Chief Justice N V Anjaria and Justice Krishna S. Dixit 
ಸುದ್ದಿಗಳು

ಶರಾವತಿ ಹೈಡ್ರೋ ಎಲೆಕ್ಟ್ರಿಕ್‌ ಯೋಜನೆ ಟೆಂಡರ್‌ ಪ್ರಕ್ರಿಯೆ ಊರ್ಜಿತಗೊಳಿಸಿದ ಹೈಕೋರ್ಟ್‌

ರಾಜ್ಯದಲ್ಲಿನ ವಿದ್ಯುತ್‌ ಸಮಸ್ಯೆ ಪರಿಹರಿಸುವ ಸಲುವಾಗಿ ರಾಜ್ಯ ಸರ್ಕಾರವು ಎಂಟು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಶರಾವತಿ ಹೈಡ್ರೋ ಎಲೆಕ್ಟ್ರಿಕಲ್ ಯೋಜನೆಗೆ ಮುಂದಾಗಿದೆ.

Bar & Bench

ರಾಜ್ಯದಲ್ಲಿನ ವಿದ್ಯುತ್‌ ಸಮಸ್ಯೆ ಪರಿಹರಿಸುವ ಸಲುವಾಗಿ ರಾಜ್ಯ ಸರ್ಕಾರವು ಎಂಟು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಜಾರಿಗೊಳಿಸಲು ಮುಂದಾಗಿರುವ ಶರಾವತಿ ಹೈಡ್ರೋ ಎಲೆಕ್ಟ್ರಿಕಲ್ ಯೋಜನೆಗೆ ಸಂಬಂಧಿಸಿರುವ ಟೆಂಡರ್‌ ಪ್ರಕ್ರಿಯೆಯನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ಊರ್ಜಿತಗೊಳಿಸಿದೆ.

ಯೋಜನೆಗೆ ಕರೆಯಲಾಗಿದ್ದ ಟೆಂಡರ್‌ ಅನ್ನು ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶ ರದ್ದುಪಡಿಸಬೇಕು ಮತ್ತು ಟೆಂಡರ್‌ ಪ್ರಕ್ರಿಯೆಯನ್ನು ಅನೂರ್ಜಿತಗೊಳಿಸಬೇಕು ಎಂದು ಲಾರ್ಸೆನ್ ಅಂಡ್ ಟುಬ್ರೋ (ಎಲ್‌ ಅಂಡ್‌ ಟಿ) ಕಂಪೆನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ.

ಇದೇ ವೇಳೆ ಈ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಲಾಗುವುದು. ಅಲ್ಲಿಯವರೆಗೆ ಈ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಎಲ್‌ ಅಂಡ್‌ ಟಿ ಕಂಪನಿ ಪರ ವಕೀಲರು ಮನವಿ ಮಾಡಿದರು. ಆದರೆ, ಈ ಮನವಿಯನ್ನೂ ವಿಭಾಗೀಯ ಪೀಠ ತಿರಸ್ಕರಿಸಿದೆ.

ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ (ಕೆಪಿಟಿಸಿಎಲ್‌) ಎಂಟು ಸಾವಿರ ಕೋಟಿ ವೆಚ್ಚದಲ್ಲಿ ಹೈಡ್ರೋ ಪವರ್‌ ಪಂಪ್ಡ್‌ ಸ್ಟೋರೇಜ್‌ ಯೋಜನೆ ಜಾರಿಗೆ ಮುಂದಾಗಿತ್ತು. ನಿಯಮಗಳಲ್ಲಿ ಬದಲಾವಣೆ ಮಾಡಿ 30 ದಿನಗಳ ಅವಧಿಯನ್ನು 21 ದಿನಗಳಿಗೆ ಇಳಿಸಲಾಗಿತ್ತು.

ಇದರಿಂದ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದ ಎಲ್‌ ಅಂಡ್‌ ಟಿ ಕಂಪೆನಿಯು ಪಾರದರ್ಶಕ ಕಾಯಿದೆಯ ಪ್ರಕಾರ ಟೆಂಡರ್ ಗೆ 30  ದಿನಗಳ ಕಾಲಾವಕಾಶ ನೀಡಬೇಕು. 5 ವರ್ಷ ಯೋಜನಾ ಅವಧಿಯ ಸುಮಾರು ಎಂಟು ಸಾವಿರ ಕೋಟಿ ರೂಪಾಯಿ ಮೊತ್ತದ ಬೃಹತ್ ಯೋಜನೆಗೆ ಕೇವಲ 21 ದಿನಗಳ ಟೆಂಡರ್ ಅಖೈರುಗೊಳಿಸಲಾಗುತ್ತಿದೆ. ಕೆಲ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಟೆಂಡರ್ ನೀಡಲಾಗುತ್ತಿದೆ. ಆದ್ದರಿಂದ, ಟೆಂಡರ್‌ ಪಕ್ರಿಯೆಯನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿತ್ತು.

ಈ ವಾದವನ್ನು ತಿರಸ್ಕರಿಸಿದ್ದ ಏಕಸದಸ್ಯ ಪೀಠವು ಅರ್ಜಿದಾರ ಕಂಪೆನಿಯು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ, ಅಲ್ಲದೆ, ಟೆಂಡರ್ ಕರೆಯುವ ಪ್ರಾಧಿಕಾರಕ್ಕೆ ತನ್ನ ಅಗತ್ಯಕ್ಕೆ ತಕ್ಕಂತೆ ನಿಯಮಗಳನ್ನು ಬದಲಿಸಿಕೊಳ್ಳುವ ಅಧಿಕಾರ ಇರುವುದಾಗಿ ಸುಪ್ರೀಂಕೋರ್ಟ್ ಈಗಾಗಲೇ ತೀರ್ಪು ನೀಡಿದೆ. ಹೀಗಾಗಿ ಅರ್ಜಿಯನ್ನು ಮಾನ್ಯ ಮಾಡಲಾಗದು ಎಂದು ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಕಂಪನಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ಪ್ರಸ್ತುತ ಟೆಂಡರ್‌ ಅನ್ನು ಕಡಿಮೆ ದರ ನಮೂದಿಸಿದ್ದ ಮೆಸರ್ಸ್‌ ಮೇಘ ಎಂಜಿನಿಯರಿಂಗ್‌ ಆ್ಯಂಡ್‌ ಇನ್ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಪಡೆದುಕೊಂಡಿದೆ.