ಬಳಕೆದಾರರ ಕೃತ್ಯಗಳಿಗೆ ವಿವಾಹ ಜಾಲತಾಣ ಶಾದಿ ಡಾಟ್ ಕಾಮ್ ಜವಾಬ್ದಾರನಲ್ಲ ಎಂದು ಅಲಾಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ [ಅನುಪಮ್ ಮಿತ್ತಲ್ ಮತ್ತು ತೆಲಂಗಾಣ, ಉತ್ತರ ಪ್ರದೇಶ ಸರ್ಕಾರಗಳ ನಡುವಣ ಪ್ರಕರಣ ].
ಮಾಹಿತಿ ತಂತ್ರಜ್ಞಾನ (ಐಟಿ) ಕಾಯಿದೆ ಪ್ರಕಾರ ಶಾದಿ ಡಾಟ್ ಕಾಮ್ ಮಧ್ಯಸ್ಥ ವೇದಿಕೆಯಷ್ಟೇ ಆಗಿರುವುದರಿಂದ ಅದು ಹೊಣೆಗಾರಿಕೆಯಿಂದ ವಿನಾಯಿತಿ ಪಡೆದಿರುತ್ತದೆ ಎಂದು ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಮತ್ತು ಮದನ್ ಪಾಲ್ ಸಿಂಗ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
ಜಾಲತಾಣದ ಸಂಸ್ಥಾಪಕರು ಮಾಹಿತಿ ವಿನಿಮಯದ ಸಹಾಯಕರಷ್ಟೇ ಆಗಿರುವುದರಿಂದ ಮೂರನೇ ವ್ಯಕ್ತಿ ಜಾಲತಾಣದಲ್ಲಿ ಮಾಡಿದ ಕೃತ್ಯಗಳಿಗೆ ಮಧ್ಯಸ್ಥ ವೇದಿಕೆಯನ್ನು ಹೊಣೆ ಮಾಡಲಾಗದು ಎಂದು ಅದು ತಿಳಿಸಿದೆ. ಅಂತೆಯೇ ವಿವಾಹ ಜಾಲತಾಣದ ಸಂಸ್ಥಾಪಕ ಮತ್ತು ಸಿಇಒ ಅನುಪಮ್ ಮಿತ್ತಲ್ ವಿರುದ್ಧದ ವಂಚನೆ, ಸುಲಿಗೆ ಮತ್ತು ಅಶ್ಲೀಲತೆಯ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಶಾದಿ ಡಾಟ್ ಕಾಮ್ ವಿವಾಹ ಜಾಲತಾಣ ಬಳಕೆದಾರರ ವಿವರಗಳನ್ನು ಸರಿಯಾಗಿ ಪರಿಶೀಲಿಸದ ಕಾರಣ ಜಾಲತಾಣ ಅಶ್ಲೀಲತೆಯ ಪ್ರಚಾರಕ್ಕೆ ಬಳಕೆಯಾಗುತ್ತಿದೆ ಎಂದು 2022ರಲ್ಲಿ ಮಿತ್ತಲ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ವಿವಿಧ ಸೆಕ್ಷನ್‌ಗಳ ಅಡಿ ದೂರು ದಾಖಲಿಸಲಾಗಿತ್ತು.
ಜಾಲತಾಣದಿಂದಾಗಿ ಮಹಿಳೆಯೊಬ್ಬರು ತನ್ನ ಅಶ್ಲೀಲ ವಿಡಿಯೋ ಚಿತ್ರೀಕರಿಸಿ, ಬೆದರಿಕೆ ಒಡ್ಡಿ ಸುಲಿಗೆಗೆ ಯತ್ನಿಸಿದ್ದಾರೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿತ್ತಲ್ ಹಾಗೂ ಜಾಲಾತಾಣದ ಗ್ರಾಹಕ ಸೇವಾ ಕೇಂದ್ರ ತನ್ನ ದೂರಿಗೆ ಸ್ಪಂದಿಸಿಲ್ಲ ಎಂದು ಮಹಿಳೆ ಅಳಲು ತೋಡಿಕೊಂಡಿದ್ದರು.
ಅಭ್ಯರ್ಥಿಗಳ ವಿವರ ಪರಿಶೀಲನೆಗೆ ಸಂಬಂಧಿಸಿದಂತೆ ಮಧ್ಯಸ್ಥ ವೇದಿಕೆಯಾಗಿರುವ ಜಾಲತಾಣ ಖಂಡಿತ ಜವಾಬ್ದಾರನಲ್ಲ ಎಂದು ಸೆಪ್ಟೆಂಬರ್ 23 ರಂದು ನೀಡಿದ ತೀರ್ಪಿನಲ್ಲಿ ನ್ಯಾಯಾಲಯ ತಿಳಿಸಿದೆ.
"ದೂರುಗಳು ಬಂದ ತಕ್ಷಣ ಕ್ರಮ ಕೈಗೊಳ್ಳಲಾಗಿದ್ದು ಮಧ್ಯಸ್ಥ ವೇದಿಕೆ ಅಂದರೆ ಅರ್ಜಿದಾರರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಕಂಪನಿಯು ಐಟಿ ಕಾಯಿದೆಯ ಸೆಕ್ಷನ್ 79 (1) ಮತ್ತು (2) ರ ಅಡಿ ರಕ್ಷಣೆ ಹೊಂದಿದ್ದು ಜಾಲತಾಣವನ್ನು ನಡೆಸುತ್ತಿದ್ದ ಕಂಪನಿ ಖಂಡಿತವಾಗಿಯೂ ಯಾವುದೇ ಕುಮ್ಮಕ್ಕು ನೀಡಿಲ್ಲ" ಎಂದು ಅದು ಹೇಳಿದೆ.
ಮಿತ್ತಲ್ ನಡೆಸುತ್ತಿರುವ ಕಂಪನಿಯನ್ನು ಪ್ರಕರಣದಲ್ಲಿ ಕಕ್ಷಿದಾರನಾಗಿ ಮಾಡದೆ ಇರುವುದರಿಂದ ಪಕ್ಷವನ್ನಾಗಿ ಮಾಡದ ಕಾರಣ ಮಿತ್ತಲ್ ಅವರ ವಿರುದ್ಧ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಮಿತ್ತಲ್ ವಿರುದ್ಧದ ಅಪರಾಧಗಳು ಸಾಬೀತಾಗಿಲ್ಲ ಎಂದ ಅದು, ಆಗ್ರಾ ಪೊಲೀಸರು ಅವರ ವಿರುದ್ಧ ದಾಖಲಿಸಿದ್ದ ಎಫ್ಐಆರ್ ರದ್ದುಗೊಳಿಸಿತು.