ನೆರವಿನ ಸೋಗಿನಲ್ಲಿ ಲೈಂಗಿಕ ದೌರ್ಜನ್ಯ: ನಿರೀಕ್ಷಣಾ ಜಾಮೀನು ಕೋರಿ ವಿಶೇಷ ನ್ಯಾಯಾಲಯಕ್ಕೆ ಪ್ರಜ್ವಲ್‌ ರೇವಣ್ಣ ಅರ್ಜಿ

2019ರಲ್ಲಿ ಸಂತ್ರಸ್ತೆಯು ತನ್ನ ಮಗುವಿನ ಶಾಲಾ ಶುಲ್ಕ ತುಂಬುವುದಕ್ಕೆ ನೆರವು ಕೋರಿ ಪ್ರಜ್ವಲ್‌ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಆಕೆಗೆ ಸಹಾಯ ಮಾಡುವ ಭರವಸೆ ನೀಡಿದ್ದ ಪ್ರಜ್ವಲ್‌ ಆಕೆಯ ಮೊಬೈಲ್‌ ಸಂಖ್ಯೆ ಸಂಗ್ರಹಿಸಿದ್ದರು.
Prajwal Revanna
Prajwal Revanna
Published on

ಮಗುವಿನ ಶಾಲಾ ಶುಲ್ಕ ತುಂಬಲು ಸಹಾಯ ಮಾಡುವ ಭರವಸೆ ನೀಡಿ ಮಹಿಳೆಯ ಮೊಬೈಲ್‌ ನಂಬರ್‌ ಸಂಗ್ರಹಿಸಿ ಆನಂತರ ಆಕೆಯ ಬೆತ್ತಲೆ ವಿಡಿಯೊ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಿದ ಆರೋಪಕ್ಕೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಎಸ್‌ಐಟಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯವು ಬುಧವಾರ ನೋಟಿಸ್‌ ಜಾರಿ ಮಾಡಿದೆ.

ನಿರೀಕ್ಷಣಾ ಜಾಮೀನು ಕೋರಿ ಜೆಡಿಎಸ್‌ ಮಾಜಿ ಸಂಸದ ಪ್ರಜ್ವಲ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ವಿಚಾರಣೆ ನಡೆಸಿದರು. ಎಸ್‌ಐಟಿಗೆ ನೋಟಿಸ್‌ ಜಾರಿ ಮಾಡಿರುವ ನ್ಯಾಯಾಲಯವು ವಿಚಾರಣೆಯನ್ನು ಜುಲೈ 12ಕ್ಕೆ ಮುಂದೂಡಿದೆ.

ಮನೆ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೂನ್‌ 26ರಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯವು ಪ್ರಜ್ವಲ್‌ಗೆ ಜಾಮೀನು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಇದರ ಜೊತೆಗೆ ಬೆಂಗಳೂರಿನ ಸಿಐಡಿ ಪೊಲೀಸರು ದಾಖಲಿಸಿರುವ ಅತ್ಯಾಚಾರ ಪ್ರಕರಣದಲ್ಲಿ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದಾರೆ.

ಪ್ರಕರಣದ ಹಿನ್ನೆಲೆ: 2019ರ ಅಕ್ಟೋಬರ್‌ನಲ್ಲಿ ಸಂತ್ರಸ್ತೆಯು ತನ್ನ ಮಗುವಿನ ಶಾಲಾ ಶುಲ್ಕ ತುಂಬುವುದಕ್ಕೆ ನೆರವು ಕೋರಿ ಪ್ರಜ್ವಲ್‌ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಆಕೆಗೆ ಸಹಾಯ ಮಾಡುವ ಭರವಸೆ ನೀಡಿದ್ದ ಪ್ರಜ್ವಲ್‌ ಆಕೆಯ ಮೊಬೈಲ್‌ ಸಂಖ್ಯೆ ಸಂಗ್ರಹಿಸಿದ್ದರು. ಆನಂತರ ಆಕೆಗೆ ವಿಡಿಯೋ ಕರೆ ಮಾಡಿ ಬೆತ್ತಲಾಗುವಂತೆ ಪುಸಲಾಯಿಸಿದ್ದರು. ಇದನ್ನು ರೆಕಾರ್ಡ್‌ ಮಾಡಿಕೊಂಡಿದ್ದರು. ಪದೇಪದೇ ಈ ತೆರನಾದ ಬೇಡಿಕೆ ಇಟ್ಟು, ಒಂದೊಮ್ಮೆ ಆಕೆ ತನ್ನ ಮನವಿಗೆ ಓಗೊಡದೇ ಇದ್ದರೆ ಹಿಂದಿನ ಕರೆಯನ್ನು ವಿಡಿಯೋ ಮಾಡಿರುವುದಾಗಿ ಹೇಳಿ ಪ್ರಜ್ವಲ್‌ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು ಎನ್ನಲಾಗಿದೆ.

Also Read
ಅತ್ಯಾಚಾರ ಪ್ರಕರಣ: ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಪ್ರಜ್ವಲ್‌ ರೇವಣ್ಣ; ಎಸ್‌ಐಟಿಗೆ ನೋಟಿಸ್‌ ಜಾರಿ

2024ರ ಏಪ್ರಿಲ್‌ 21ರಂದು ಸಂತ್ರಸ್ತೆ ಹಾಗೂ ಪ್ರಜ್ವಲ್‌ ಒಳಗೊಂಡ ಚಿತ್ರ ವೈರಲ್‌ ಆಗಿದ್ದು, ಇದು ಆಕೆಯ ಪತಿಯ ಗಮನಕ್ಕೆ ಬಂದಿತ್ತು. ಇದರಿಂದ ವಿಚಲಿತವಾಗಿದ್ದ ಆಕೆಯು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಆಕೆಯ ಕುಟುಂಬದವರು ಅವಳನ್ನು ಸಮಾಧಾನಪಡಿಸಿದ್ದರು.

ಸಂತ್ರಸ್ತೆಯ ದೂರು ಆಧರಿಸಿ ಜೂನ್‌ 10ರಂದು ಐಪಿಸಿ ಸೆಕ್ಷನ್‌ಗಳಾದ 354(ಎ), 354(ಬಿ), 354(ಡಿ) ಮತ್ತು 506 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66ಇ ಮತ್ತು 67 ಅಡಿ ಸಿಐಡಿಯ ಸೈಬರ್‌ ಅಪರಾಧ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

Kannada Bar & Bench
kannada.barandbench.com