sanitary napkins  
ಸುದ್ದಿಗಳು

ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ನ್ಯಾಪ್ಕಿನ್‌ ಒದಗಿಸುವುದು 21ಎ ವಿಧಿ ಜಾರಿಗೆ ಮುಂದಡಿ: ಹೈಕೋರ್ಟ್‌

“ಯುವ ಮಹಿಳೆಯರು ಮತ್ತು ಹೆಣ್ಣು ಮಕ್ಕಳನ್ನು ಸಶಕ್ತಗೊಳಿಸಬೇಕು ಎಂದಾದರೆ ಅವರಿಗೆ ಸೌಕರ್ಯ ಕಲ್ಪಿಸಿ” ಎಂದು‌ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

Bar & Bench

ಶಾಲೆಗಳಲ್ಲಿ ಹದಿಹರೆಯದ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳು ಮತ್ತು ನೈರ್ಮಲ್ಯ ಪ್ಯಾಡ್‌ಗಳನ್ನು (ಸ್ಯಾನಿಟರಿ ನ್ಯಾಪ್ಕಿನ್‌) ನಿಯಮಿತವಾಗಿ ಪೂರೈಸುವುದು ಹೆಣ್ಣು ಮಕ್ಕಳ ಸಬಲೀಕರಣಕ್ಕೆ ನಿದರ್ಶನವಷ್ಟೇ ಅಲ್ಲ ಸಂವಿಧಾನದ 21ಎ ವಿಧಿ ಅಡಿ ಶಿಕ್ಷಣದ ಹಕ್ಕನ್ನು ಜಾರಿಗೊಳಿಸುವ ನಿಟ್ಟಿನೆಡೆಗಿನ ಹೆಜ್ಜೆ ಎಂದು ಗುರುವಾರ ಕರ್ನಾಟಕ ಹೈಕೋರ್ಟ್‌ ಹೇಳಿದೆ.

“6 ರಿಂದ 14 ವಯೋಮಾನದ ಮಕ್ಕಳಿಗೆ ಸಂಬಂಧಿಸಿದಂತೆ ಶಾಲೆಗಳಲ್ಲಿ ಹದಿಹರೆಯದ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ಒದಗಿಸುವುದು ಮತ್ತು ಅವರಿಗೆ ನಿಯಮಿತವಾಗಿ ನೈರ್ಮಲ್ಯ ಪ್ಯಾಡ್‌ಗಳನ್ನು ಒದಗಿಸುವುದು ಇವೆಲ್ಲವೂ ಹೆಣ್ಣು ಮಕ್ಕಳ ಸಬಲೀಕರಣ ಮಾಡುವುದು ಮಾತ್ರವಲ್ಲದೆ ಸಂವಿಧಾನದ 21ಎ ವಿಧಿ ಅನುಷ್ಠಾನದ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಾಗಿದೆ” ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಜೆ ಎಂ ಖಾಜಿ ಅವರಿದ್ದ ವಿಭಾಗೀಯ ಪೀಠ ಹೇಳಿದೆ. 6 ರಿಂದ 14ರ ವಯೋಮಾನದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವು ಮೂಲಭೂತ ಹಕ್ಕಾಗಿದ್ದು, ಸ್ವಾಭಾವಿಕವಾಗಿ ಇದು ಆ ಗುಂಪಿನಲ್ಲಿ ಇರುವ ಹೆಣ್ಣು ಮಕ್ಕಳನ್ನು ಒಳಗೊಳ್ಳಲಿದೆ ಎಂದು ಪೀಠ ಹೇಳಿದೆ.

“ಯುವ ಮಹಿಳೆಯರು ಮತ್ತು ಹೆಣ್ಣು ಮಕ್ಕಳನ್ನು ಸಶಕ್ತಗೊಳಿಸಬೇಕು ಎಂದಾದರೆ ಅವರಿಗೆ ಸೌಕರ್ಯ ಕಲ್ಪಿಸಿ” ಎಂದು ನ್ಯಾಯಾಲಯ ಹೇಳಿದ್ದು, ಇದು ಸಬಲೀಕರಣದ ಮೂಲ ಎಂದಿದೆ.

ಭಾರತೀಯ ಭ್ರಷ್ಟಾಚಾರ ವಿರೋಧಿ ಒಕ್ಕೂಟವು 2018 ರಲ್ಲಿ ಶುಚಿ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೋರಿ ಸಲ್ಲಿಸಿದ್ದ ಮನವಿ ವಿಚಾರಣೆಯನ್ನು ಪೀಠ ನಡೆಸಿತು. ಶಾಲೆ ಮತ್ತು ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡು ಅಧ್ಯಯನ ಮಾಡುತ್ತಿರುವ 10 ರಿಂದ 19ರ ವಯೋಮಾನದ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್ಕಿನ್‌ ನೀಡುವುದಕ್ಕಾಗಿ ಶುಚಿ ಯೋಜನೆ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ 17,06,933 ಹದಿಹರೆಯದ ಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.

ಆರ್ಥಿಕ ಸಮಸ್ಯೆಯಿಂದಾಗಿ 2019-20 ಮತ್ತು 20-21ರ ಸಾಲಿನಲ್ಲಿ ಸ್ಯಾನಿಟರಿ ನ್ಯಾಪ್ಕಿನ್‌ ಖರೀದಿಸಲಾಗಿರಲಿಲ್ಲ. ಇದನ್ನು ಗಮನದಲ್ಲಿರಿಸಿಕೊಂಡು ಪೀಠವು ಸ್ಥಿತಿಗತಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದು, 2021-22ರಲ್ಲಿ ಪ್ರಸ್ತಾಪಿಸಲಾದಂತೆ ಸ್ಯಾನಿಟರ್‌ ನ್ಯಾಪ್ಕಿನ್‌ ಖರೀದಿಸುವುದಕ್ಕೆ ಸಂಬಂಧಿಸಿದಂತೆ ಯಾವಾಗ ಆಡಳಿತಾತ್ಮಕ ಒಪ್ಪಿಗೆ ನೀಡಲಾಗುತ್ತದೆ ಎಂಬುದನ್ನು ತಿಳಿಸುವಂತೆ ನಿರ್ದೇಶಿಸಿತ್ತು. ಅಲ್ಲದೇ ಶುಚಿ ಯೋಜನೆಯನ್ನು 10 ರಿಂದ 19 ವಯೋಮಾನದ ಮಕ್ಕಳಿಗೆ ವಿಸ್ತರಿಸುವ ರಾಜ್ಯ ಸರ್ಕಾರದ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿತ್ತು.

ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ಪ್ರತಿವಾದಿಗಳಿಗೆ ನಿರ್ದೇಶಿಸುವಂತೆಯೂ ಮನವಿಯಲ್ಲಿ ಕೋರಲಾಗಿತ್ತು.

2019ರಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಮತ್ತು ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಜಂಟಿಯಾಗಿ ಸಮೀಕ್ಷೆ ನಡೆಸಿದ್ದು, ಇದರಲ್ಲಿ ರಾಜ್ಯದಲ್ಲಿರುವ 889 ಶಾಲೆಗಳ ಪೈಕಿ ಶೇ. 63ರಷ್ಟು ಶಾಲೆಗಳು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಿದ್ದು, ಅವುಗಳಲ್ಲಿ ಶೇ. 82 ರಷ್ಟು ಸಕ್ರಿಯವಾಗಿವೆ ಎಂದು ಗುರುವಾರ ನಡೆದ ವಿಚಾರಣೆಯಲ್ಲಿ ನ್ಯಾಯಾಲಯಕ್ಕೆ ವಿವರಿಸಲಾಗಿದೆ.

ಪರಿಶೀಲಿಸಲಾಗಿರುವ 889 ಶಾಲೆಗಳ ವಿಳಾಸ ನೀಡುವಂತೆ ಕೆಎಸ್‌ಎಲ್‌ಎಸ್‌ಎಗೆ ಪೀಠವು ಆದೇಶಿಸಿದ್ದು, ಈ ಶಾಲೆಗಳಲ್ಲಿ ಬಾಲಕರು/ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ವಿದ್ಯುತ್‌ ಸಂಪರ್ಕ, ಬಿಸಿಯೂಟ ತಯಾರಿಸಲು ಅಡುಗೆ ಕೋಣೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತ್ಯಾದಿ ಸೌಲಭ್ಯ ಕಲ್ಪಿಸುವ ಸಂಬಂಧ ಸರ್ಕಾರ ಕ್ರಮಕೈಗೊಂಡಿದೆಯೆ ಎಂಬುದನ್ನು ಪರಿಶೀಸಿಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಏಪ್ರಿಲ್‌ 16ಕ್ಕೆ ವಿಚಾರಣೆ ಮುಂದೂಡಲಾಗಿದೆ.