Cattle slaughter
Cattle slaughter  
ಸುದ್ದಿಗಳು

ಜಾನುವಾರು ವಧೆ ಸುಗ್ರೀವಾಜ್ಞೆಯಡಿ ರೈತರ ವಿಚಾರಣೆ: ಗಂಭೀರ ವಾಸ್ತವಿಕ ತೊಂದರೆಗಳಾಗುತ್ತಿವೆ ಎಂದ ಕರ್ನಾಟಕ ಹೈಕೋರ್ಟ್

Bar & Bench

ರೈತರು ಸೇರಿದಂತೆ ಪಶುಸಂಗೋಪಕರಿಗೆ 2020ರ ಕರ್ನಾಟಕ ಗೋ ವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಸುಗ್ರೀವಾಜ್ಞೆ ಗಂಭೀರ ವಾಸ್ತವಿಕ ತೊಂದರೆ ಉಂಟುಮಾಡುತ್ತಿದೆ ಎಂದು ಕರ್ನಾಟಕ ಹೈಕೋರ್ಟ್‌ ಸೋಮವಾರ ಅಭಿಪ್ರಾಯಪಟ್ಟಿದೆ. ಇದೇ ವೇಳೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಪೀಠವು ಸುಗ್ರೀವಾಜ್ಞೆಯ ವಿರುದ್ಧ ಮಧ್ಯಂತರ ಪರಿಹಾರ ಅರ್ಜಿಯನ್ನು ಬುಧವಾರ ಕೈಗೆತ್ತಿಕೊಳ್ಳಲಿದೆ.

“ಈ ಕಷ್ಟಗಳನ್ನು ಪರಿಗಣಿಸಿ…. ಪ್ರತಿಬಾರಿಯೂ ಅಧಿಕಾರಿಗಳಿಂದ ರೈತ ಪ್ರಮಾಣಪತ್ರ ತರಲು ಸಾಧ್ಯವಿಲ್ಲ. ಉದಾಹರಣೆಗೆ ದನಗಳನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಬೇಕಾಗುತ್ತದೆ. ಆ ಉದ್ದೇಶಕ್ಕೆ ಕೂಡ ಪ್ರಮಾಣಪತ್ರ ಪಡೆಯಬೇಕಾಗುತ್ತದೆ” ಎಂದು ಹೈಕೋರ್ಟ್‌ ಅಭಿಪ್ರಾಯಪಪಟ್ಟಿತು.

ಸುಗ್ರೀವಾಜ್ಞೆ ರದ್ದುಪಡಿಸುವಂತೆ ಕೋರಿ ಮೊಹಮ್ಮದ್ ಆರಿಫ್ ಜಮೀಲ್ ಅವರು ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ದನಗಳ ಸಾಗಾಟಕ್ಕೆ ನಿರ್ಬಂಧ ಹೇರಿರುವ ಸುಗ್ರೀವಾಜ್ಞೆಯ ಸೆಕ್ಷನ್‌ ಐದನ್ನು ಉಲ್ಲೇಖಿಸಿ ನ್ಯಾಯಾಲಯ ಪಶುಸಂಗೋಪಕರಿಗೆ ತೊಂದರೆ ಎದುರಾಗಿದೆ ಎಂದು ಹೇಳಿದೆ. ಸೆಕ್ಷನ್‌ ಐದರ ನಿಬಂಧನೆ ಬಹಳ ಅಸ್ಪಷ್ಟವಾಗಿದ್ದು ಸ್ವತಃ ಗೊಂದಲ ಹುಟ್ಟುಹಾಕಿದೆ ಎಂದು ನ್ಯಾಯಾಲಯ ಹೇಳಿದೆ. ಸೆಕ್ಷನ್ 5 ರ ಉದ್ದೇಶವೆಂದರೆ ವಧೆಗಾಗಿ ಸಾರಿಗೆಯನ್ನು ನಿಷೇಧಿಸಲಾಗಿದೆ. ನೀವು ದನಗಳನ್ನು ಒಂದು ಸ್ಥಳದಿಂದ ಇನ್ನೊಂದಕ್ಕೆ ಕರೆದೊಯ್ಯಲು ಸಾಧ್ಯವಿಲ್ಲ. ಈ ನಿಬಂಧನೆ ಇಲ್ಲದಿದ್ದರೆ ಸಮಸ್ಯೆ ಉದ್ಭವಿಸುತ್ತಿರಲಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ ಈಗಾಗಲೇ ಸುಗ್ರೀವಾಜ್ಞೆಯಡಿ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಈ ಬಗ್ಗೆ ಮಧ್ಯಂತರ ಪರಿಹಾರ ಅಗತ್ಯವಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯವನ್ನು ಕೋರಿದ್ದಾರೆ. ವಿಚಾರಣೆ ವೇಳೆ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲ ಕ್ಲಿಫ್ಟನ್‌ ಡಿ ರೊಸಾರಿಯೊ ಅವರು ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನೂ ಪರಿಗಣಿಸಿದ ನ್ಯಾಯಾಲಯ ಸರ್ಕಾರಕ್ಕೆ ನೋಟಿಸ್‌ ನೀಡಿದೆ. “ಅಂತಿಮವಾಗಿ ಸಾಮಾನ್ಯ ರೈತನಿಗೆ ಏನಾಗುತ್ತದೆ ಎಂಬುದನ್ನು ರಾಜ್ಯ ಸರ್ಕಾರ ಪರಿಗಣಿಸಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ. ರಾಜ್ಯಪಾಲ ವಜೂಭಾಯಿ ವಾಲಾ ಅವರು ಜನವರಿ 5 ರಂದು ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದರು.