pregnant mother and birth certificate
pregnant mother and birth certificate 
ಸುದ್ದಿಗಳು

ಅವಿವಾಹಿತ/ಏಕ ಪೋಷಕ ತಾಯಂದಿರ ಮಕ್ಕಳ ಜನನ, ಮರಣ ಪ್ರಮಾಣ ಪತ್ರ: ತಂದೆ ವಿವರವಿಲ್ಲದ ಅರ್ಜಿ ರೂಪಿಸಿ ಎಂದ ಕೇರಳ ಹೈಕೋರ್ಟ್

Bar & Bench

ಸಂತಾನೋತ್ಪತ್ತಿ ತಂತ್ರಜ್ಞಾನದ (ಎಆರ್‌ಟಿ) ಮೂಲಕ ಏಕ ಪೋಷಕ ಅಥವಾ ಅವಿವಾಹಿತ ತಾಯಂದಿರಿಗೆ ಜನಿಸುವ ಮಕ್ಕಳ ಜನನ ಮತ್ತು ಮರಣ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದಂತೆ ತಂದೆಯ ಹೆಸರು ಮತ್ತಿತರ ವಿವರಗಳಿಲ್ಲದ ಅರ್ಜಿ ರೂಪಿಸಬೇಕು ಎಂದು ಕೇರಳ ಹೈಕೋರ್ಟ್‌ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಅಂತಹ ಅರ್ಜಿಗಳಲ್ಲಿ ತಂದೆಯ ಹೆಸರು ಮತ್ತಿತರ ವಿವರಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಕೇಳಬಾರದು ಎಂದು ನ್ಯಾ. ಸತೀಶ್‌ ನಿನನ್‌ ಅವರಿದ್ದ ಏಕಸದಸ್ಯ ಪೀಠ ನಿರ್ದೇಶನ ನೀಡಿದೆ.

ಏಕ ಪೋಷಕ ತಾಯಂದಿರಿಗೆ ಸಹಾಯಕವಾಗುವಂತೆ ಸಂತಾನೋತ್ಪತ್ತಿ ತಂತ್ರಜ್ಞಾನದ ಮೂಲಕ ಗರ್ಭಧರಿಸುವ ಹಕ್ಕು ನೀಡಲಾಗಿರುವುದರಿಂದ ತಂದೆಯ ವಿವರ ಕೋರುವುದು ಗೌಪ್ಯತೆ, ಸ್ವಾತಂತ್ರ್ಯ ಮತ್ತು ಘನತೆಯ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದಿರುವ ನ್ಯಾಯಾಲಯ ಅಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಜನನ ಮತ್ತು ಮರಣಗಳ ನೋಂದಣಿಗೆ ಸೂಕ್ತ ರೀತಿಯ ನಮೂನೆಗಳನ್ನು ರೂಪಿಸಬೇಕು ಎಂಬುದಾಗಿ ಆದೇಶಿಸಿದೆ.

ಅರ್ಜಿದಾರರು ಮತ್ತಿತರ ವ್ಯಕ್ತಿಗಳ ಗೌಪ್ಯತೆ, ಸ್ವಾತಂತ್ರ್ಯ ಮತ್ತು ಘನತೆ ಕಾಪಾಡಿಕೊಳ್ಳುವಂತಹ ಕಾನೂನು ಕಾಲದೊಂದಿಗೆ ವಿಕಸನಗೊಳ್ಳಬೇಕು ಎಂದು ಕೂಡ ನ್ಯಾಯಾಲಯ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದೆ. “ಇಂತಹ ಸನ್ನಿವೇಶಗಳಡಿ, ತಂದೆಯ ವಿವರಗಳನ್ನು ಖಾಲಿ ಬಿಡುವುದು, ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ನೀಡುವಾಗ ತಂದೆಯ ವಿವರಗಳ ಅಂಕಣ ಖಾಲಿ ಬಿಡುವುದು ತಾಯಿ ಹಾಗೂ ಮಗುವಿನ ಘನತೆಯ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ” ಎಂದು ಅದು ತಿಳಿಸಿದೆ.

ಕೃತಕ ಗರ್ಭಧಾರಣೆ (ಐವಿಎಫ್‌) ಮೂಲಕ ಗರ್ಭಿಣಿಯಾಗುವ ಆಯ್ಕೆ ಮಾಡಿಕೊಂಡಿದ್ದ ಒಂಟಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮನವಿ ಆಲಿಸಿದ ಪೀಠ ಈ ಆದೇಶ ಜಾರಿ ಮಾಡಿತು. ಮಗುವಿನ ಜನನ/ಮರಣ ಪತ್ರ ಪಡೆಯುವಾಗ ತಂದೆಯ ಹೆಸರು ನೋಂದಾಯಿಸಬೇಕು ಎಂದು ಸೂಚಿಸುವ 1999ರ ಕೇರಳ ಜನನ ಮತ್ತು ಮರಣ ನಿಯಮಾವಳಿಯನ್ನು ಅವರು ಪ್ರಶ್ನಿಸಿದ್ದರು.

ಕಾಲ ಬದಲಾದಂತೆ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಪ್ರಗತಿಯೊಂದಿಗೆ ಸಂವಿಧಾನದ ಅರ್ಥವಿವರಣೆಯ ಪ್ರಾಮುಖ್ಯತೆಯನ್ನು ನ್ಯಾಯಾಲಯ ಒತ್ತಿಹೇಳಿತು.

"…ಕಾಲ ಕಳೆದಂತೆ, ತಂತ್ರಜ್ಞಾನ ವಿಕಸನ, ಜೀವನ ಶೈಲಿಯಲ್ಲಿ ಬದಲಾವಣೆ ಮತ್ತು ಕಾನೂನಾತ್ಮಕ ಆಡಳಿತದಿಂದ ಗುರುತಿಸಲಾದ ವೈಯಕ್ತಿಕ ಆಯ್ಕೆಗಳಿಂದ ಶಾಸನಗಳು, ನಿಯಮಗಳು ಮತ್ತು ಅದರ ಅಡಿಯಲ್ಲಿ ಸೂಚಿಸಲಾದ ನಮೂನೆಗಳಿಗೆ ಸೂಕ್ತ ಮಾರ್ಪಾಡು /ಬದಲಾವಣೆ/ಸೇರ್ಪಡೆ /ತಿದ್ದುಪಡಿಗಳನ್ನು ಮಾಡಬೇಕಾಗಿದೆ ". ಎಂದು ಅದು ಅಭಿಪ್ರಾಯಪಟ್ಟಿತು.

ಏಕ ಪೋಷಕರು/ಅವಿವಾಹಿತ ತಾಯಂದಿರು ಎಆರ್‌ಟಿ ವಿಧಾನದ ಮೂಲಕ ಮಗುವನ್ನು ಪಡೆದ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಹಾಗೂ ಜನನ ಮತ್ತು ಮರಣದ ಮುಖ್ಯ ರಿಜಿಸ್ಟ್ರಾರ್ ಅವರಿಗೆ ಜನನ ಮತ್ತು ಮರಣಗಳ ನೋಂದಣಿಗಾಗಿ ಪ್ರತ್ಯೇಕ ನಮೂನೆ ರೂಪಿಸಿ ಪ್ರಮಾಣಪತ್ರಗಳನ್ನು ನೀಡಲು ಅಗತ್ಯವಿರುವ ಎಲ್ಲಾ ಕ್ರಮ ತೆಗೆದುಕೊಳ್ಳುವಂತೆ ನ್ಯಾಯಾಲಯ ನಿರ್ದೇಶಿಸಿತು.

"ಅಂತಹ ಅರ್ಜಿದಾರರಿಗೆ, ತಂದೆಯ ಹೆಸರು ಮತ್ತು ಇತರ ವಿವರಗಳಿಗೆ ಸಂಬಂಧಿಸಿದ ಮಾಹಿತಿ ಕ್ಷೇತ್ರವನ್ನು ಒಳಗೊಂಡಿರದ ಪ್ರತ್ಯೇಕ ಅರ್ಜಿಯನ್ನು ನೀಡಬೇಕು…” ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.