ಎಸ್‌ಸಿ, ಎಸ್‌ಟಿ ಹಾಸ್ಟೆಲ್‌ಗಳಲ್ಲಿ ಮಿತಿಮೀರಿದ ವಿದ್ಯಾರ್ಥಿ ಸಂಖ್ಯೆಗೆ ಹೈಕೋರ್ಟ್‌ ಆಘಾತ: ಪರಿಹಾರ ಕ್ರಮಗಳಿಗೆ ಸೂಚನೆ

ಖಾಲಿ ಹುದ್ದೆಗಳ ಭರ್ತಿಗೆ ಯಾವ ಕ್ರಮ ಕೈಗೊಳ್ಳಲಾಗುವುದು ಎಂಬ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿದೆ.
ಎಸ್‌ಸಿ, ಎಸ್‌ಟಿ ಹಾಸ್ಟೆಲ್‌ಗಳಲ್ಲಿ ಮಿತಿಮೀರಿದ ವಿದ್ಯಾರ್ಥಿ ಸಂಖ್ಯೆಗೆ ಹೈಕೋರ್ಟ್‌ ಆಘಾತ: ಪರಿಹಾರ ಕ್ರಮಗಳಿಗೆ ಸೂಚನೆ
Published on

ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಲ್ಲಿ ಪ್ರವೇಶ ಮಿತಿಗಿಂತ ಅಧಿಕ ಪಟ್ಟು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿರುವುದಕ್ಕೆ ಆಘಾತ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗಳಲ್ಲಿ ದಟ್ಟಣೆಯ ಸ್ಥಿತಿಯಲ್ಲಿ ತುಂಬಿರುವುದರ ಬಗ್ಗೆ ತಕ್ಷಣ ಪರಿಹಾರ ಕ್ರಮಗಳಿಗೆ ಮುಂದಾಗಬೇಕು ಎಂದು ನಿರ್ದೇಶಿಸಿದೆ.

ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ನಡೆಸಿತು.

ಸರ್ಕಾರದ ವಕೀಲೆ ನಿಲೋಫರ್‌ ಅಕ್ಬರ್‌ ಅವರು ರಾಜ್ಯದ ಎಸ್ಸಿ-ಎಸ್ಟಿ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಮಿತಿ ಹಾಗೂ ಸದ್ಯ ಇರುವ ಸಂಖ್ಯೆ, ವಾರ್ಡ್‌ನ ಹುದ್ದೆಗಳ ಮಾಹಿತಿ ಹೊಂದಿದ ಕಂದಾಯ ವಿಭಾಗವಾರು ವರದಿಯನ್ನು ಪೀಠಕ್ಕೆ ಸಲ್ಲಿಸಿದರು.

ವರದಿಯಲ್ಲಿ ಹಾಸ್ಟೆಲ್‌ಗಳಲ್ಲಿ ಪ್ರವೇಶ ಮಿತಿಗಿಂತ ಮೂರ್ನಾಲ್ಕು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿರುವ ಅಂಶವನ್ನು ಗಮನಿಸಿ ಅಚ್ಚರಿ ವ್ಯಕ್ತಪಡಿಸಿದ ಪೀಠವು ಸರ್ಕಾರದ ವರದಿಯಲ್ಲಿರುವಂತೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಮೆಟ್ರಿಕ್‌ಪೂರ್ವ ಹಾಸ್ಟೆಲ್‌ನಲ್ಲಿ ಪ್ರವೇಶ ಮಿತಿ 50 ಇದ್ದು, ಅಲ್ಲಿ 150 ವಿದ್ಯಾರ್ಥಿಗಳು ಇದ್ದಾರೆ. ಕೊಪ್ಪಳದ ಹಾಸ್ಟೆಲ್‌ನಲ್ಲಿ 75 ಪ್ರವೇಶ ಮಿತಿ ಇದ್ದರೆ, 214 ವಿದ್ಯಾರ್ಥಿಗಳು ಇದ್ದಾರೆ. ರಾಜ್ಯದ ಬಹುತೇಕ ಹಾಸ್ಟೆಲ್‌ಗಳ ಸ್ಥಿತಿ ಇದೇ ಆಗಿದೆ. ಎಸ್ಸಿ-ಎಸ್ಟಿ ವಿದ್ಯಾರ್ಥಿಗಳನ್ನು ಈ ರೀತಿಯಾಗಿ ನಡೆಸಿಕೊಳ್ಳಲಾಗುತ್ತಿರುವ ಬಗ್ಗೆ ಸರ್ಕಾರ ತಕ್ಷಣ ಗಮನ ಹರಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ತುರ್ತು ಅವಶ್ಯಕತೆ ಇದೆ ಎಂದು ಹೇಳಿತು.

Also Read
ಎಸ್‌ಸಿ, ಎಸ್‌ಟಿ ಅನುದಾನ ಮುಸ್ಲಿಮರಿಗೆ ಹಂಚಿಕೆ ಆರೋಪ: ನಡ್ಡಾ, ಮಾಳವಿಯಾ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಆದೇಶ

ಅದೇ ರೀತಿ 1,890 ಹಿರಿಯ ವಾರ್ಡನ್ ಹುದ್ದೆಗಳಲ್ಲಿ 1,342 ಭರ್ತಿ ಆಗಿದ್ದು, 548 ಹುದ್ದೆಗಳು ಖಾಲಿ ಇವೆ. 518 ಕಿರಿಯ ವಾರ್ಡನ್ ಹುದ್ದೆಗಳ ಪೈಕಿ 465 ಭರ್ತಿ ಆಗಿದ್ದು, 53 ಹುದ್ದೆಗಳು ಖಾಲಿ ಇವೆ. ಈ ನಿಟ್ಟಿಯಲ್ಲಿಯೂ ಸರ್ಕಾರ ಗಮನಹರಿಸಬೇಕಿದೆ ಎಂದು ಪೀಠ ಹೇಳಿತು.

ಹಾಸ್ಟೆಲ್‌ಗಳಲ್ಲಿ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿರುವುದರಿಂದ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ಘನತೆ-ಗೌರವದಿಂದ ಇರುವುದಕ್ಕೆ ಸರ್ಕಾರದ ಬಳಿ ಇರುವ ಪರಿಹಾರ ಕ್ರಮವೇನು? ಖಾಲಿ ಹುದ್ದೆಗಳ ಭರ್ತಿಗೆ ಯಾವ ಕ್ರಮ ಕೈಗೊಳ್ಳಲಾಗುವುದು ಎಂಬ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ ನ್ಯಾಯಾಲಯವು ವಿಚಾರಣೆಯನ್ನು ಸೆಪ್ಟೆಂಬರ್‌ 13ಕ್ಕೆ ಮುಂದೂಡಿತು.

Kannada Bar & Bench
kannada.barandbench.com