ಅಪರಾಧಿ ಕ್ಷಮಾಪಣೆ ಅರ್ಜಿ ಸಲ್ಲಿಸಲಿ ಎಂದು ಅನಿರ್ದಿಷ್ಟಾವಧಿಗೆ ಗಲ್ಲು ಶಿಕ್ಷೆ ಮುಂದೂಡಲಾಗದು: ಮದ್ರಾಸ್‌ ಹೈಕೋರ್ಟ್‌

“ಅಪರಾಧಿಯು ಕ್ಷಮಾಪಣೆ ಮನವಿ ಸಲ್ಲಿಸುತ್ತಾರೆ ಎಂದು ನ್ಯಾಯಿಕವಾಗಿ ಎತ್ತಿ ಹಿಡಿದಿರುವ ಶಿಕ್ಷೆಯನ್ನು ನ್ಯಾಯಾಲಯವು ಅನಿರ್ದಿಷ್ಟಾವಧಿಗೆ ಮುಂದೂಡಲಾಗದು” ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ.
Death Penalty
Death Penalty

ಗಲ್ಲು ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ ಕ್ಷಮಾದಾನ ಮನವಿ ಸಲ್ಲಿಸುವ ಹಕ್ಕನ್ನು ಅನುಮಾನರಹಿತವಾಗಿ ಹೊಂದಿದ್ದಾರೆ. ಹಾಗೆಂದು ಅಪರಾಧಿ ಎಂದು ಘೋಷಿತನಾದ ವ್ಯಕ್ತಿಯು ಕ್ಷಮಾದಾನ ಮನವಿ ಸಲ್ಲಿಸುವವರೆಗೆ ಗಲ್ಲು ಶಿಕ್ಷೆ ಜಾರಿಗೊಳಿಸುವುದನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗದು ಎಂದು ಈಚೆಗೆ ಮದ್ರಾಸ್‌ ಹೈಕೋರ್ಟ್‌ ಹೇಳಿದೆ.

“ಗಲ್ಲು ಶಿಕ್ಷೆಗೆ ಗುರಿಯಾದ ವ್ಯಕ್ತಿ ಕ್ಷಮಾದಾನ ಕೋರಿಕೆ ಸಲ್ಲಿಸಲು ಹಕ್ಕಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಹಕ್ಕಿನ ಚಲಾವಣೆ ಇನ್ನೂ ಅಪರಾಧಿಯ ಅಧಿಕಾರವಾಗಿದೆ ಎಂಬುದನ್ನು ಮರೆಮಾಚಲಾಗದು. ಆದರೆ, ಅಪರಾಧಿಯು ಕ್ಷಮಾಪಣೆ ಮನವಿ ಸಲ್ಲಿಸುತ್ತಾರೆ ಎಂದು ನ್ಯಾಯಿಕವಾಗಿ ಎತ್ತಿ ಹಿಡಿದಿರುವ ಶಿಕ್ಷೆಯನ್ನು ನ್ಯಾಯಾಲಯವು ಅನಿರ್ದಿಷ್ಟಾವಧಿಗೆ ಮುಂದೂಡಲಾಗದು” ಎಂದು ನ್ಯಾಯಮೂರ್ತಿಗಳಾದ ಪಿ ಎನ್‌ ಪ್ರಕಾಶ್‌ ಮತ್ತು ವಿ ಶಿವಜ್ಞಾನಂ ಅವರಿದ್ದ ವಿಭಾಗೀಯ ಪೀಠವು ಕಳೆದ ವಾರ ಹೇಳಿದೆ.

ಗಲ್ಲು ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 376 (2)(ಎಫ್‌) ಮತ್ತು (ಜಿ) (12 ವಯೋಮಾನದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರ), 302 (ಕೊಲೆ), 34 (ಏಕೈಕ ಉದ್ದೇಶಕ್ಕಾಗಿ ಹಲವರಿಂದ ದುಷ್ಕೃತ್ಯ), 364ಎ (ಹಣಕ್ಕೆ ಬೇಡಿಕೆ ಇಟ್ಟು ಕಿಡ್ನಾಪ್‌ ಇತ್ಯಾದಿ), 120ಬಿ (ಕ್ರಿಮಿನಲ್‌ ಪಿತೂರಿ), 201 (ಸಾಕ್ಷ್ಯ ನಾಶ, ತಪ್ಪು ಮಾಹಿತಿ ನೀಡಿಕೆ) ಅಡಿ ಅಪರಾಧಿ ಎಂದು ಘೋಷಿಸಲ್ಪಟ್ಟಿರುವ ಪ್ರಕರಣ ಇದಾಗಿದೆ.

ಅಪರಾಧಗಳನ್ನು ಪರಿಗಣಿಸಿ ಕೊಯಮತ್ತೂರಿನ ಮಹಿಳಾ ನ್ಯಾಯಾಲಯವು 2012ರಲ್ಲಿ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನು ಹೈಕೋರ್ಟ್‌ ಕಾಯಂಗೊಳಿಸಿತ್ತು. ತೀರ್ಪು ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್‌ ಸಹ ಅಪರಾಧಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.

ರಾಜ್ಯಪಾಲರಿಗೆ ಕ್ಷಮಾಪಣೆ ಕೋರಿ ಮನವಿ ಸಲ್ಲಿಸಲಾಗುತ್ತಿದೆ ಎಂದು ಅಪರಾಧಿಯ ಸಂಬಂಧಿಯು ಕಡಲೂರಿನ ಕೇಂದ್ರ ಕಾರಾಗೃಹದ ಮೇಲ್ವಿಚಾರಕರಿಗೆ 2019ರ ನವೆಂಬರ್‌ನಲ್ಲಿ ಮನವಿ ಸಲ್ಲಿಸಿದ್ದರು. ಕೆಲವೇ ದಿನಗಳ ಬಳಿಕ ವಿಚಾರಣಾಧೀನ ನ್ಯಾಯಾಲಯವು 2019ರ ನವೆಂಬರ್‌ 18ರಂದು ಗಲ್ಲು ಶಿಕ್ಷೆಯನ್ನು 2019ರ ಡಿಸೆಂಬರ್‌ 12ಕ್ಕೆ ನಿಗದಿಗೊಳಿಸಲಾಗಿದೆ ಎಂದಿತ್ತು. ಆತುರಾತುರದಲ್ಲಿ ಗಲ್ಲು ಶಿಕ್ಷೆ ಜಾರಿಗೊಳಿಸಲಾಗುತ್ತಿದೆ ಎಂದು ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಮದ್ರಾಸ್‌ ಹೈಕೋರ್ಟ್‌ನಲ್ಲಿ ಅರ್ಜಿದಾರರು ಪ್ರಶ್ನಿಸಿದ್ದರು.

2019ರ ನವೆಂಬರ್‌ 26ರಂದು ಮುಂದಿನ ಆದೇಶದವರೆಗೆ ಹೈಕೋರ್ಟ್‌ ಗಲ್ಲು ಶಿಕ್ಷೆ ತಡೆ ನೀಡಿತ್ತು. ಬಳಿಕ ಒಂದು ವರ್ಷದ ವರೆಗೆ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಹಳೆಯ ಪ್ರಕರಣಗಳ ವಿಲೇವಾರಿಗೆ ಸಂಬಂಧಿಸಿದಂತೆ ಅವುಗಳನ್ನು ವಿಚಾರಣೆಗೆ ನಿಗದಿಗೊಳಿಸುವಂತೆ ನ್ಯಾಯಾಲಯ ಆದೇಶಿಸಿದ್ದರಿಂದ ಅದು ಮತ್ತೆ ಬೆಳಕಿಗೆ ಬಂದಿದೆ ಎಂದು ಪೀಠ ಹೇಳಿದೆ. ಮಾರ್ಚ್‌ 1ರಂದು ಅಂತಿಮ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಪೀಠವು ಅರ್ಜಿದಾರರು ಇನ್ನಷ್ಟೇ ಕ್ಷಮಾಪಣೆ ಮನವಿ ಸಲ್ಲಿಸಬೇಕಿದೆ ಎಂದಿದೆ. ಗಲ್ಲು ಶಿಕ್ಷೆ ವಿರೋಧಿ ಕಾರ್ಯಕರ್ತರಾದ ವಕೀಲರು ಅರ್ಜಿದಾರರನ್ನು ಪ್ರತಿನಿಧಿಸುತ್ತಿದ್ದು, ಅವರು ಕ್ಷಮಾಪಣಾ ಮನವಿ ಸಿದ್ಧಪಡಿಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.

Also Read
ಬಾಟ್ಲಾ ಹೌಸ್‌ ಎನ್‌ಕೌಂಟರ್‌: ಆರಿಜ್‌ ಖಾನ್‌ಗೆ ಗಲ್ಲು ಶಿಕ್ಷೆ, ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದ ದೆಹಲಿ ನ್ಯಾಯಾಲಯ

ಈ ವೇಳೆ ಕ್ಷಮಾಪಣೆ ಮನವಿ ಸಲ್ಲಿಸದೇ ಕಾಲಹರಣ ಮಾಡಲಾಗುತ್ತಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೇ, ಅರ್ಜಿದಾರರು 2019ರಲ್ಲಿ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯ ಲಾಭ ಪಡೆಯುತ್ತಿದ್ದಾರೆ ಎಂದಿತ್ತು. ಇಂಥ ವಿಚಾರಗಳಲ್ಲಿ ಕೈಜೋಡಿಸುವ ಪ್ರಯತ್ನ ಮಾಡಿದರೆ ಗಲ್ಲುಶಿಕ್ಷೆ ವಿರೋಧಿ ಕಾರ್ಯಕರ್ತರು ತಮ್ಮ ವಿಶ್ವಾಸಾರ್ಹತೆ ಕಳೆದುಕೊಳ್ಳಲಿದ್ದಾರೆ ಎಂದೂ ಪೀಠ ಎಚ್ಚರಿಸಿತ್ತು.

ಅರ್ಜಿದಾರರ ಕಾರಾಗೃಹ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯವು ಹೆಚ್ಚುವರಿ ವಿಚಾರಗಳನ್ನೂ ಪರಿಗಣಿಸಿದೆ. ಅವುಗಳು ಇಂತಿವೆ:

  • ಸುಪ್ರೀಂ ಕೋರ್ಟ್‌ ನವೆಂಬರ್‌ 15, 2019ರಂದು ಅರ್ಜಿದಾರರ ತೀರ್ಪು ಮರುಪರಿಶೀಲನಾ ಮನವಿ ವಜಾಗೊಳಿಸಿದ್ದು, ಪರಿಹಾರಾತ್ಮಕ ಮನವಿ ಸಲ್ಲಿಸಬಹುದು ಎಂದು ಅರ್ಜಿದಾರರಿಗೆ ತಿಳಿಸಿದೆ.

  • ನವೆಂಬರ್‌ 19, 2019ರಂದು ಅರ್ಜಿದಾರರಿಗೆ ಜೈಲಿನ ಅಧಿಕಾರಿಗಳು ಗಲ್ಲು ಶಿಕ್ಷೆ ಜಾರಿ ವಾರೆಂಟ್‌ ಪಡೆದುಕೊಂಡಿದ್ದಾಗಿ ತಿಳಿಸಿದ್ದಾರೆ. ಪರಿಹಾರಾತ್ಮಕ ಮನವಿ ಸಲ್ಲಿಸುವ ಬದಲಿಗೆ ಕ್ಷಮಾಪಣಾ ಮನವಿ ಸಲ್ಲಿಸುವ ಸಂಬಂಧ ಅರ್ಜಿದಾರರು ವಕೀಲರನ್ನು ನೇಮಿಸಿದ್ದಾರೆ.

  • ಕ್ಷಮಾಪಣಾ ಮನವಿ ಸಲ್ಲಿಸುವ ಸಂಬಂಧ ತಮಿಳುನಾಡು ಕಾರಾಗೃಹ ನಿಯಮಗಳು 1983ರ ನಿಯಮ 917ರ ಅಡಿ ಕಾಲಾವಕಾಶ ವಿಸ್ತರಣೆಗೆ ಅರ್ಜಿದಾರರು ಅವಕಾಶ ಕೋರಿದ್ದರು. ನವೆಂಬರ್‌ 26, 2019ರಂದು ಅರ್ಜಿದಾರರ ಕೋರಿಕೆಯನ್ನು ಮನ್ನಿಸಲಾಗಿತ್ತು. “ಇಲ್ಲಿಯವರೆಗೆ ಈ ವಿಚಾರಗಳನ್ನು ಅರ್ಜಿದಾರರಾಗಲಿ ಅಥವಾ ಅವರನ್ನು ಪ್ರತಿನಿಧಿಸುವ ವಕೀಲರಾಗಲಿ ನ್ಯಾಯಾಲಯದ ಗಮನಕ್ಕೆ ತಂದಿಲ್ಲ. ನ್ಯಾಯಾಲಯವು ಕಾರಾಗೃಹದ ದಾಖಲೆ ಸಲ್ಲಿಸುವಂತೆ ಸೂಚಿಸಿದ ಮೇಲೆ ಈ ಎಲ್ಲಾ ವಿಚಾರಗಳು ಬಹಿರಂಗಗೊಂಡಿವೆ” ಎಂದು ಪೀಠ ಹೇಳಿದೆ.

ಇದೇ ವೇಳೆ, 2019ರ ಗಲ್ಲು ಶಿಕ್ಷೆಯ ವಾರೆಂಟ್‌ ಪ್ರಶ್ನಿಸಿದ್ದ ರಿಟ್‌ ಮನವಿಯನ್ನು ನ್ಯಾಯಾಲಯವು ವಜಾಗೊಳಿಸಿದೆ. ಅರ್ಜಿದಾರರು ಮಾರ್ಚ್‌ 1ರಂದು ಕ್ಷಮಾಪಣಾ ಮನವಿ ಸಲ್ಲಿಸಿದ್ದಾರೆ (ನ್ಯಾಯಾಲಯವು ಈ ಬಗ್ಗೆ ಪ್ರಶ್ನಿಸಿದ ಮೇಲೆ). “ಕ್ಷಮಾಪಣಾ ಮನವಿ ಇತ್ಯರ್ಥವಾಗುವವರೆಗೆ ಅಪರಾಧಿಯನ್ನು ಗಲ್ಲಿಗೆ ಹಾಕುವುದಿಲ್ಲ ಎಂಬ ಭರವಸೆಯನ್ನು ಅವರಿಗೆ ನೀಡಬಹುದು” ಎಂದು ನ್ಯಾಯಾಲಯ ಹೇಳಿದೆ.

Related Stories

No stories found.
Kannada Bar & Bench
kannada.barandbench.com