Stop Sexual Harassment
Stop Sexual Harassment 
ಸುದ್ದಿಗಳು

[ಲೈಂಗಿಕ ದೌರ್ಜನ್ಯ] ಉದ್ಯೋಗಿ ವಜಾಕ್ಕೆ ಸೇವಾ ನಿಯಮಗಳನ್ನು ಪಾಲಿಸಬೇಕು ಎಂಬ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್‌

Bar & Bench

ಉದ್ಯೋಗದ ಸ್ಥಳದಲ್ಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಉದ್ಯೋಗಿಯನ್ನು ಸೇವೆಯಿಂದ ವಜಾ ಮಾಡುವಂಥ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವಾಗ ಉದ್ಯೋಗದಾತರು ಸೇವಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಳೆದ ವರ್ಷ ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶಕ್ಕೆ ಈಚೆಗೆ ವಿಭಾಗೀಯ ಪೀಠವು ತಡೆ ನೀಡಿದೆ (ಮಂಗಳೂರು ವಿಶ್ವವಿದ್ಯಾಲಯ ವರ್ಸಸ್‌ ಡಾ. ಅರಬಿ ಯು ಮತ್ತು ಇತರರು).

ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು 2021ರ ಜುಲೈ 20ರಂದು ಹೊರಡಿಸಿದ್ದ ಆದೇಶಕ್ಕೆ ನ್ಯಾಯಮೂರ್ತಿಗಳಾದ ಅಲೋಕ್‌ ಅರಾಧೆ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ತಡೆ ನೀಡಿದೆ.

ಸುಪ್ರೀಂ ಕೋರ್ಟ್‌ ಮೇಧಾ ಕೊತ್ವಾಲ್‌ ಲೆಲೆ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ಹೇಳಿರುವಂತೆ ಮತ್ತೊಂದು ಶಿಸ್ತು ಪಾಲನಾ ತನಿಖೆ ಅಗತ್ಯವಿಲ್ಲ ಎಂದು ಮೇಲ್ಮನವಿದಾರರು ವಾದಿಸಿದ್ದರು. ಇದನ್ನು ಪರಿಗಣಿಸಿದ ವಿಭಾಗೀಯ ಪೀಠವು ಡಾ. ಅರಬಿ ಯು ಮತ್ತು ಮಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಪ್ರಕರಣದಲ್ಲಿನ ಆದೇಶಕ್ಕೆ ತಡೆ ನೀಡಿದೆ.

ಪ್ರಕರಣದ ಹಿನ್ನೆಲೆ

ಉದ್ಯೋಗದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಆರೋಪದ ದೂರು ಬಂದರೆ ಆರೋಪಿಯ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಕ್ಕೆ ಉದ್ಯೋಗದಾತರು ಸೇವಾ ನಿಯಮಗಳನ್ನು ಪಾಲಿಸಬೇಕು ಎಂದು ನ್ಯಾಯಾಲಯ ಹೇಳಿತ್ತು.

ಉದ್ಯೋಗದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ (ನಿಯಂತ್ರಣ, ನಿಷೇಧ ಮತ್ತು ಪರಿಹಾರ) ಕಾಯಿದೆ (ಪೋಶ್‌ ಕಾಯಿದೆ) ಅಡಿ ರಚಿಸಲಾದ ಆಂತರಿಕ ದೂರುಗಳ ಸಮಿತಿಯ ವರದಿಯನ್ನು ವಾಸ್ತವಿಕ ಅಂಶಗಳ ಪತ್ತೆ ವರದಿ ಎಂದು ಪರಿಗಣಿಸಬಹುದು. ಆದರೆ, ವಜಾಕ್ಕೆ ಅದೊಂದನ್ನೇ ಪರಿಗಣಿಸಲಾಗದು ಎಂದು ಪೀಠ ಹೇಳಿತ್ತು.

“ಸೇವಾ ನಿಯಮಗಳು ಜಾರಿಯಲ್ಲಿರುವ ಕಡೆ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಆಂತರಿಕ ದೂರುಗಳ ಸಮಿತಿಯ ವರದಿಯು ವಾಸ್ತವಿಕ ಅಂಶಗಳ ವರದಿ ಅಥವಾ ಪ್ರಾಥಮಿಕ ವರದಿಯಾಗಿರಲಿದೆ. ಯಾವುದೇ ಗಂಭೀರ ಶಿಕ್ಷೆ ವಿಧಿಸುವುದಕ್ಕೂ ಮುನ್ನ ಉದ್ಯೋಗದಾತರು ಸೇವಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಲಿದೆ” ಎಂದು ನ್ಯಾ. ನಾಗಪ್ರಸನ್ನ ಹೇಳಿದ್ದರು.

ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಗುರಿಯಾಗಿದ್ದ ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರೊಫೆಸರ್‌ 60 ವರ್ಷದ ಅರಬಿ ಯು ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನೀಡಿದ್ದ ತೀರ್ಪಿಗೆ ವಿಭಾಗೀಯ ಪೀಠವು ತಡೆ ನೀಡಿದೆ. ಅರಬಿ ಅವರು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದಾಗ 2018ರ ಏಪ್ರಿಲ್‌ನಲ್ಲಿ ವಿದ್ಯಾರ್ಥಿನಿಯೊಬ್ಬರು ರಾಜ್ಯ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.

ವಿದ್ಯಾರ್ಥಿನಿಯ ದೂರನ್ನು ವಿಶ್ವವಿದ್ಯಾಲಯವು ಆಂತರಿಕ ದೂರುಗಳ ಸಮಿತಿಯ ಮುಂದೆ ತನಿಖೆಗೆ ಇಟ್ಟಿತ್ತು. ಸಮಿತಿಯು ಪ್ರೊಫೆಸರ್‌ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳನ್ನು ಎತ್ತಿ ಹಿಡಿದಿತ್ತು. ಇದನ್ನು ಪರಿಗಣಿಸಿ ಅರಬಿ ಅವರಿಗೆ ವಿಶ್ವವಿದ್ಯಾಲಯವು ಸೇವೆಯಿಂದ ವಜಾ ಮಾಡುವುದಕ್ಕೆ ಸಂಬಂಧಿಸಿದಂತೆ ಷೋಕಾಸ್‌ ನೋಟಿಸ್‌ ಜಾರಿ ಮಾಡಿತ್ತು.

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅರುಣ ಶ್ಯಾಮ್‌ ಅವರು ಮೇಲ್ಮನವಿದಾರರನ್ನು ಪ್ರತಿನಿಧಿಸಿದ್ದರು. ಪ್ರತಿವಾದಿಯನ್ನು ವಕೀಲೆ ರೇವತಿ ಆದಿನಾಥ್‌ ನರ್ದೆ ಪ್ರತಿನಿಧಿಸಿದ್ದರು.