Aditya Sondhi
Aditya Sondhi 
ಸುದ್ದಿಗಳು

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಯಾಗಲು ನೀಡಿದ್ದ ಸಮ್ಮತಿ ಹಿಂಪಡೆದ ಹಿರಿಯ ವಕೀಲ ಆದಿತ್ಯ ಸೋಂಧಿ

Bar & Bench

ಕಳೆದ ವರ್ಷ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆಯುವುದಕ್ಕೆ ಸಂಬಂಧಿಸಿದಂತೆ ನೀಡಿದ್ದ ಸಮ್ಮತಿಯನ್ನು ಹಿರಿಯ ವಕೀಲ ಆದಿತ್ಯ ಸೋಂಧಿ ಹಿಂಪಡೆದಿದ್ದಾರೆ.

“ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡುವುದಕ್ಕೆ ಸಂಬಂಧಿಸಿದಂತೆ ನನ್ನ ಹೆಸರನ್ನು ಶಿಫಾರಸ್ಸು ಮಾಡಿ ಒಂದು ವರ್ಷವಾಗಿದ್ದು, ನನ್ನ ಹೆಸರನ್ನು ಕೊಲಿಜಿಯಂ ಪುನರುಚ್ಚರಿಸಿ ಐದು ತಿಂಗಳಾಗಿದೆ. ಈ ಹಿನ್ನೆಲೆಯಲ್ಲಿ ನನ್ನ ಒಪ್ಪಿಗೆಯನ್ನು ಹಿಂಪಡೆಯುತ್ತಿರುವುದಾಗಿ ತಿಳಿಸಿ ಫೆಬ್ರವರಿ 4ರಂದು ಕೊಲಿಜಿಯಂಗೆ ಪತ್ರ ಬರೆದಿದ್ದೇನೆ” ಎಂದು ಸೋಂಧಿ ಅವರು “ಬಾರ್‌ ಅಂಡ್‌ ಬೆಂಚ್”ಗೆ ತಿಳಿಸಿದ್ದಾರೆ.

2021ರ ಫೆಬ್ರವರಿ 4ರಂದು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಸೋಂಧಿ, ರಾಜೇಂದ್ರ ಬಾದಾಮಿಕರ್‌ ಮತ್ತು ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್‌ ಅವರನ್ನು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಶಿಫಾರಸ್ಸು ಮಾಡಿತ್ತು. ಮಾರ್ಚ್‌ 25ರಂದು ಬಾದಾಮಿಕರ್‌ ಮತ್ತು ಮೊಹಿಯುದ್ದೀನ್‌ ಅವರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿದ್ದು, ಸೋಂಧಿ ಅವರ ಹೆಸರು ಕಡತದಲ್ಲೇ ಉಳಿದಿತ್ತು. ಸೆಪ್ಟೆಂಬರ್‌ 1ರ ಸಭೆಯ ಬಳಿಕ ಕೊಲಿಜಿಯಂ ಮತ್ತೊಮ್ಮೆ ಸೋಂಧಿ ಅವರ ಹೆಸರನ್ನು ಪುನರುಚ್ಚರಿಸಿತ್ತು.

2014ರಲ್ಲಿ ಸೋಂಧಿ ಅವರನ್ನು ಹಿರಿಯ ವಕೀಲರನ್ನಾಗಿ ನೇಮಕ ಮಾಡಲಾಗಿತ್ತು. 1998ರಲ್ಲಿ ವಕೀಲರಾಗಿ ನೋಂದಣಿ ಮಾಡಿಸಿದ್ದ ಸೋಂಧಿ ಅವರು ಹಿರಿಯ ವಕೀಲ ಉದಯ್‌ ಹೊಳ್ಳ ಅವರ ಬಳಿ ಕೆಲಸ ಮಾಡಿದ್ದರು.

ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಪದವೀಧರರಾದ ಸೋಂಧಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಪಿಎಚ್‌.ಡಿ ಪಡೆದಿದ್ದಾರೆ. ಇದಕ್ಕೂ ಮುನ್ನ ಸೋಂಧಿ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 2016ರಲ್ಲಿ ಸೋಂಧಿ ಅವರು ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ನೇಮಕವಾಗಿದ್ದರು.