Chief Justice N V Anjaria and K V Aravind, Karnataka HC 
ಸುದ್ದಿಗಳು

ಎಸ್‌ಸಿ,ಎಸ್‌ಟಿ ಹಾಸ್ಟೆಲ್‌ಗಳ ವಾರ್ಡನ್‌ ಹುದ್ದೆಗಳ ಭರ್ತಿಗೆ ಕೋರಿಕೆ: ಹಣಕಾಸು ಇಲಾಖೆಗೆ ಹೈಕೋರ್ಟ್‌ ನೋಟಿಸ್‌

ಹಿರಿಯ ಹಾಗೂ ಕಿರಿಯ ವಾರ್ಡನ್‌ ಹುದ್ದೆಗಳ ಕೊರತೆ ಬಗ್ಗೆ ಸರ್ಕಾರಿ ವಕೀಲರು ವರದಿ ಸಲ್ಲಿಸಬೇಕು ಎಂದು ಸೂಚಿಸಿ, ನವೆಂಬರ್‌ 14ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌.

Bar & Bench

ರಾಜ್ಯ ಸಮಾಜ ಕಲ್ಯಾಣ ಇಲಾಖೆ ಅಧೀನದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್‌ಸಿ, ಎಸ್‌ಟಿ) ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ಹಿರಿಯ ಮತ್ತು ಕಿರಿಯ ವಾರ್ಡನ್‌ ಹುದ್ದೆ ತುಂಬುವ ವಿಚಾರ ಸಂಬಂಧ ರಾಜ್ಯ ಹಣಕಾಸು ಇಲಾಖೆ ಕಾರ್ಯದರ್ಶಿಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿಗೊಳಿಸಿದೆ.

ರಾಜ್ಯದ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಿರುವ ಮತ್ತು ಈ ಹಾಸ್ಟೆಲ್‌ಗಳಲ್ಲಿ ವಾರ್ಡನ್‌ ಹುದ್ದೆಗಳು ಖಾಲಿಯಿರುವ ಕುರಿತು ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಸರ್ಕಾರದ ಪರ ವಕೀಲೆ ನಿಲೋಫರ್‌ ಅಕ್ಬರ್‌ ಅವರು “ರಾಜ್ಯದ ಎಸ್‌ಸಿ, ಎಸ್‌ಟಿ ಹಾಸ್ಟೆಲ್‌ಗಳಲ್ಲಿ ವಾರ್ಡನ್‌ ಹುದ್ದೆಗಳ ಕೊರತೆ ಸಂಬಂಧ ವರದಿ ಸಲ್ಲಿಸುವಂತೆ ಈ ಹಿಂದಿನ ವಿಚಾರಣೆಯಲ್ಲಿ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿತ್ತು. ಸದ್ಯ ವರದಿ ಸಿದ್ಧವಾಗಿದ್ದು, ಅದನ್ನು ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು.

ಅರ್ಜಿಯಲ್ಲಿ ನ್ಯಾಯಾಲಯಕ್ಕೆ ಅಗತ್ಯ ನೆರವು ಕಲ್ಪಿಸಲು ನಿಯೋಜನೆಗೊಂಡಿರುವ ಅಮಿಕಸ್‌ ಕ್ಯೂರಿ ವಕೀಲ ನಿತಿನ್‌ ರಮೇಶ್‌ ಅವರು “ಪ್ರಕರಣದಲ್ಲಿ ಮೊಟ್ಟ ಮೊದಲಿಗೆ ಹಾಸ್ಟೆಲ್‌ಗಳಲ್ಲಿ ಖಾಲಿಯಿರುವ ಹಿರಿಯ ಹಾಗೂ ಕಿರಿಯ ವಾರ್ಡನ್‌ಗಳ ಹುದ್ದೆ ಭರ್ತಿಯಾಗಬೇಕಿದೆ. ಇಲ್ಲವಾದರೆ ಹಾಸ್ಟೆಲ್‌ಗಳಿಗೆ ಮೇಲ್ವಿಚಾರಕರೇ ಇಲ್ಲದಂತಾಗುತ್ತದೆ. ವಾರ್ಡನ್‌ಗಳ ಭರ್ತಿ ಪ್ರಸ್ತಾವನೆ ರಾಜ್ಯ ಹಣಕಾಸು ಇಲಾಖೆ ಮುಂದೆ ಬಾಕಿಯಿದೆ. ರಾಜ್ಯದ ಹಲವು ನೀತಿ ಪ್ರಸ್ತಾವನೆಗಳು ಹಣಕಾಸು ಇಲಾಖೆ ಮುಂದೆ ನೆನಗುದಿಗೆ ಬಿದ್ದಿರುತ್ತವೆ. ಎಲ್ಲಾ ಹುದ್ದೆಗಳ ಭರ್ತಿಗೆ ಹಣಕಾಸು ಮಂಜೂರಾತಿ ಕುರಿತ ಆಕ್ಷೇಪಣೆಗಳು ಹಣಕಾಸು ಇಲಾಖೆ ಹಂತದಲ್ಲಿ ಎದುರಾಗುತ್ತವೆ” ಎಂದು ವಿವರಿಸಿದರು.

“ಪ್ರಕರಣದಲ್ಲಿ ನೀತಿ ನಿರ್ಣಯದ ಜೊತೆಗೆ ಹಣಕಾಸು ನಿರ್ಣಯವೂ ಬಹಳ ಮುಖ್ಯ. ವಾರ್ಡನ್‌ ಹುದ್ದೆಗಳ ನೇಮಕಾತಿಯಲ್ಲಿ ಸರ್ಕಾರದ ವಿವಿಧ  ಇಲಾಖೆಗಳೊಂದಿಗೆ ಅಗತ್ಯ ಸಹಕಾರ ಹಾಗೂ ಸಮನ್ವಯ ಸಾಧಿಸಲು ಅರ್ಜಿಯಲ್ಲಿ ಹಣಕಾಸು ಇಲಾಖೆಯ ಕಾರ್ಯದರ್ಶಿಯನ್ನು ಹೆಚ್ಚುವರಿ ಪ್ರತಿವಾದಿಯಾಗಿ ಸೇರ್ಪಡೆ ಮಾಡುವುದು ಸೂಕ್ತ” ಎಂದು ಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ಈ ಸಲಹೆ ಒಪ್ಪಿದ ಪೀಠವು ಅರ್ಜಿಯಲ್ಲಿ ರಾಜ್ಯ ಹಣಕಾಸು ಇಲಾಖೆ ಕಾರ್ಯದರ್ಶಿಯನ್ನು ಪ್ರತಿವಾದಿಯಾಗಿ ಸೇರ್ಪಡೆಗೊಳಿಸಲು ನಿರ್ದೇಶಿಸಿತು. ಜೊತೆಗೆ, ಹಣಕಾಸು ಇಲಾಖೆ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಿದ ಪೀಠವು ಹಿರಿಯ ಹಾಗೂ ಕಿರಿಯ ವಾರ್ಡನ್‌ ಹುದ್ದೆಗಳ ಕೊರತೆ ಬಗ್ಗೆ ಸರ್ಕಾರಿ ವಕೀಲರು ವರದಿ ಸಲ್ಲಿಸಬೇಕು ಎಂದು ಸೂಚಿಸಿ, ನವೆಂಬರ್‌ 14ಕ್ಕೆ ವಿಚಾರಣೆ ಮುಂದೂಡಿತು.