕರು ಸಂಕಷ್ಟದಲ್ಲಿದ್ದು ವಿದ್ಯಾರ್ಥಿಗಖಳ ಹಿತದೃಷ್ಟಿಯಿಂದ ಕೂಡ ಸರ್ಕಾರ ಅರ್ಜಿ ಸಲ್ಲಿಸಿದೆ. ಎರಡೂ ಕಡೆಯ ಮನವಿ ಆಲಿಸಿ ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿಗಳ ಸಮಿತಿ ಶಿಫಾರಸುಗಳನ್ನು ಮಾಡಲಿದೆ. ಅದನ್ನು ಹೈಕೋರ್ಟ್‌ಗೆ ಮಂಡಿಸಲಾಗುವುದು. ಕೋವಿಡ್‌ ಸಂದರ್ಭದಲ್ಲಿ ಖಾಸಗಿ ಶಾಲೆಗಳು ಕೂಡ ಸ್ಪಂದಿಸಬೇಕು” ಎಂದು ಎಜಿ ನಾವದಗಿ ವಾದಿಸಿದರು.

ಈ ಹಂತದಲ್ಲಿ ನ್ಯಾಯಾಲಯ “… ಹೈಕೋರ್ಟ್‌ ಆದೇಶ ಉಲ್ಲಂಘಿಸಿದ ಶಾಲೆಗಳ ಪಟ್ಟಿ ನೀಡಿ. ಪೋಷಕರ ಅಹವಾಲು ಪರಿಗಣಿಸದ ಶಾಲೆಗಳ ಬಗ್ಗೆ ಮಾಹಿತಿ ಇದೆಯೇ ?” ಎಂದು ಪ್ರಶ್ನಿಸಿತು.

ಹಲವು ಖಾಸಗಿ ಶಾಲೆಗಳು ಆದೇಶ ಉಲ್ಲಂಘಿಸಿದ್ದು ಬಿಇಒಗಳ ಬಳಿ ಅಂತಹ ಶಾಲೆಗಳ ವಿವರ ಇದೆ. ಹೈಕೋರ್ಟ್‌ ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಮಕ್ಕೆ ಅನುಮತಿ ಕೊಡಿ ಎಂದು ನಾವದಗಿ ಮನವಿ ಮಾಡಿದರು.

ಆದರೆ ಖಾಸಗಿ ಶಾಲೆಗಳ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಉದಯ್‌ ಹೊಳ್ಳ “ಬೋಧಕರು, ಸಿಬ್ಬಂದಿಗೆ ವೇತನ ಪಾವತಿಸುತ್ತಿದ್ದೇವೆ. ಹಲವು ಅಂತರರಾಷ್ಟ್ರೀಯ ಮಟ್ಟದ ಶಾಲೆಗಳಿದ್ದು ಈ ಶಾಲೆಗಳ ಪೋಷಕರು ಶುಲ್ಕ ಪಾವತಿಸಲು ಸಿದ್ಧರಿದ್ದಾರೆ. ಹೀಗಾಗಿ ಸಮಿತಿ ರಚನೆ ಪ್ರಸ್ತಾಪಕ್ಕೆ ನಮ್ಮ ವಿರೋಧ ಇದೆ. ಎಂದರು.

ಕೋವಿಡ್‌ ನಡುವೆಯೂ ವೇತನ ಪಾವತಿಸಬೇಕು. ಈಗಾಗಲೇ ಪೂರ್ಣ ವೇತನ ಪಾವತಿಸಲಾಗುತ್ತಿದೆ. ಸುಪ್ರೀಂಕೋರ್ಟ್‌ ಆದೇಶದಂತೆ ಶುಲ್ಕ ನಿಗದಿಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ” ಎಂದು ಅವರು ವಿವರಿಸಿದರು.

ವಾದ ಆಲಿಸಿದ ನ್ಯಾಯಾಲಯ ಮಧ್ಯಂತರ ಅರ್ಜಿ ಕುರಿತಾದ ವಿಚಾರಣೆಯನ್ನು ಮುಕ್ತಾಯಗೊಳಿಸಿತು. ಖಾಸಗಿ ಶಾಲೆಗಳು ಸಲ್ಲಿಸಿದ್ದ ಮುಖ್ಯ ಅರ್ಜಿಗಳ ವಿಚಾರಣೆ ಬಾಕಿ ಇದ್ದು ಇದಕ್ಕೆ ಸಂಬಂಧಿಸಿದ ಲಿಖಿತ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಪೀಠ ಸೂಚಿಸಿದೆ. ಅದರೊಂದಿಗೆ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.