Vikas Singh 
ಸುದ್ದಿಗಳು

ಸುಪ್ರೀಂಕೋರ್ಟ್ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ನ್ಯಾಯವಾದಿ ವಿಕಾಸ್ ಸಿಂಗ್

ಉಪಾಧ್ಯಕ್ಷರಾಗಿ ಹಿರಿಯ ವಕೀಲ ಪ್ರದೀಪ್ ಕುಮಾರ್ ರೈ ಆಯ್ಕೆಯಾದರು.

Bar & Bench

ಸುಪ್ರೀಂಕೋರ್ಟ್ ವಕೀಲರ ಸಂಘದ (ಎಸ್‌ಸಿಬಿಎ) ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ವಿಕಾಸ್ ಸಿಂಗ್ ಆಯ್ಕೆಯಾಗಿದ್ದಾರೆ. ಸಿಂಗ್‌ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಡಾ. ಅದೀಶ್ ಅಗರ್‌ವಾಲಾ ಅವರನ್ನು 344 ಮತಗಳ ಅಂತರದಿಂದ ಸೋಲಿಸಿದರು. ಅಗರ್‌ವಾಲ್‌ 493 ಮತಗಳನ್ನು ಪಡೆದರೆ ಸಿಂಗ್ 837 ಮತ ಗಳಿಸಿ ವಿಜಯಶಾಲಿಯಾದರು.

ಹಿರಿಯ ವಕೀಲ ಪ್ರದೀಪ್ ಕುಮಾರ್ ರೈ ಉಪಾಧ್ಯಕ್ಷರಾಗಿ ಆಯ್ಕೆಯಾದರೆ, ವಕೀಲ ಅರ್ಧೇಂದಮೌಲಿ ಕುಮಾರ್ ಪ್ರಸಾದ್ ಹೊಸ ಕಾರ್ಯದರ್ಶಿಯಾಗಿ ಚುನಾಯಿತರಾಗಿದ್ದಾರೆ. 615 ಮತಗಳನ್ನು ಪಡೆದ ಹಿರಿಯ ವಕೀಲ ಎಸ್‌ ಬಿ ಉಪಾಧ್ಯಾಯ ಅವರನ್ನು ಮಣಿಸಿದ ರೈ 984 ಮತಗಳನ್ನು ಪಡೆದರು. ಕೋವಿಡ್‌ ಹಿನ್ನೆಲೆಯಲ್ಲಿ ಆನ್‌ಲೈನ್‌ ಮತದಾನಕ್ಕೆ ಏರ್ಪಾಡು ಮಾಡಲಾಗಿತ್ತು. ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಎನ್‌ಎಸ್‌ಡಿಎಲ್ ಪ್ಲಾಟ್‌ಫಾರ್ಮ್‌ ಬಳಸಿ ಮತದಾನ ನಡೆಸಲಾಯಿತು. ಜಂಟಿ ಕಾರ್ಯದರ್ಶಿಯಾಗಿ ವಕೀಲ ರಾಹುಲ್ ಕೌಶಿಕ್, ಖಜಾಂಚಿಯಾಗಿ ಮೀನೇಶ್ ಕುಮಾರ್ ದುಬೆ ಮತ್ತು ಜಂಟಿ ಖಜಾಂಚಿಯಾಗಿ ಡಾ.ರುತು ಭರದ್ವಾಜ್ ಆಯ್ಕೆಯಾಗಿದ್ದಾರೆ.

ಪ್ರಸಕ್ತ ಸಾಲಿನ ಎಸ್‌ಸಿಬಿಎ ಚುನಾವಣೆ ನಡೆಸುವ ವಿಧಾನ ಕುರಿತಂತೆ ಸಂಸ್ಥೆಯಲ್ಲಿ ಭಿನ್ನಾಭಿಪ್ರಾಯಗಳೆದ್ದು ವಿವಾದ ತಲೆದೋರಿತ್ತು. ಆರಂಭದಲ್ಲಿ, ಕೋವಿಡ್‌ ಕಾರಣಕ್ಕೆ ಆನ್‌ಲೈನ್ ಮಾಧ್ಯಮದ ಮೂಲಕ ಚುನಾವಣೆ ನಡೆಸಬೇಕು ಎಂದು ಪ್ರಸ್ತಾಪಿಸಲಾಗಿತ್ತು. ಹಿರಿಯ ವಕೀಲ ಜೈದೀಪ್ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ರೂಪುಗೊಂಡಿದ್ದ ಚುನಾವಣಾ ಸಮಿತಿ ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್‌ಎಸ್‌ಡಿಎಲ್) ರೀತಿಯ ವೇದಿಕೆ ಬಳಸಿಕೊಂಡು ವರ್ಚುವಲ್ ವಿಧಾನದಲ್ಲಿ ಚುನಾವಣೆ ನಡೆಸಲು ನಿರ್ಧರಿಸಿತ್ತು. ಆದರೆ ಚುನಾವಣಾ ಪ್ರಕ್ರಿಯೆ ಆರಂಭವಾದ ಬಳಿಕ ಫೆಬ್ರುವರಿ ಮೂರನೇ ವಾರದ ಹೊತ್ತಿಗೆ ಚುನಾವಣೆಯನ್ನು ಹೈಬ್ರಿಡ್‌ ವಿಧಾನದ ಮೂಲಕ (ಭೌತಿಕ ಮತ್ತು ವರ್ಚುವಲ್‌ ಎರಡೂ ರೀತಿಯಲ್ಲಿ) ನಡೆಸಲು ತೀರ್ಮಾನ ಕೈಗೊಂಡಿತ್ತು. ಪರಿಣಾಮ ಚುನಾವಣಾ ಸಮಿತಿ ಸದಸ್ಯರು ರಾಜೀನಾಮೆ ನೀಡಿದ್ದರು.

ಇದರ ಜೊತೆಗೆ ನಿಕಟಪೂರ್ವ ಅಧ್ಯಕ್ಷ ದುಶ್ಯಂತ್‌ ದವೆ ಕೂಡ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ನಂತರ, ಹಿರಿಯ ವಕೀಲರಾದ ಪಲ್ಲವ್ ಸಿಸೋಡಿಯಾ, ರಾಣಾ ಮುಖರ್ಜಿ ಮತ್ತು ಸಿದ್ಧಾರ್ಥ ದವೆ ಅವರನ್ನೊಳಗೊಂಡ ಹೊಸ ಚುನಾವಣಾ ಸಮಿತಿ ಆರೋಗ್ಯ ಸಲಹಾ ತಂಡದ ಸಲಹೆಯಂತೆ ಹೈಬ್ರಿಡ್ ರೀತಿಯಲ್ಲಿ ಚುನಾವಣೆ ನಡೆಸಲು ನಿರ್ಧರಿಸಿತು. ಏಮ್ಸ್‌ನ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ಆರೋಗ್ಯ ಸಲಹಾ ತಂಡ ಸುಪ್ರೀಂಕೋರ್ಟ್‌ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಚುನಾವಣೆ ನಡೆಸುವಂತೆ ಶಿಫಾರಸು ಮಾಡಿತ್ತು.