ಸುದ್ದಿಗಳು

ವಕೀಲ ಅಜ್ಮಿ ಹತ್ಯೆ ವಿಚಾರಣೆಯ ತಡೆಯಾಜ್ಞೆ ಹಿಂಪಡೆದ ಬಾಂಬೆ ಹೈಕೋರ್ಟ್: ಆರೋಪಿಯ ಮನವಿ ತಿರಸ್ಕಾರ

ಸೆಪ್ಟೆಂಬರ್ 2022ರಲ್ಲಿ ಆರೋಪಿಯೊಬ್ಬ ಪ್ರಕರಣವನ್ನು ಮತ್ತೊಂದು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಅರ್ಜಿ ಸಲ್ಲಿಸಿದ ವೇಳೆ, ನಡೆಯುತ್ತಿದ್ದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿತ್ತು.

Bar & Bench

ಮುಂಬೈನ ಕುರ್ಲಾದಲ್ಲಿದ್ದ ತಮ್ಮ ಕಛೇರಿಯಲ್ಲಿ 2010ರಲ್ಲಿ ಗುಂಡಿನ ದಾಳಿಗೆ ತುತ್ತಾಗಿ ಮೃತಪಟ್ಟಿದ್ದ ವಕೀಲ ಶಾಹಿದ್ ಅಜ್ಮಿ ಅವರ ಹತ್ಯೆ ಪ್ರಕರಣದ ವಿಚಾರಣೆಗೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಬಾಂಬೆ ಹೈಕೋರ್ಟ್‌ ಕಳೆದ ವಾರ ತೆರವುಗೊಳಿಸಿದೆ [ಹಸ್ಮುಖ್‌ ಸೋಲಂಕಿ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಸೆಪ್ಟೆಂಬರ್ 2022ರಲ್ಲಿ ತಾನು ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದ ಹೈಕೋರ್ಟ್‌ ಪ್ರಕರಣವನ್ನು ಪ್ರಸ್ತುತ ವಿಚಾರಣೆ ನಡೆಸುತ್ತಿರುವ ಮುಂಬೈನ ಸೆಷನ್ಸ್ ನ್ಯಾಯಾಲಯದಿಂದ ಬೇರೆ ಸೆಷನ್ಸ್‌ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಆರೋಪಿ ಹಸ್ಮುಖ್ ಸೋಲಂಕಿ ಮಾಡಿದ್ದ ಮನವಿಯನ್ನು ತಿರಸ್ಕರಿಸಿತು. ನ್ಯಾಯಾಧೀಶರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಸೋಲಂಕಿ ಹೈಕೋರ್ಟ್‌ ಮೊರೆ ಹೋಗಿದ್ದ.

ಪ್ರಕರಣವನ್ನು ಸುದೀರ್ಘವಾಗಿ ಆಲಿಸಿದ ನಂತರ, ನ್ಯಾ. ಪಿ ಡಿ ನಾಯಕ್ ಅವರಿದ್ದ ಏಕಸದಸ್ಯ ಪೀಠ, ಆದೇಶಕ್ಕಾಗಿ ಅರ್ಜಿಯನ್ನು ಕಾಯ್ದಿರಿಸಿತ್ತು. ಅದೇ ವೇಳೆ ಮುಂದಿನ ಆದೇಶದವರೆಗೆ ಸೆಷನ್ಸ್‌ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಬಾರದು ಎಂದು ಸೂಚಿಸಿತ್ತು.

ಫೆಬ್ರವರಿ 7, 2022 ರಂದು ನೀಡಲಾಗಿರುವ ಆದೇಶದಲ್ಲಿ- ತನ್ನ ಆದೇಶ ಕಾಯ್ದಿರಿಸಿ 5 ತಿಂಗಳ ನಂತರ- ಹೈಕೋರ್ಟ್ ಸೋಲಂಕಿ ಅವರ ಮನವಿಯನ್ನು ತಿರಸ್ಕರಿಸಿದೆ. ಇದರಿಂದ ವಿಚಾರಣೆಯ ಹಾದಿ ಸುಗಮವಾದಂತಾಗಿದೆ.

ಯಾರಿದು ಅಜ್ಮಿ?

ಉಗ್ರರೆಂದು ಹಣೆಪಟ್ಟಿ ಹಚ್ಚಲಾದ ಅಮಾಯಕರ ಪರ ಕಾನೂನು ಹೋರಾಟ ಮಾಡುವುದಕ್ಕೆ ಹೆಸರುವಾಸಿಯಾಗಿದ್ದರು ವಕೀಲ ಅಜ್ಮಿ. ವಕೀಲರಾಗುವ ಮೊದಲು ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ ತಡೆ ಕಾಯಿದೆಯಡಿ ಸ್ವತಃ ಆರೋಪ ಎದುರಿಸಿದ್ದರು ಅಜ್ಮಿ. ಮುಂಬೈ ಸ್ಫೋಟ ಪ್ರಕರಣದಲ್ಲಿ ಅವರನ್ನು ಬಾಲಾಪರಾಧಿ ಎಂದು ಘೋಷಿಸಲಾಗಿತ್ತು. ರಾಜಕಾರಣಿಗಳನ್ನು ಕೊಂದ ಆರೋಪದಡಿ ಅಜ್ಮಿ ಅವರನ್ನು 7 ವರ್ಷಗಳ ಕಾಲ ತಿಹಾರ್ ಜೈಲಿನಲ್ಲಿರಿಸಲಾಗಿತ್ತು. ಆದರೆ ವಿಚಾರಣೆ ಬಳಿಕ ಸುಪ್ರೀಂ ಕೋರ್ಟ್‌ ಅವರನ್ನು ಖುಲಾಸೆಗೊಳಿಸಿತ್ತು.

ಜೈಲಿನಲ್ಲಿದ್ದ ವೇಳೆ ಕಾನೂನು ಪದವಿ ಪಡೆದ ಅಜ್ಮಿ ಮುಂಬೈ 7/11 ರೈಲು ಸ್ಫೋಟ ಪ್ರಕರಣ, 2006ರ ಮಾಲೆಗಾಂವ್ ಸ್ಫೋಟ ಸೇರಿದಂತೆ ವಿವಿಧ ಪ್ರಕರಣಗಳ ಆರೋಪಿಗಳನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಿದ್ದರು. ಮುಂಬೈನ ಕುರ್ಲಾದಲ್ಲಿದ್ದ ತಮ್ಮ ಕಚೇರಿಯಲ್ಲಿ ಅಜ್ಮಿ ಅವರನ್ನು 2010ರ ಫೆಬ್ರವರಿ 11ರಂದು ಮೂವರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು.