
ಶಾದಿ ಡಾಟ್ ಕಾಮ್ ವಿವಾಹ ಜಾಲತಾಣ ಬಳಕೆದಾರರ ವಿವರಗಳನ್ನು ಸರಿಯಾಗಿ ಪರಿಶೀಲಿಸದ ಕಾರಣ ಆ ಬಳಕೆದಾರ ತನಗೆ ಹಣದ ವಿಚಾರದಲ್ಲಿ ವಂಚನೆ ಎಸಗಿದ್ದಾನೆ ಎಂದು ದೂರಿ ಮಹಿಳೆಯೊಬ್ಬರು ಶಾದಿ.ಕಾಮ್ ಜಾಲತಾಣದ ಸಂಸ್ಥಾಪಕ ಅನುಪಮ್ ಮಿತ್ತಲ್ ಅವರ ವಿರುದ್ಧ ಹೂಡಿದ್ದ ಕ್ರಿಮಿನಲ್ ಮೊಕದ್ದಮೆಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ [ಅನುಪಮ್ ಮಿತ್ತಲ್ ಮತ್ತು ತೆಲಂಗಾಣ, ಉತ್ತರ ಪ್ರದೇಶ ಸರ್ಕಾರಗಳ ನಡುವಣ ಪ್ರಕರಣ ].
ತೆಲಂಗಾಣ ಹೈಕೋರ್ಟ್ ಮಿತ್ತಲ್ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ಜೋಯ್‌ಮಲ್ಯ ಬಾಗ್ಚಿ ಅವರಿದ್ದ ಪೀಠ ಮಧ್ಯಂತರ ಆದೇಶ ಹೊರಡಿಸಿತು.
ಶಾದಿ.ಕಾಮ್ ಮೂಲಕ ಭೇಟಿಯಾದ ವ್ಯಕ್ತಿ ತನಗೆ ₹10 ಲಕ್ಷ ವಂಚಿಸಿದ್ದು ಹಣ ಮರುಪಾವತಿ ಮಾಡುವಂತೆ ಒತ್ತಾಯಿಸಿದಾಗ ತನ್ನ ಫೋಟೋಗಳನ್ನು ಮಾರ್ಫ್ ಮಾಡಿ ಪ್ರಕಟಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದರು ಮೂಲ ದೂರಿನಲ್ಲಿ ಮಿತ್ತಲ್ ಹೆಸರಿಲ್ಲದಿದ್ದರೂ, ಬಳಕೆದಾರನ ವಿವರಗಳನ್ನು ಕಲೆ ಹಾಕದ ಹಿನ್ನೆಲೆಯಲ್ಲಿ ನಂತರ ಅವರನ್ನು ಆರೋಪಿಯನ್ನಾಗಿ ಸೇರಿಸಲಾಗಿತ್ತು.
ಏಳು ವರ್ಷಗಳಿಗಿಂತ ಕಡಿಮೆ ಅವಧಿಯ ಶಿಕ್ಷೆ ವಿಧಿಸಬಹುದಾದ ಅಪರಾಧಗಳನ್ನು ಆರೋಪಗಳಲ್ಲಿ ಸೇರಿಸಲಾಗಿರುವುದರಿಂದ, ಮಿತ್ತಲ್ ವಿರುದ್ಧದ ತನಿಖೆ ಮುಂದುವರಿಸಬಹುದು ಎಂದು ಅಭಿಪ್ರಾಯಪಟ್ಟಿದ್ದ ಹೈಕೋರ್ಟ್, ಪ್ರಕರಣದ ಬಗ್ಗೆ ಚರ್ಚಿಸಲು ನಿರಾಕರಿಸಿತ್ತು.
ಆರೋಪಿತ ವ್ಯಕ್ತಿ ಮೊಬೈಲ್ ಒಟಿಪಿ ಮೂಲಕ ತನ್ನ ಪ್ರೊಫೈಲ್ ಅನ್ನು ಅನುಮೋದಿಸಿದ್ದಾನೆ. ಅದರ ಹೊರತಾಗಿ ಯಾವುದೇ ಸರ್ಕಾರಿ ಗುರುತುಪತ್ರವನ್ನು ಅಪ್‌ಲೋಡ್ ಮಾಡಿಲ್ಲ ಎನ್ನುವ ಅಂಶವನ್ನು ಮಿತ್ತಲ್ ನ್ಯಾಯಾಲಯಕ್ಕೆ ತಿಳಿಸಿದರು. ಈ ಅಂಶ ಅವನ ಪ್ರೊಫೈಲ್‌ನಲ್ಲಿ ಗೋಚರಿಸುತ್ತಿತ್ತು. ದೂರುದಾರರು ಆರೋಪಿಯೊಂದಿಗೆ ಶಾದಿ.ಕಾಮ್ ವೇದಿಕೆಯ ಹೊರಗೆ ಸಂವಹನ ನಡೆಸಲು ಸ್ವಯಂ ಮುಂದಾಗಿದ್ದಾರೆ. ಪ್ಲಾಟ್‌ಫಾರ್ಮ್‌ನ ಸುರಕ್ಷತಾ ಮಾರ್ಗಸೂಚಿಗಳು ಹಣಕಾಸಿನ ವಿವರಗಳನ್ನು ಹಂಚಿಕೊಳ್ಳುವುದು ಅಥವಾ ಇತರ ಬಳಕೆದಾರರಿಗೆ ಹಣವನ್ನು ವರ್ಗಾಯಿಸುವುದರ ವಿರುದ್ಧ ಬಳಕೆದಾರರಿಗೆ ಸ್ಪಷ್ಟವಾಗಿ ಎಚ್ಚರಿಕೆ ನೀಡುತ್ತವೆ ಎಂದು ಮಿತ್ತಲ್ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.
ಮುಂದುವರಿದು, ಶಾದಿ ಡಾಟ್ ಕಾಂ ಕೇವಲ ಮಧ್ಯಸ್ಥಗಾರ ವೇದಿಕೆಯಷ್ಟೇ. ಬಳಕೆದಾರರ ಸ್ವತಂತ್ರ ಕ್ರಿಯೆಗಳಿಗೆ ಅದನ್ನು ಕ್ರಿಮಿನಲ್ ಹೊಣೆಗಾರನನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡರು. ವಾದ ಆಲಿಸಿದ ಸುಪ್ರೀಂ ಕೋರ್ಟ್, ಮುಂದಿನ ಎಲ್ಲಾ ಪ್ರಕ್ರಿಯೆಗಳಿಗೆ ತಡೆ ನೀಡಿತು. ಪ್ರಕರಣದ ಬಗ್ಗೆ ತೆಲಂಗಾಣ ಪೊಲೀಸರಿಂದ ಪ್ರತಿಕ್ರಿಯೆ ಕೇಳಿತು.