ಮನನ್ ಕುಮಾರ್ ಮಿಶ್ರಾ
ಮನನ್ ಕುಮಾರ್ ಮಿಶ್ರಾ 
ಸುದ್ದಿಗಳು

ಸಿಜೆಐಗೆ ಹಿರಿಯ ವಕೀಲರ ಬಹಿರಂಗ ಪತ್ರ ನ್ಯಾಯಾಂಗಕ್ಕೆ ಒತ್ತಡ ಹೇರುವ ಯತ್ನವಾಗಿದ್ದು ಕಠಿಣ ಕ್ರಮ ಅಗತ್ಯ: ಬಿಸಿಐ ಅಧ್ಯಕ್ಷ

Bar & Bench

ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಸೂಕ್ಷ್ಮ ಪ್ರಕರಣಗಳ  ವಿಚಾರಣೆ ನಡೆಯುತ್ತಿರುವ ರೀತಿ ಬಗ್ಗೆ ಹಿರಿಯ ವಕೀಲರು ಸಿಜೆಐ ಡಿ ವೈ ಚಂದ್ರಚೂಡ್‌ ಅವರಿಗೆ ಈ ಹಿಂದೆ ಬಹಿರಂಗ ಪತ್ರ ಬರೆದ ಕುರಿತು ಭಾರತೀಯ ವಕೀಲ ಪರಿಷತ್‌ (ಬಿಸಿಐ) ಅಧ್ಯಕ್ಷ ಮತ್ತು ಹಿರಿಯ ನ್ಯಾಯವಾದಿ ಮನನ್ ಕುಮಾರ್ ಮಿಶ್ರಾ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಸಿಜೆಐ ಅವರಿಗೆ ಶನಿವಾರ ಪತ್ರ ಬರೆದಿದ್ದಾರೆ.

ಸುಪ್ರೀಂ ಕೋರ್ಟ್ ನಿಯಮಾವಳಿ ಮತ್ತು ನ್ಯಾಯಾಲಯ ನಡಾವಳಿ ಮತ್ತು ಕಾರ್ಯವಿಧಾನ ಕೈಪಿಡಿಯನ್ನು ಉಲ್ಲಂಘಿಸಿ ಕೆಲ ಪೀಠಗಳು ವಿಚಾರಣೆ ನಡೆಸುತ್ತಿದ್ದ ಪ್ರಕರಣಗಳನ್ನು ಬೇರೆ ಪೀಠಗಳಿಗೆ ವರ್ಗಾಯಿಸಲಾಗಿದೆ ಎಂದು ಡಿಸೆಂಬರ್ 6ರಂದು ಹಿರಿಯ ವಕೀಲ ದುಶ್ಯಂತ್ ದವೆ ಅವರು ಸಿಜೆಐಗೆ ಬರೆದು ಆರೋಪಿಸಿದ್ದರು.

ಮಿಶ್ರಾ ತಮ್ಮ ಪತ್ರದಲ್ಲಿ ದವೆ ಅವರ ಹೆಸರನ್ನು ಉಲ್ಲೇಖಿಸದಿದ್ದರೂ, ಇದು ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಅತ್ಯುತ್ತಮ ತಂತ್ರವಲ್ಲದೆ ಬೇರೇನೂ ಅಲ್ಲ. ಇಂತಹ ತಂತ್ರವನ್ನು ಬೇರೆ ಬೇರೆ ಸಿಜೆಐಗಳೆದುರೂ ಆಗಾಗ್ಗೆ ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮನನ್ ಕುಮಾರ್ ಮಿಶ್ರಾ ಪತ್ರದ ಪ್ರಮುಖಾಂಶಗಳು

  • ಹಿರಿಯ ವಕೀಲರ ಪತ್ರ ನ್ಯಾಯಾಂಗ ನಿಂದನೆ, ದುರುದ್ದೇಶ ಮತ್ತು ಕಿಡಿಗೇಡಿತನದಿಂದ ಕೂಡಿದೆ.

  • ಕಾನೂನು ವ್ಯವಸ್ಥೆಯ ಮುಕ್ತ ಮತ್ತು ನ್ಯಾಯಸಮ್ಮತ ಕಾರ್ಯನಿರ್ವಹಣೆಯನ್ನು ಕಾಪಾಡಿಕೊಳ್ಳಲು ನ್ಯಾಯಾಂಗವು ಇಂತಹ ಯತ್ನಗಳನ್ನು ಕಠಿಣವಾಗಿ ಎದುರಿಸಬೇಕು.

  • ಅಂತಹ ಅಭ್ಯಾಸವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಅಸ್ತಿತ್ವದಲ್ಲಿರುವ ವ್ಯವಸ್ಥೆಯ ಮುಕ್ತ ಮತ್ತು ನ್ಯಾಯಯುತ ಕಾರ್ಯನಿರ್ವಹಣೆ ಮೇಲೆ ಯಾವುದೇ ಪರಿಣಾಮ ಬೀರದಂತೆ ನಿಗ್ರಹಿಸಬೇಕು.

  • ರಾಜಕೀಯ ಮತ್ತು ವ್ಯಾವಹಾರಿಕ ಉದ್ದೇಶಗಳಿಗಾಗಿ ಬೆರಳೆಣಿಕೆಯ ಹಿರಿಯ ವಕೀಲರಷ್ಟೇ ಇಂತಹ ಪತ್ರ ಬರೆಯುತ್ತಾರೆ.

  • ಕಾನೂನು ಚೌಕಟ್ಟಿನೊಳಗೆ ತಮ್ಮ ಕರ್ತವ್ಯಗಳನ್ನು ಶ್ರದ್ಧೆಯಿಂದ ನಿರ್ವಹಿಸುವ ಯುವ ವಕೀಲ ಸಮುದಾಯವನ್ನು ಇಂತಹ ಪತ್ರಗಳು ನಿರಾಶೆಗೊಳಿಸುತ್ತವೆ.

  • ಇಂತಹ ಯತ್ನಗಳ ಹಿಂದೆ ಪ್ರಭಾವಿ ಮತ್ತ ಪ್ರಬಲ ಕಕ್ಷಿದಾರರು ತಮ್ಮ ಎದುರಾಳಿಗಿಂತಲೂ ಲಾಭ ಪಡೆಯುವ ಉದ್ದೇಶ ಇರುತ್ತದೆ.

  • ದವೆ ಅವರ ಪತ್ರದಲ್ಲಿನ ಹೇಳಿಕೆಗಳು ಸತ್ಯ ಮತ್ತು ವಿಶ್ವಾಸಾರ್ಹತೆಯಿಂದ ಕೂಡಿಲ್ಲ. ಇದು ಅಗ್ಗದ ಪ್ರಚಾರಕ್ಕಾಗಿ ಮತ್ತು ನ್ಯಾಯಾಂಗದ ಮೇಲೆ ಒತ್ತಡ ಹೇರುವುದಕ್ಕಾಗಿ ಮಾಡಿದ ಯತ್ನ.

  • ಸಿಜೆಐ ಅವರೊಂದಿಗೆ ಬಿಸಿಐ ದೃಢವಾಗಿ ನಿಲ್ಲಲಿದ್ದು ಈ ಪತ್ರಗಳು ಸೃಷ್ಟಿಸಲು ಬಯಸುವ ಉಪದ್ರವವನ್ನು ಅವರು ತೊಡೆದುಹಾಕಿ ಅಂತಹ ಪ್ರಯತ್ನಗಳ ವಿರುದ್ಧ ಈ ಹಿಂದೆ ಕೈಗೊಂಡಿದ್ದ ತೀರ್ಮಾನಗಳನ್ನು ಎತ್ತಿಹಿಡಿಯಬೇಕು.

ನ್ಯಾಯಮೂರ್ತಿ ಅನಿರುದ್ಧ ಬೋಸ್ ನೇತೃತ್ವದ ನ್ಯಾಯಪೀಠವು ಈ ಹಿಂದೆ ವಿಚಾರಣೆ ನಡೆಸಿದ ಪ್ರಕರಣಗಳನ್ನು ನ್ಯಾಯಮೂರ್ತಿ ಬೋಸ್ ಅವರಿಗಿಂತ ಕಿರಿಯರಾದ ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ನೇತೃತ್ವದ ನ್ಯಾಯಪೀಠಕ್ಕೆ ತಪ್ಪಾಗಿ ವರ್ಗಾಯಿಸಲಾಗುತ್ತಿದೆ ಎಂದು ಹಿರಿಯ ವಕೀಲರು ಮುಕ್ತ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ಕೆಲ ದಿನಗಳಲ್ಲಿ ದವೆ ಪತ್ರ ಬರೆದಿದ್ದರು.

ಇದಲ್ಲದೆ, ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಮೂರ್ತಿಗಳ ನೇಮಕಾತಿಯನ್ನು ಸೂಚಿಸುವಲ್ಲಿ ಕೇಂದ್ರ ಸರ್ಕಾರ ವಿಳಂಬಕ್ಕೆ ಸಂಬಂಧಿಸಿದ ಪ್ರಕರಣವನ್ನು ಅದನ್ನು ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರಿದ್ದ ಪೀಠದಿಂದ ತೆಗೆದುಹಾಕಲಾಗಿತ್ತು. ನ್ಯಾ. ಕೌಲ್‌ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ನ್ಯಾ. ಕೌಲ್‌ ಅವರು ಈ ಬಗ್ಗೆ ಮಂಗಳವಾರ ನ್ಯಾಯಾಲಯದಲ್ಲಿ ಪ್ರತಿಕ್ರಿಯಿಸಿ ಪ್ರಕರಣವನ್ನು ತಮ್ಮ ಪೀಠದಿಂದ ತೆಗೆದುಹಾಕಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದರು. ಮುಂದುವರೆದು ಈ ಬಗ್ಗೆ ಸಿಜೆಐ ಅವರಿಗೆ ಮಾಹಿತಿ ಇರಬಹುದು. ಕೆಲವು ಸಂಗತಿಗಳ ಬಗ್ಗೆ ಹೆಚ್ಚು ಹೇಳದೇ ಇರುವುದು ಉತ್ತಮ ಎಂದು ಹೇಳುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದರು.

[ಬಿಸಿಐ ಅಧ್ಯಕ್ಷರ ಪತ್ರದ ಪ್ರತಿಯನ್ನು ಇಲ್ಲಿ ಓದಿ]

Letter to CJI - Manan Kumar Mishra, BCI Chairman.pdf
Preview