ಕಳೆದ ವಾರ ಸುಪ್ರೀಂ ಕೋರ್ಟ್ ನೀಡಿದ್ದ ಅಂತಿಮ ಎಚ್ಚರಿಕೆ ಹಿನ್ನೆಲೆಯಲ್ಲಿ ಡಿಎಂಕೆ ಮುಖಂಡ ಸೆಂಥಿಲ್ ಬಾಲಾಜಿ ಅವರು ತಮಿಳುನಾಡು ಇಂಧನ ಹಾಗೂ ಅಬಕಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಾಲಾಜಿ ಅವರ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ ಎಂದು ಏಪ್ರಿಲ್ 27ರಂದು ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆಯನ್ನು ಸೋಮವಾರ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠದೆದುರು ಮಂಡಿಸಲಾಯಿತು.
ಎಐಡಿಎಂಕೆ ಅಧಿಕಾರಾವಧಿಯಲ್ಲಿ ಸಾರಿಗೆ ಸಚಿವರಾಗಿದ್ದಾಗ ನಡೆದಿದ್ದ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಾಜಿ ಅವರ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಸೆಂಥಿಲ್ ನಂತರ ಡಿಎಂಕೆ ಪಕ್ಷ ಸೇರಿ ಸಚಿವರಾಗಿದ್ದರು.
ಬಾಲಾಜಿ ಸಚಿವರಾಗಿ ಮುಂದುವರೆಯುವುದಿಲ್ಲ ಎಂದು ಭಾವಿಸಿ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 2024ರಲ್ಲಿ ಜಾಮೀನು ನೀಡಿತ್ತು . ಆದರೆ ಜಾಮೀನು ನೀಡಿದ ಕೆಲ ದಿನಗಳಲ್ಲೇ ಅವರು ಸಚಿವ ಸ್ಥಾನ ಪಡೆದಿದ್ದರು. ಸಾಕ್ಷಿಗಳ ಮೇಲೆ ಅವರು ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಏಪ್ರಿಲ್ 23ರಂದು ಕಳವಳ ವ್ಯಕ್ತಪಡಿಸಿದ್ದ ನ್ಯಾಯಾಲಯ "ನಾವು ಸಂಪೂರ್ಣವಾಗಿ ಬೇರೆಯದೇ ಆದ ಆಧಾರಗಳ ಮೇಲೆ ಜಾಮೀನು ನೀಡಿದ್ದೆವು. ಆದರೆ, ಜನತೆ ಈ ರೀತಿ ಕಾನೂನು ಪ್ರಕ್ರಿಯೆಯೊಂದಿಗೆ ಆಟವಾಡಲು ಹೋದರೆ... ನಿಮ್ಮ ವಿರುದ್ಧದ ತೀರ್ಪಿನ ಅವಲೋಕನಗಳನ್ನು ನಿರ್ಲಕ್ಷಿಸಿ ನಾವು ತಪ್ಪು ಮಾಡಿದೆವು ಎಂದು ನಮ್ಮ ಆದೇಶದಲ್ಲಿ ದಾಖಲಿಸುತ್ತೇವೆ... ನಾವು ನಿಮಗೆ ಒಂದು ಆಯ್ಕೆ ನೀಡುತ್ತೇವೆ: ಹುದ್ದೆ ಅಥವಾ ಸ್ವಾತಂತ್ರ್ಯ (ಎರಡರಲ್ಲಿ ಒಂದನ್ನು ಆಯ್ದುಕೊಳ್ಳಿ)" ಎಂದಿತ್ತು.
ಸೆಪ್ಟೆಂಬರ್ 26, 2024 ರ ಜಾಮೀನು ಆದೇಶವನ್ನು ಹಿಂಪಡೆಯಲು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು. ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಪ್ರಕರಣದಲ್ಲಿ ಜಾಮೀನು ಪಡೆದ ನಂತರ ತಮಿಳುನಾಡು ಸರ್ಕಾರದಲ್ಲಿ ಬಾಲಾಜಿ ಅವರನ್ನು ಸಂಪುಟ ಸಚಿವರನ್ನಾಗಿ ಮರುನೇಮಕ ಮಾಡುವುದರಿಂದ ವಿಚಾರಣೆಯ ನ್ಯಾಯಸಮ್ಮತತೆಗೆ ಧಕ್ಕೆಯಾಗಬಹುದು ಎಂದು ಕೆ ವಿದ್ಯಾ ಕುಮಾರ್ ಎಂಬುವವರು ಪ್ರಸಕ್ತ ಅರ್ಜಿ ಸಲ್ಲಿಸಿದ್ದರು.
ಜೂನ್ 14, 2023ರಂದು ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ (ಇ ಡಿ) ಬಂಧಿಸಿತ್ತು. ವಿದ್ಯಾ ಕುಮಾರ್ ಅವರ ಅರ್ಜಿ ಬೆಂಬಲಿಸಿದ್ದ ಅದು ಜೈಲಿನಲ್ಲಿದ್ದಾಗಲೂ ಬಾಲಾಜಿ ರಾಜಕೀಯ ಅಧಿಕಾರವನ್ನು ಚಲಾಯಿಸುವುದನ್ನು ಮುಂದುವರೆಸಿದ್ದಾರೆ ಎಂದು ವಾದಿಸಿತ್ತು. ಪ್ರಕರಣದ ಹಲವು ಸಾಕ್ಷಿ+ಗಳು ಈ ಹಿಂದೆ ಅವರೊಂದಿಗೆ ಕೆಲಸ ಮಾಡಿದ್ದ ಸಾರ್ವಜನಿಕ ಸೇವಕರು ಎಂದು ಇ ಡಿ ಬೆರಳು ಮಾಡಿತ್ತು.
ರಾಜೀನಾಮೆಯ ಬೆಳವಣಿಗೆಯ ಬಗ್ಗೆ ತಿಳಿಸಿದ ನಂತರ, ನ್ಯಾಯಾಲಯ ಸೋಮವಾರ ವಿದ್ಯಾ ಕುಮಾರ್ ಅವರ ಅರ್ಜಿಯನ್ನು ವಿಲೇವಾರಿ ಮಾಡಿತು. ಬಾಲಾಜಿ ಪರ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಮುಕುಲ್ ರೋಹಟಗಿ ವಾದ ಮಂಡಿಸಿದ್ದರು.