ಅಸ್ಸಾಂ ರಾಜ್ಯದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ನವೀಕರಿಸುವಾಗ ಪ್ರಾಥಮಿಕ ಮತ್ತು ಗಂಭೀರ ದೋಷಗಳು ನುಸುಳಿವೆ. ಇದಕ್ಕಾಗಿ ಸಮಗ್ರವಾದ ರೀತಿಯಲ್ಲಿ ಎನ್‌ಆರ್‌ಸಿಯನ್ನು ಮರುಪರಿಶೀಲನೆಗೆ ಒಳಪಡಿಸಬೇಕಿದೆ ಎಂದು ರಾಜ್ಯದ ಎನ್‌ಆರ್‌ಸಿ ಸಂಚಾಲಕ ಹಿತೇಶ್ ದೇವ್ ಶರ್ಮಾ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ಎನ್‌ಆರ್‌ಸಿಯಲ್ಲಿ ಸೇರ್ಪಡೆಗೊಳಿಸಲು ಸುಮಾರು 50 ಸಾವಿರ ಜನರು ಅರ್ಹವಾಗಿದ್ದಾರೆ. ಆದರೆ, ಅವರ ಹೆಸರುಗಳನ್ನು ಎನ್‌ಆರ್‌ಸಿ ಕರಡಿನಲ್ಲಿ ಕೈಬಿಡಲಾಗಿದೆ ಎಂದು ಶರ್ಮಾ ಹೇಳಿದ್ದಾರೆ. ವಿಸ್ತೃತವಾದ ಮರುಪರಿಶೀಲನೆ ನಡೆಸಿದರೆ ಈ ಸಂಖ್ಯೆ ಹೆಚ್ಚಾಗಬಹುದು ಎಂದೂ ಅವರು ಹೇಳಿದ್ದಾರೆ.
“ದೋಷರಹಿತವಾದ ಸಂಪೂರ್ಣ ಎನ್‌ಆರ್‌ಸಿಗಾಗಿ ಈ ಜನರ ಹೆಸರುಗಳನ್ನು ಎನ್‌ಆರ್‌ಸಿ ಫೈಲಿಂಗ್‌ನಲ್ಲಿ ಸೇರ್ಪಡೆಗೊಳಿಸಬೇಕಿದೆ. ಹೀಗೆ ಮಾಡದಿದ್ದಲ್ಲಿ ಎನ್‌ಆರ್‌ಸಿಯು ತನ್ನ ಸೀಕಾರಾರ್ಹತೆಯನ್ನು ಕಳೆದುಕೊಳ್ಳಲಿದೆ” ಎಂದು ಕಳೆದ ವಾರ ಸುಪ್ರೀಂಗೆ ಸಲ್ಲಿಸಲಾದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಕಾಮರೂಪ ಜಿಲ್ಲೆಯಲ್ಲಿ ಪೂರಕ ಎನ್‌ಆರ್‌ಸಿಗೆ ಮೂಲ ನಿವಾಸಿಗಳು ವಿಭಾಗದಲ್ಲಿ 30,684 ಜನರನ್ನು ಸೇರ್ಪಡೆಗೊಳಿಸಲಾಗಿದ್ದು, ಈ ಪೈಕಿ 7,446 ಮಂದಿ ಅನರ್ಹರು ಎಂದು ಕಂಡುಬಂದಿದೆ. ಮೂಲ ನಿವಾಸಿಗಳು ವಿಭಾಗದ ಹೊರತಾಗಿ 23,345 ಮಂದಿ ಅರ್ಹತೆ ಪಡೆದಿದ್ದಾರೆ. ಮೂಲ ನಿವಾಸಿ ವಿಭಾಗದಲ್ಲಿ 107 ಮಂದಿ ಮಾತ್ರ ಅರ್ಹತೆ ಗಿಟ್ಟಿಸಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಈ ರೀತಿಯಲ್ಲಿ ರಾಜ್ಯದ ಬೇರೆಬೇರೆ ಭಾಗದಲ್ಲಿ ಮರುಪರಿಶೀಲನೆ ನಡೆಸಿದರೆ ಮೂಲ ನಿವಾಸಿ ವಿಭಾಗದಲ್ಲಿ ಅನರ್ಹ ವ್ಯಕ್ತಿಗಳು ಎನ್‌ಆರ್‌ಸಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ದೇಶದ ಹಿತದೃಷ್ಟಿ ಮತ್ತು ಅಸ್ಸಾಂ ವಿದೇಶಗಳ ಜೊತೆ ಗಡಿ ಹಂಚಿಕೊಳ್ಳುವ ಹಿನ್ನೆಲೆಯಲ್ಲಿ ಕಾಲಮಿತಿ ನಿಗದಿಗೊಳಿಸಿ ಎನ್‌ಆರ್‌ಸಿ ಮರುಪರಿಶೀಲನೆಗೆ ಆದೇಶಿಸುವಂತೆ ಶರ್ಮಾ ನ್ಯಾಯಾಲಯವನ್ನುಕೋರಿದ್ದಾರೆ. “ಸಂಪೂರ್ಣವಾದ, ಸಮಗ್ರ ಮತ್ತು ಕಾಲಮಿತಿಯೊಳಗೊಂಡ ಎನ್‌ಆರ್‌ಸಿ ಕರಡು ಮರುಪರಿಶೀಲನೆ ಮತ್ತು ಎನ್ಆರ್‌ಸಿ ಪೂರಕ ಪಟ್ಟಿ ಸೂಕ್ತ ಪರಿಶೀಲನೆಗೆ ನಿರ್ದೇಶನ ನೀಡಬೇಕು” ಎಂದು ಮನವಿಯಲ್ಲಿ ಕೋರಲಾಗಿದೆ.
ಆಯಾ ಜಿಲ್ಲೆಗಳಲ್ಲಿ ಮೇಲ್ವಿಚಾರಣಾ ಸಮಿತಿಯ ಮೇಲ್ವಿಚಾರಣೆಯಲ್ಲಿ ಮರು ಪರಿಶೀಲನೆ ಮಾಡಬೇಕು ಮತ್ತು ಸಮಿತಿಯು ಸಂಬಂಧಪಟ್ಟ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಹೊಂದಿರಬೇಕು ಎಂದು ಹೇಳಲಾಗಿದೆ.
ಎನ್‌ಆರ್‌ಸಿಯಲ್ಲಿ 3.93 ಲಕ್ಷ ಜನರನ್ನು (40 ಲಕ್ಷದಲ್ಲಿ) ಕೈಬಿಡಲಾಗಿದ್ದು, ಇವರಾರೂ ಇದಕ್ಕೆ ತಕರಾರು ಎತ್ತಿ ಮನವಿ ಸಲ್ಲಿಸಿಲ್ಲ ಎಂಬ ಪ್ರಮುಖ ವಿಚಾರವನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಪರಿಶೀಲನೆ ಮತ್ತು ವಿಶ್ಲೇಷಣೆಯ ಬಳಿಕ 3.93 ಲಕ್ಷದಲ್ಲಿ 50,695 ಮಂದಿ ಮೂಲ ನಿವಾಸಿ ಅಥವಾ ಇತರೆ ರಾಜ್ಯಗಳ ಜನರು ವಿಭಾಗದಲ್ಲಿ ಪಟ್ಟಿ ಸೇರ್ಪಡೆಗೆ ಅರ್ಹರಾಗಿದ್ದಾರೆ ಎಂದು ಹೇಳಲಾಗಿದೆ. ಮರುಪರಿಶೀಲನೆ ನಡೆಸಿದರೆ ಈ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಆದಾಗ್ಯೂ, ಈ ವ್ಯಕ್ತಿಗಳು ತಮ್ಮ ಹೊರಗಿಡುವಿಕೆಯನ್ನು ಆಕ್ಷೇಪಿಸದ ಕಾರಣ, ಅವರಿಗೆ ಯಾವುದೇ ಪರಿಹಾರ ಉಳಿದಿಲ್ಲ ಏಕೆಂದರೆ ಪೌರತ್ವ ನಿಯಮಗಳು 2003ರ ವೇಳಾಪಟ್ಟಿಯ 8ನೇ ಷರತ್ತಿನ ಪ್ರಕಾರ ಹಕ್ಕುಗಳು ಮತ್ತು ಆಕ್ಷೇಪಣೆಗಳ ಫಲಿತಾಂಶಗಳಿಂದ ತೃಪ್ತರಾಗದ ವ್ಯಕ್ತಿಗಳು ಮಾತ್ರ ವಿದೇಶಿ ನ್ಯಾಯಮಂಡಳಿಯ ಮುಂದೆ ಮೇಲ್ಮನವಿ ಸಲ್ಲಿಸಬಹುದು.
ಈ ವ್ಯಕ್ತಿಗಳು ಹಕ್ಕು ಮತ್ತು ಆಕ್ಷೇಪಣೆ ಪ್ರಕ್ರಿಯೆಯಲ್ಲಿ ಭಾಗವಹಿಸದ ಕಾರಣ, ಅವರು ಈಗ ವಿದೇಶಿ ನ್ಯಾಯಮಂಡಳಿಯ ಮುಂದೆ ಯಾವುದೇ ಮೇಲ್ಮನವಿ ಸಲ್ಲಿಸಲಾಗದ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಲಾಗಿದೆ.