Supreme Court Lawyers 
ಸುದ್ದಿಗಳು

ನ್ಯಾಯಮೂರ್ತಿಗಳಿಗೆ ಲಂಚ ನೀಡಲು ಕಕ್ಷಿದಾರರಿಂದ ಹಣ ಪಡೆದ ಆರೋಪ: ಸುಪ್ರೀಂ ಮೊರೆ ಹೋದ ಹಿರಿಯ ವಕೀಲ

ಪ್ರಕರಣ ರದ್ದುಗೊಳಿಸಲು ತೆಲಂಗಾಣ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಹಿರಿಯ ವಕೀಲ ವೇದುಲ ಅವರು ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಪೀಠ ತೆಲಂಗಾಣ ಸರ್ಕಾರಕ್ಕೆ ನೋಟಿಸ್ ನೀಡಿದೆ.

Bar & Bench

ಅನುಕೂಲಕರ ಆದೇಶ ಪಡೆಯುವುದಕ್ಕಾಗಿ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಲಂಚ ನೀಡಬೇಕಿದೆ ಎಂದು ಕಕ್ಷಿದಾರರಿಂದ ₹ 7 ಕೋಟಿ ಲಂಚ ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆ ಪ್ರಶ್ನಿಸಿ ಹಿರಿಯ ವಕೀಲ ವೇದುಲಾ ವೆಂಕಟರಾಮನ್ ಸಲ್ಲಿಸಿರುವ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಸೋಮವಾರ ತೆಲಂಗಾಣ ಸರ್ಕಾರಕ್ಕೆ ಸೂಚಿಸಿದೆ.

ಪ್ರಕರಣ ರದ್ದುಗೊಳಿಸಲು ತೆಲಂಗಾಣ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ವೇದುಲ ಅವರು ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ತೆಲಂಗಾಣ ಸರ್ಕಾರಕ್ಕೆ ನೋಟಿಸ್ ನೀಡಿದೆ.

ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್‌ನಲ್ಲಿ ಯಾವುದೇ ಪ್ರಾಥಮಿಕ ಪುರಾವೆಗಳಿರದೆ ಕೇವಲ ಆರೋಪಗಳಿದ್ದು ಅವು ಅಸ್ಪಷ್ಟ ಮತ್ತು ಸಾಮಾನ್ಯೀಕೃತ ಆರೋಪಗಳಾಗಿವೆ ಎಂದು ವೇದುಲ ಅವರು ವಾದಿಸಿದ್ದಾರೆ.

ಆದರೆ ಪ್ರಕರಣ ನಡೆಸಲು ವಿಫಲರಾದ ವೆಂಕಟರಾಮನ್‌ ಅವರು ಪಡೆದಿರುವ ಹಣವನ್ನೂ ಹಿಂತಿರುಗಿಸಿಲ್ಲ. ಅಲ್ಲದೆ ತಮ್ಮ ವಿರುದ್ಧ ಅವರು ಜಾತಿ ನಿಂದನೆ ಮಾಡಿದ್ದು ತಮ್ಮ ಕುಟುಂಬಕ್ಕೆ ಧಕ್ಕೆ ತರುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರುದಾರರು ಆರೋಪಿಸಿದ್ದರು.

ಅಂತೆಯೇ ಐಪಿಸಿ ಸೆಕ್ಷನ್‌ 406 (ಕ್ರಿಮಿನಲ್ ಉದ್ದೇಶದ ವಿಶ್ವಾಸದ್ರೋಹ), 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ನೀಡುವಂತೆ ಕುಮ್ಮಕ್ಕು ನೀಡುವುದು) 504 (ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್‌ ಬೆದರಿಕೆ) ಹಾಗೂ ಎಸ್‌ಸಿಎಸ್‌ಟಿ ಕಾಯಿದೆಯ ವಿವಿಧ ಸೆಕ್ಷನ್‌ಗಳಡಿ ವೆಂಕಟರಾಮನ್‌ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ತಮ್ಮ ವಿರುದ್ಧ ದಾಖಲಿಸಿರುವ ಕ್ರಿಮಿನಲ್‌ ಮೊಕದ್ದಮೆ ರದ್ದುಗೊಳಿಸುವಂತೆ ಕೋರಿ ವೆಂಕಟರಾಮನ್‌ ಅವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ತೆಲಂಗಾಣ ಹೈಕೋರ್ಟ್‌ ಆರೋಪಗಳು ಗಂಭೀರವಾಗಿದ್ದು ತನಿಖೆ ಅಗತ್ಯವಿದೆ ಎಂದಿತ್ತು.

"ಈ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಲಂಚ ನೀಡಲು ಹಣ ಪಡೆಯಲಾಗಿದೆ ಎಂಬ ಆರೋಪ ನ್ಯಾಯಾಂಗ ಸ್ವಾತಂತ್ರ್ಯದ ಮೇಲೆ ಗಂಭೀರ ಅನುಮಾನ ಉಂಟುಮಾಡುತ್ತದೆ ಮತ್ತು ನ್ಯಾಯದಾನವು ಮಾರಾಟಕ್ಕಿದೆ ಎಂಬುದನ್ನು ಸೂಚಿಸುತ್ತದೆ. ಅಂತಹ ಗಂಭೀರ ಆರೋಪಗಳನ್ನು ತನಿಖೆ ಮಾಡಬೇಕಾಗಿದೆ" ಎಂದು  ಹೈಕೋರ್ಟ್ ನ್ಯಾಯಮೂರ್ತಿ ಕೆ.ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದರು.

ಆದರೆ ಇದೇ ವೇಳೆ, ವೇದುಲಾ ವೆಂಕಟರಾಮನ್‌ ಅವರ ವಿರುದ್ಧ ದೂರುದಾರರಾದ ಕಕ್ಷೀದಾರರು ಮಾಡಿರುವ ಕೆಲ ಆರೋಪಗಳು ವಿಪರೀತ ಉತ್ಪ್ರೇಕ್ಷೆಯಿಂದ ಕೂಡಿವೆ ಎಂದಿದ್ದ ಹೈಕೋರ್ಟ್ ಅವರಿಗೆ ಬಂಧನದಿಂದ ರಕ್ಷಣೆ ನೀಡಿತ್ತು. ಇತ್ತ ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ವೆಂಕಟರಾಮನ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವೆಂಕಟರಾಮನ್ ಪರ ಹಿರಿಯ ವಕೀಲ ನಿರಂಜನ್ ರೆಡ್ಡಿ ಮತ್ತು ವಕೀಲರಾದ ಮನದೀಪ್ ಕಲ್ರಾ ಮತ್ತು ಅನುಷ್ನಾ ಶತಪತಿ ವಾದ ಮಂಡಿಸಿದರು.