ಮಗುವಿನ ಶಾಲಾ ಶುಲ್ಕ ತುಂಬಲು ಸಹಾಯ ಮಾಡುವ ಭರವಸೆ ನೀಡಿ ಮಹಿಳೆಯ ಮೊಬೈಲ್ ನಂಬರ್ ಸಂಗ್ರಹಿಸಿ ಆನಂತರ ಆಕೆಯ ಬೆತ್ತಲೆ ವಿಡಿಯೊ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಿದ ಆರೋಪಕ್ಕೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯವು ಬುಧವಾರ ತಿರಸ್ಕರಿಸಿದೆ.
ನಿರೀಕ್ಷಣಾ ಜಾಮೀನು ಕೋರಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜುಲೈ 22ರಂದು ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಇಂದು ಪ್ರಕಟಿಸಿದರು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಪ್ರಕರಣದ ಹಿನ್ನೆಲೆ: 2019ರ ಅಕ್ಟೋಬರ್‌ನಲ್ಲಿ ಸಂತ್ರಸ್ತೆಯು ತನ್ನ ಮಗುವಿನ ಶಾಲಾ ಶುಲ್ಕ ತುಂಬುವುದಕ್ಕೆ ನೆರವು ಕೋರಿ ಪ್ರಜ್ವಲ್ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಆಕೆಗೆ ಸಹಾಯ ಮಾಡುವ ಭರವಸೆ ನೀಡಿದ್ದ ಪ್ರಜ್ವಲ್ ಆಕೆಯ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದರು. ಆನಂತರ ಆಕೆಗೆ ವಿಡಿಯೋ ಕರೆ ಮಾಡಿ ಬೆತ್ತಲಾಗುವಂತೆ ಪುಸಲಾಯಿಸಿದ್ದರು. ಇದನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಪದೇಪದೇ ಈ ತೆರನಾದ ಬೇಡಿಕೆ ಇಟ್ಟು, ಒಂದೊಮ್ಮೆ ಆಕೆ ತನ್ನ ಮನವಿಗೆ ಓಗೊಡದೇ ಇದ್ದರೆ ಹಿಂದಿನ ಕರೆಯನ್ನು ವಿಡಿಯೋ ಮಾಡಿರುವುದಾಗಿ ಹೇಳಿ ಮತ್ತೆ ಪ್ರಜ್ವಲ್ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎನ್ನಲಾಗಿದೆ.
2024ರ ಏಪ್ರಿಲ್ 21ರಂದು ಸಂತ್ರಸ್ತೆ ಹಾಗೂ ಪ್ರಜ್ವಲ್ ಒಳಗೊಂಡ ಚಿತ್ರ ವೈರಲ್ ಆಗಿದ್ದು, ಇದು ಆಕೆಯ ಪತಿಯ ಗಮನಕ್ಕೆ ಬಂದಿತ್ತು. ಇದರಿಂದ ವಿಚಲಿತವಾಗಿದ್ದ ಆಕೆಯು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಆಕೆಯ ಕುಟುಂಬದವರು ಆಗ ಆಕೆಯನ್ನು ಸಮಾಧಾನಪಡಿಸಿದ್ದರು.
ಸಂತ್ರಸ್ತೆಯ ದೂರು ಆಧರಿಸಿ ಜೂನ್ 10ರಂದು ಐಪಿಸಿ ಸೆಕ್ಷನ್‌ಗಳಾದ 354(ಎ), 354(ಬಿ), 354(ಡಿ) ಮತ್ತು 506 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66ಇ ಮತ್ತು 67 ಅಡಿ ಸಿಐಡಿಯ ಸೈಬರ್ ಅಪರಾಧ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.