Justice P B Bajanthri
Justice P B Bajanthri 
ಸುದ್ದಿಗಳು

ಬಡ ಹಾಗೂ ಹಿಂದುಳಿದ ವರ್ಗಗಳ ಯುವ ವಕೀಲರಿಗೆ ಹಿರಿಯ ವಕೀಲರು ಬೆಂಬಲ ನೀಡಬೇಕು: ನ್ಯಾ. ಭಜಂತ್ರಿ

Bar & Bench

“ಬಡ ಹಾಗೂ ಅತ್ಯಂತ ಹಿಂದುಳಿದ ವರ್ಗಗಳಿಂದ ಕಾನೂನು ವೃತ್ತಿಗೆ ಪ್ರವೇಶಿಸುವ ಯುವ ವಕೀಲರಿಗೆ ಹಿರಿಯ ವಕೀಲರು ಬೆಂಬಲ ನೀಡಬೇಕು” ಎಂದು ಪಟ್ನಾ ಹೈಕೋರ್ಟ್‌ಗೆ ವರ್ಗಾವಣೆಗೊಂಡಿರುವ ನ್ಯಾಯಮೂರ್ತಿ ಪಿ ಬಿ ಭಜಂತ್ರಿ ಹೇಳಿದ್ದಾರೆ.

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

“ಯುವ ವಕೀಲರಿಗೆ ಬೆಂಬಲ ನೀಡುವುದನ್ನು ಮುಂದುವರಿಸುವ ಮೂಲಕ ನಮ್ಮ ಪೂರ್ವಜರು ಈ ಘನತೆಯುತ ವೃತ್ತಿಯಲ್ಲಿ ಹಾಕಿಕೊಟ್ಟಿರುವ ಪರಂಪರೆಯನ್ನು ಮುಂದುವರಿಸುವ ಪ್ರಯತ್ನವನ್ನು ಹಿರಿಯ ವಕೀಲರು ಮಾಡಬೇಕು ಎಂದು ನಾನು ಕೋರುತ್ತೇನೆ” ಎಂದರು.

“ಕಾನೂನು ವೃತ್ತಿ ಬದುಕಿಗೆ ಸೇರಬೇಕು ಎಂದು ಬಯಸಿದ ನಂತರ ಕಾನೂನು ಪದವೀಧರರು ತಮ್ಮ ಇಡೀ ಸರ್ವಸ್ವವನ್ನು ವೃತ್ತಿಗೆ ಮುಡಿಪಾಗಿಸಬೇಕು. ಯುವ ಕಾನೂನು ಪದವೀಧರರು ನಾವು ವೃತ್ತಿಗೆ ಸೇರಬೇಕೋ ಅಥವಾ ಬೇಡವೋ ಎಂಬುದನ್ನು ಮೊದಲು ನಿರ್ಧರಿಸಿಕೊಳ್ಳಬೇಕು. ಒಮ್ಮೆ ವೃತ್ತಿಗೆ ಪದಾರ್ಪಣೆ ಮಾಡಿದ ಮೇಲೆ ಮರು ಚಿಂತನೆ ಮಾಡದೇ ವೃತ್ತಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.

ಕಡಿಮೆ ಅವಧಿಗೆ ಕರ್ನಾಟಕದಲ್ಲಿ ನ್ಯಾಯಮೂರ್ತಿಯಾಗಿದ್ದ ಪಿ ಬಿ ಭಜಂತ್ರಿ 20,000ಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಾರೆ. 2015ರ ಜನವರಿ 2ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿ ಎರಡೂವರೆ ತಿಂಗಳಲ್ಲೇ 2015ರ ಮಾರ್ಚ್‌ 16ರಂದು ಭಜಂತ್ರಿ ಅವರನ್ನು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು. 2018ರ ನವೆಂಬರ್‌ 17ರಂದು ಮತ್ತೆ ಅವರನ್ನು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಯನ್ನಾಗಿ ವರ್ಗಾವಣೆ ಮಾಡಲಾಗಿತ್ತು.