Kapil Sibal  
ಸುದ್ದಿಗಳು

ಕಾಂಗ್ರೆಸ್ ತೊರೆದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್: ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯಸಭೆಗೆ ನಾಮಪತ್ರ ಸಲ್ಲಿಕೆ

ಬುಧವಾರ ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಸಿಬಲ್ ಮಾತನಾಡಿದರು.

Bar & Bench

ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ಬುಧವಾರ ಕಾಂಗ್ರೆಸ್ ತೊರೆದಿದ್ದು ಸಮಾಜವಾದಿ ಪಕ್ಷದ ಬೆಂಬಲ ಪಡೆದು ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಕಾಂಗ್ರೆಸ್‌ ಮಾಜಿ ಸಂಸದರಾದ ಅವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಸಂಸದ ರಾಮ್ ಗೋಪಾಲ್ ಯಾದವ್ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಮೇ 16ರಂದೇ ತಾವು ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿರುವುದಾಗಿ ತಿಳಿಸಿದರು.

ಲಖನೌದಲ್ಲಿ ಅಖಿಲೇಶ್‌ ಅವರನ್ನು ಸಿಬಲ್‌ ಭೇಟಿಯಾದರು. ನಾಮಪತ್ರ ಸಲ್ಲಿಸುವ ವೇಳೆ ಅಖಿಲೇಶ್‌ ಅವರು ಸಿಬಲ್‌ ಜೊತೆಗಿದ್ದರು. ರಾಜ್ಯಸಭಾ ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದೆ. ರಾಜ್ಯಸಭೆಯಲ್ಲಿ ಸಿಬಲ್ ಅವರ ಅಧಿಕಾರಾವಧಿ ಜುಲೈ 4ಕ್ಕೆ ಕೊನೆಗೊಳ್ಳಲಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ಸಮಾಜವಾದಿ ನಾಯಕ (ಈಗ ಪಕ್ಷದ ಹಿರಿಯ ನಾಯಕರೊಂದಿಗೆ ಮುನಿಸು ತೋರಿರುವ, ಭಿನ್ನಮತೀಯ ನಾಯಕರೊಂದಿಗೆ ಗುರುತಿಸಿಕೊಂಡಿರುವ) ಆಜಂ ಖಾನ್‌ ಅವರಿಗೆ ಜಾಮೀನು ದೊರಕಿಸಿಕೊಡಲು ಸಿಬಲ್‌ ಹೋರಾಟ ನಡೆಸಿದ್ದರು.

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅಖಿಲೇಶ್‌ ಯಾದವ್‌ “ಕಪಿಲ್ ಸಿಬಲ್ ಹಿರಿಯ ನ್ಯಾಯವಾದಿಗಳು. ಸಂಸತ್ತಿನಲ್ಲಿ ತಮ್ಮ ಅಭಿಪ್ರಾಯಗಳನ್ನು ಚೆನ್ನಾಗಿ ಮಂಡಿಸುತ್ತಾರೆ. ಅವರು ಸಮಾಜವಾದಿ ಪಕ್ಷ ಹಾಗೂ ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ ಎಂದು ಭಾವಿಸುತ್ತೇನೆ” ಎಂಬುದಾಗಿ ನುಡಿದರು.