Shakereh Namazi and Shradhananda India Today
ಸುದ್ದಿಗಳು

ಮೈಸೂರು ದಿವಾನ್‌ ಮಿರ್ಜಾ ಇಸ್ಮಾಯಿಲ್‌ ಮೊಮ್ಮಗಳ ಕೊಲೆ ಪ್ರಕರಣ: ಕ್ಷಮಾದಾನಕ್ಕೆ ರಾಷ್ಟ್ರಪತಿಗೆ ಮೊರೆ ಇಟ್ಟ ಶ್ರದ್ಧಾನಂದ

ಶಕೀರೆ ಅವರ ₹600 ಕೋಟಿ ಮೌಲ್ಯದ ಆಸ್ತಿ ಕೈವಶ ಮಾಡಿಕೊಳ್ಳಲು ಅವರನ್ನು ಜೀವಂತವಾಗಿ ಬೆಂಗಳೂರಿನ ರಿಚ್ಮಂಡ್‌ ರಸ್ತೆಯಲ್ಲಿರುವ ವೈಭವೋಪೇತ ಬಂಗಲೆಯಲ್ಲಿ ಹೂತಿದ್ದೆ ಎಂದು ಶ್ರದ್ಧಾನಂದ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು ಸಮಾಜವನ್ನು ತಲ್ಲಣಗೊಳಿಸಿತ್ತು

Siddesh M S

ತೊಂಭತ್ತರ ದಶಕದಲ್ಲಿ ಬೆಂಗಳೂರನ್ನೇ ಬೆಚ್ಚಿ ಬೀಳಿಸಿ, ದೇಶದೆಲ್ಲೆಡೆ ಸಂಚಲನಕ್ಕೆ ಕಾರಣವಾಗಿದ್ದ ಶಕೀರೆ ನಮಾಜಿ ಖಲೀಲಿ ಅವರ ಕೊಲೆ ಪ್ರಕರಣದ ಮುಖ್ಯ ಅಪರಾಧಿಯಾಗಿ ಪ್ರಸ್ತುತ ಸೆರೆವಾಸದಲ್ಲಿರುವ ಸ್ವಯಂ ಘೋಷಿತ ದೇವಮಾನವ ಸ್ವಾಮಿ ಶ್ರದ್ಧಾನಂದ ಅಲಿಯಾಸ್‌ ಮುರಳಿ ಮನೋಹರ್‌ ಮಿಶ್ರಾ ಅವರು ರಾಷ್ಟ್ರಪತಿಗೆ ಕ್ಷಮಾದಾನ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಜನಾನುರಾಗಿ ಕೆಲಸಗಳ ಮೂಲಕ ಖ್ಯಾತರಾಗಿದ್ದ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ ಮೊಮ್ಮಗಳಾದ ಸೌಂದರ್ಯವತಿ ಶಕೀರೆ ನಮಾಜಿ (ಗುಲಾಮ್‌ ಹುಸೈನ್‌ ನಮಾಜಿ ಮತ್ತು ಗೌಹರ್‌ ತಾಜ್‌ ಬೇಗಂ ಪುತ್ರಿ) ಅವರನ್ನು ಅಪರಾಧಿ ಶ್ರದ್ಧಾನಂದ ಪ್ರಜ್ಞೆ ತಪ್ಪಿಸಿ ಜೀವಂತವಾಗಿ ಹೂಳುವ ಮೂಲಕ ಕೊಲೆಗೈದಿದ್ದ ಅತ್ಯಂತ ಅಮಾನುಷ ಪ್ರಕರಣ ಇದಾಗಿತ್ತು. ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಶ್ರದ್ಧಾನಂದ 2011ರಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದಿಂದ ತವರು ರಾಜ್ಯವಾದ ಮಧ್ಯಪ್ರದೇಶದ ಸಾಗರ್‌ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಗೊಂಡಿದ್ದರು. 83 ವರ್ಷದ ಶ್ರದ್ದಾನಂದ ಕಳೆದ 27 ವರ್ಷಗಳಿಂದ ಜೈಲು ವಾಸಿಯಾಗಿದ್ದಾರೆ.

ಸಾಗರ್‌ ಕೇಂದ್ರ ಕಾರಾಗೃಹಕ್ಕೆ ಭಾನುವಾರ ವೀಕ್ಷಣೆಗೆ ತೆರಳಿದ್ದ ಜಿಲ್ಲಾ ನ್ಯಾಯಾಧೀಶರಾದ ದೇವ್‌ ನಾರಾಯಣ್‌ ಮಿಶ್ರಾ ಅವರಿಗೆ ಜೈಲು ವಾಸದ ಸಂದರ್ಭದಲ್ಲಿ ಸನ್ನಡತೆ ತೋರಿರುವುದರಿಂದ ಕ್ಷಮಾದಾನ ನೀಡುವಂತೆ ಶ್ರದ್ಧಾನಂದ ಮನವಿ ಮಾಡಿದ್ದಾಗಿ ತಿಳಿದು ಬಂದಿದೆ.

ಸಾಮಾಜಿಕ ಕಟ್ಟಲೆ ವಿರೋಧಿಸಿ ಶ್ರದ್ಧಾನಂದ ವರಿಸಿದ್ದ ಶಕೀರೆ

ಶಕೀರೆ ನಮಾಜಿ ಅವರು ತಮ್ಮ ಮೊದಲ ಪತಿಯಾದ, ಇರಾನ್‌ ಮತ್ತು ಆಸ್ಟ್ರೇಲಿಯಾದಲ್ಲಿ ಭಾರತದ ರಾಯಭಾರಿಯಾಗಿದ್ದ ಚಿಕ್ಕಮ್ಮನ ಮಗ ಅಕ್ಬರ್‌ ಖಲೀಲಿ ಅವರಿಗೆ 1985ರಲ್ಲಿ ವಿಚ್ಚೇದನ ನೀಡಿದ್ದರು. ಮರು ವರ್ಷ ಅವರು ಸ್ವಯಂಘೋಷಿತ ದೇವಮಾನವ ಎಂದು ಬಿಂಬಿಸಿಕೊಂಡಿದ್ದ ಶ್ರದ್ಧಾನಂದ ಅವರನ್ನು ವರಿಸಿದ್ದರು. ಇದಕ್ಕೂ ಮುನ್ನ, 1982ರಲ್ಲಿ ಮೊದಲ ಬಾರಿಗೆ ಅಕ್ಬರ್‌ ಖಲೀಲಿ ಮತ್ತು ಶಕೀರೆ ಅವರನ್ನು ಶ್ರದ್ಧಾನಂದ ಬೆಂಗಳೂರಿನಲ್ಲಿ ಭೇಟಿ ಮಾಡಿದ್ದರು. ಆ ಬಳಿಕ ಇರಾನ್‌ಗೆ ರಾಯಭಾರಿಯಾಗಿ ತೆರಳಿದ್ದ ಖಲೀಲಿ ಅಲ್ಲಿಂದ ವಾಪಸಾದ ಆರು ತಿಂಗಳಲ್ಲಿ ಶಕೀರೆ ಅವರಿಂದ ವಿಚ್ಚೇದನ ಪಡೆದುಕೊಂಡಿದ್ದರು.

Shakereh Namazi and Shradhananda

ಆನಂತರ, ಆರು ತಿಂಗಳ ಬಳಿಕ 1986ರಲ್ಲಿ “ಕುಟುಂಬವನ್ನು ತೊರೆದು ಸಾಮಾಜಿಕ ಕಟ್ಟಲೆಗಳನ್ನು ಮೀರಿ” ಶಕೀರೆ ಅವರು ಶ್ರದ್ಧಾನಂದ ಅವರ ಕೈ ಹಿಡಿದಿದ್ದರು. ಇದರ ಬೆನ್ನಿಗೇ, ಶಕೀರೆ ಆಸ್ತಿ ಮತ್ತು ಹಣದ ಮೇಲೆ ಹಿಡಿತ ಸಾಧಿಸಲು ಶ್ರದ್ಧಾನಂದ ಪ್ರಯತ್ನಿಸುತ್ತಿದ್ದ ಆರೋಪವಿತ್ತು. ಮೊದಲ ಪತಿ ಖಲೀಲಿ ಅವರೊಂದಿಗಿನ ದಾಂಪತ್ಯದಲ್ಲಿ ಶಕೀರೆ ಅವರಿಗೆ ನಾಲ್ವರು ಪುತ್ರಿಯರಿದ್ದು, ಆಸ್ತಿಯನ್ನು ಅವರಿಗೆ ನೀಡುವ ವಿಚಾರದಲ್ಲಿ ಶಕೀರೆ-ಶ್ರದ್ಧಾನಂದ ನಡುವೆ ವೈಮನಸ್ಸು ಉಂಟಾಗಿತ್ತು. ವೈಮನಸ್ಸು ತಾರಕಕ್ಕೇರಿದ ಹಿನ್ನೆಲೆಯಲ್ಲಿ ಆಸ್ತಿಯನ್ನು ವಶಪಡಿಸಿಕೊಳ್ಳಲು ಶಕೀರೆ ಅವರನ್ನು ಕೊಲೆ ಮಾಡುವ ಸಂಚನ್ನು ಶ್ರದ್ಧಾನಂದ ರೂಪಿಸಿ ಕಾರ್ಯಗತಗೊಳಿಸಿದ್ದ ತನಿಖೆಯಿಂದ ಬಯಲಿಗೆ ಬಂದಿತ್ತು.

ಮನೆಯಲ್ಲಿ ಶಕೀರೆ ಅಸ್ಥಿ ಪಂಜರ ಪತ್ತೆ!

1991ರ ಏಪ್ರಿಲ್‌ 28ರಂದು ಮನೆ ಕೆಲಸದವರಿಗೆ ರಜೆ ನೀಡಿದ್ದ ಶ್ರದ್ಧಾನಂದ ಶಕೀರೆ ಅವರಿಗೆ ಟೀಯಲ್ಲಿ ಮಾದಕ ದ್ರವ್ಯ ಮಿಶ್ರಣ ಸೇರಿಸಿ ನೀಡಿದ್ದರು. ಇದರಿಂದ ಶಕೀರೆ ಪ್ರಜ್ಞಾಹೀನಗೊಂಡಿದ್ದರು. ಬಂಗಲೆಯ ಮಧ್ಯದಲ್ಲೇ ಭೂಮಿ ಅಗೆದು ಸಿದ್ಧಪಡಿಸಲಾಗಿದ್ದ ಶವಪೆಟ್ಟಿಗೆಗೆ ಪ್ರಜ್ಞಾಹೀನರಾಗಿದ್ದ ಶಕೀರೆ ಅವರ ದೇಹವನ್ನು ಹಾಕಿ ಮುಚ್ಚಲಾಗಿತ್ತು. ಅಗೆದಿದ್ದದ್ದ ಭೂಮಿಯನ್ನು ವ್ಯವಸ್ಥಿತವಾಗಿ ಮುಚ್ಚಲಾಗಿತ್ತು. ಉಸಿರುಗಟ್ಟಿದ ಶಕೀರೆ ಶವಪೆಟ್ಟಿಗೆಯಲ್ಲಿಯೇ ಅಸುನೀಗಿದ್ದರು. “ಅಮ್ಮನ (ಶಾಕೀರೆ) ದೇಹವನ್ನು ಹೂಳಾಗಿದ್ದ ಸ್ಥಳದಲ್ಲೇ ಶ್ರದ್ಧಾನಂದ ಹಲವು ಮೋಜಿನ ಕೋಟಗಳನ್ನು ಆಯೋಜಿಸಿದ್ದ” ಎಂದು ಶಕೀರೆ ಎರಡನೇ ಪುತ್ರಿ ಸಬಾ ಆನಂತರ ಹೇಳುವ ಮೂಲಕ ಅಪರಾಧಿಯ ಪೈಶಾಚಿಕ ಮನಸ್ಥಿತಿಯನ್ನು ಹೊರಗೆಡಹಿದ್ದರು.

1991ರಲ್ಲಿ ತಾಯಿ ಶಕೀರೆ ಅನುಪಸ್ಥಿತಿಯನ್ನು ಗುರುತಿಸಿದ್ದ ಅವರ ಪುತ್ರಿ ಸಬಾ ಅವರು ಹಲವು ಬಾರಿ ಅಮ್ಮನ ಬಗ್ಗೆ ಮಲ ತಂದೆಯಾದ ಶ್ರದ್ಧಾನಂದ ಅವರನ್ನು ವಿಚಾರಿಸಿದ್ದರು. ಇದಕ್ಕೆ ಸ್ಪಷ್ಟ ಉತ್ತರ ನೀಡದ ಶ್ರದ್ಧಾನಂದ ವೈಭೋಗದ ಜೀವನದಲ್ಲಿ ಮುಳುಗಿ ಹೋಗಿದ್ದರು. ಆತಂಕಗೊಂಡು ಸಬಾ 1992ರಲ್ಲಿ ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶಕೀರೆ ಕುಟುಂಬ, ಸ್ನೇಹಿತರು ಮತ್ತು ತನಿಖಾ ಸಂಸ್ಥೆಗಳ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರಿಸದ ಶ್ರದ್ಧಾನಂದ ಅವರು ಪತ್ನಿ ಶಾಶ್ವತವಾಗಿ ಪ್ರವಾಸಕ್ಕೆ ತೆರಳಿದ್ದಾರೆ ಎಂದು ಉತ್ತರಿಸಿದ್ದರು.

ಮೂರು ವರ್ಷಗಳ ಕಾಲ ಸುದೀರ್ಘವಾಗಿ ವಿಚಾರಣೆ ನಡೆಸಿದ್ದ ಪೊಲೀಸರಿಗೆ ಅಂತಿಮವಾಗಿ ಮನೆ ಕೆಲಸದವರ ಹೇಳಿಕೆಯ ಅನುಸಾರ 1994ರಲ್ಲಿ ಶಕೀರೆ ಅವರಿಗೆ ಸೇರಿದ್ದ ಬಂಗಲೆಯಲ್ಲಿ ಶೋಧ ಕಾರ್ಯ ನಡೆಸಿದ್ದಾಗ ಬಂಗಲೆಯಲ್ಲಿ ಅಸ್ಥಿ ಪಂಜರ ದೊರೆತಿತ್ತು. ಅಪರಾಧದ ಕುರಿತಾದ ವಿವರಗಳು ಹೊರಬರತೊಡಗಿದಂತೆ ಅದು ನಾಗರಿಕ ಸಮಾಜವನ್ನು ಆಘಾತಕ್ಕೆ ದೂಡಿತ್ತು.

ಶಕೀರೆಯವರ ರೂ. 600 ಕೋಟಿ (ಅಂದಿನ ಬೆಲೆ) ಮೌಲ್ಯದ ಆಸ್ತಿಯನ್ನು ಕೈವಶ ಮಾಡಿಕೊಳ್ಳಲು ಅವರನ್ನು ಜೀವಂತವಾಗಿ ಬೆಂಗಳೂರಿನ ರಿಚ್ಮಂಡ್‌ ರಸ್ತೆಯಲ್ಲಿರುವ ವೈಭವೋಪೇತ ಬಂಗಲೆಯ ಮಧ್ಯದಲ್ಲಿ ಶವಪೆಟ್ಟಿಗೆಯಲ್ಲಿ ಹೂತಿದ್ದಾಗಿ ತನಿಖೆಯ ವೇಳೆ ಶ್ರದ್ಧಾನಂದ ಒಪ್ಪಿಕೊಂಡಿದ್ದರು. ಅಪರಾಧಿಯನ್ನು 1994ರ ಏಪ್ರಿಲ್‌ 30ರಂದು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಆಸ್ತಿಯ ಅಧಿಕಾರ ಮತ್ತು ವಿಲ್‌ ಅನ್ನು ಶ್ರದ್ಧಾನಂದ ಹೆಸರಿಗೆ ವರ್ಗಾಯಿಸಿದ್ದ ಬಳಿಕ ಆಕೆಯನ್ನು ಕೊಲೆ ಮಾಡಲಾಗಿತ್ತು ಎಂಬ ವಿಚಾರವನ್ನು ಪೊಲೀಸರು ತನಿಖೆಯ ಸಂದರ್ಭದಲ್ಲಿ ಪತ್ತೆ ಹಚ್ಚಿದ್ದರು. ಈ ಘಟನೆಯು ಭಾರತದ ಕ್ರಿಮಿನಲ್‌ ಇತಿಹಾಸದಲ್ಲಿ ಅತ್ಯಂತ ಘೋರ ಪ್ರಕರಣಗಳಲ್ಲಿ ಒಂದಾಗಿ ವರದಿಯಾಗಿದೆ.

ಹಲವು ಮೊದಲುಗಳ ತನಿಖೆ

ಅಪರಾಧ ಪ್ರಕರಣದಲ್ಲಿ ಮೃತದೇಹವನ್ನು ಹೊರ ತೆಗೆಯುವುದನ್ನು ವಿಡಿಯೊದಲ್ಲಿ ದಾಖಲಿಸಿದ ಮೊದಲ ಪ್ರಕರಣ ಇದಾಗಿದ್ದು, ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಮೈಲುಗಲ್ಲಾಗಿದೆ. ಭೂಮಿಯಿಂದ ಹೊರತೆಗೆಯಲಾದ ಕಳೇಬರದ ವಿಡಿಯೊ ಮತ್ತು ವಂಶವಾಹಿ ಪರೀಕ್ಷೆಯನ್ನು ಸಾಕ್ಷ್ಯವನ್ನಾಗಿ ಪರಿಗಣಿಸಿದ ದೇಶದ ಮೊದಲ ಪ್ರಕರಣ ಸಹ ಇದು ಎಂದು ದಾಖಲಾಗಿದೆ.

ಗಲ್ಲು ಶಿಕ್ಷೆ ಎತ್ತಿ ಹಿಡಿದಿದ್ದ ಕರ್ನಾಟಕ ಹೈಕೋರ್ಟ್‌

1997ರಲ್ಲಿ ಪ್ರಕರಣದ ವಿಚಾರಣೆ ಆರಂಭವಾಯಿತು. 2005ರಲ್ಲಿ ಬೆಂಗಳೂರಿನ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಬಿ ಎಸ್‌ ತೋಟದ್‌ ಅವರು ಶ್ರದ್ಧಾನಂದಗೆ ಗಲ್ಲು ಶಿಕ್ಷೆ ವಿಧಿಸಿದ್ದರು. “ಸಂತ್ರಸ್ತ ಕುಟುಂಬಕ್ಕೆ ಮತ್ತು ಶಾಂತಿಯುತವಾಗಿ ಬದುಕುವ ಸಮಾಜದಲ್ಲಿ ಈ ಘಟನೆ ಭಾರಿ ಭಯ ಸೃಷ್ಟಿಸಿದೆ ಎಂಬುದು ಲಭ್ಯವಿರುವ ದಾಖಲೆಗಳು ಮತ್ತು ಪ್ರಕರಣದ ಸ್ಥಿತಿಗತಿಯಿಂದ ತಿಳಿಯುತ್ತದೆ. ಅಪರಾಧಿಯ ಶಿಕ್ಷೆ ಕಡಿತ ಮಾಡುವ ಪರಿಸ್ಥಿತಿ ಅಥವಾ ದಾಖಲೆಗಳು ಲಭ್ಯವಿಲ್ಲ… ಲಾಭದ ಉದ್ದೇಶಕ್ಕಾಗಿ ಕೊಲೆ ಮಾಡುವ ವಿಧಾನದ ಸ್ವರೂಪಕ್ಕೆ ಸಂಬಂಧಿಸಿದಂತೆ ಇದು ಮರಣದಂಡನೆಗೆ ಸೂಕ್ತವಾದ ಪ್ರಕರಣವಾಗಿದೆ” ಎಂದು ನ್ಯಾ. ತೋಟದ್‌ ತೀರ್ಪಿನಲ್ಲಿ ಹೇಳಿದ್ದರು. ಅಲ್ಲದೇ, ಹೈಕೋರ್ಟ್‌ ಮರಣದಂಡನೆ ಖಾತರಿ ಪಡಿಸುವವರೆಗೆ ಅವರನ್ನು ಗಲ್ಲಿಗೇರಿಸಿದಂತೆ ನ್ಯಾಯಮೂರ್ತಿಗಳು ಜೈಲು ಅಧಿಕಾರಿಗಳಿಗೆ ಸೂಚಿಸಿದ್ದರು.

2005ರ ಸೆಪ್ಟೆಂಬರ್‌ 12ರಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಸ್‌ ಆರ್‌ ಬನ್ನೂರಮಠ ಮತ್ತು ಎ ಸಿ ಕಬ್ಬಿನ್‌ ಅವರಿದ್ದ ವಿಭಾಗೀಯ ಪೀಠವು ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಎತ್ತಿ ಹಿಡಿದಿದ್ದಲ್ಲದೇ ಇದು “ಅಪರೂಪದಲ್ಲಿ ಅಪರೂಪದ ಪ್ರಕರಣ” ಎಂದಿತ್ತು. “ಆರೋಪಿಯು ತನ್ನ ಪತ್ನಿಯನ್ನು ಅತ್ಯಂತ ಪೈಶಾಚಿಕವಾಗಿ ಮತ್ತು ವ್ಯವಸ್ಥಿತವಾಗಿ ಕೊಲೆ ಮಾಡಿದ್ದಾರೆ. ಹೀಗಾಗಿ, ಆತನಿಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯು ಸರಿಯಾಗಿದೆ. ಇಂಥ ಹೀನ ಕೃತ್ಯಕ್ಕೆ ಸಹಿಷ್ಣುತೆ ತೋರುವುದು ಅನಗತ್ಯ ಮತ್ತು ಅವಿವೇಕ ಎನಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಗಲ್ಲು ಶಿಕ್ಷೆ ವಿಧಿಸಿರುವ ಸೆಷನ್ಸ್‌ ನ್ಯಾಯಾಲಯದ ತೀರ್ಪು ಸಮರ್ಥನೀಯ” ಎಂದು ವಿಭಾಗೀಯ ಪೀಠ ತೀರ್ಪು ಬರೆದಿತ್ತು.

ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿಸಿದ್ದ ಸುಪ್ರೀಂ

ಕರ್ನಾಟಕ ಹೈಕೋರ್ಟ್‌ನ ತೀರ್ಪು ಪ್ರಶ್ನಿಸಿ ಶ್ರದ್ಧಾನಂದ ಸಲ್ಲಿಸಿದ್ದ ಮೇಲ್ಮನವಿಯನ್ನು ಆಧರಿಸಿ 2007ರಲ್ಲಿ ಸುಪ್ರೀಂ ಕೋರ್ಟ್‌ ಪ್ರತ್ಯೇಕ ತೀರ್ಪು ಪ್ರಕಟಿಸಿತ್ತು. ಹೀಗಾಗಿ, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿತ್ತು. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಅಶೋಕ್‌ ಭಾನ್‌ ಮತ್ತು ತರುಣ್‌ ಚಟರ್ಜಿ ಅವರ ನೇತೃತ್ವದ ವಿಭಾಗೀಯ ಪೀಠವು 2008ರ ಜುಲೈ 22ರಂದು ಶ್ರದ್ಧಾನಂದಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಆಜೀವ ಶಿಕ್ಷೆಯನ್ನಾಗಿ ಬದಲಾಯಿಸಿ ತೀರ್ಪು ಪ್ರಕಟಿಸಿತ್ತು.