ಸುದ್ದಿಗಳು

ಕಾಂಗ್ರೆಸ್‌ ವಿರುದ್ಧ ಅವಹೇಳನಕಾರಿ ವಿಡಿಯೊ ಹಂಚಿಕೆ: ವಿಜಯೇಂದ್ರ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

“ದೂರು ದಾಖಲಿಸಿದ ಬಳಿಕವು ಪದೇಪದೇ ಅದೇ ರೀತಿಯ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗುತ್ತಿದೆ” ಎಂದ ಎರಡನೇ ಪ್ರತಿಯಾಗಿರುವ ವಕೀಲ ಮತ್ತು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು.

Bar & Bench

ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿ ಟ್ವಿಟರ್‌ ಪೋಸ್ಟ್ ಹಂಚಿಕೊಂಡ ಆರೋಪದಡಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.

ಎಫ್‌ಐಆರ್ ರದ್ದತಿ ಕೋರಿ ಬಿ ವೈ ವಿಜಯೇಂದ್ರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಂ ಅರುಣ್ ಶ್ಯಾಮ್ ಅವರು “ಈ ಪ್ರಕರಣದಲ್ಲಿ ಒಂದೇ ಆರೋಪಕ್ಕೆ ಎರಡು ಎಫ್‌ಐಆರ್‌ ದಾಖಲಿಸಿರುವುದು ಕಾನೂನುಬಾಹಿರ. ಆರೋಪ ಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ. ಆದ್ದರಿಂದ, ಎಫ್‌ಐಆರ್‌ ರದ್ದುಪಡಿಸಬೇಕು” ಎಂದು ಮನವಿ ಮಾಡಿದರು.

ಎರಡನೇ ಪ್ರತಿಯಾಗಿರುವ ವಕೀಲ ಮತ್ತು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಅವರು “ದೂರು ದಾಖಲಿಸಿದ ಬಳಿಕವು ಪದೇಪದೇ ಅದೇ ರೀತಿಯ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗುತ್ತಿದೆ” ಎಂದರು.

ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ತನಿಖೆ ನಡೆಯಲಿ, ನಾವು ಆರೋಪ ಪಟ್ಟಿ ಸಲ್ಲಿಸುವುದಿಲ್ಲ” ಎಂದರು.

ವಾದ-ಪ್ರತಿವಾದ ಆಲಿಸಿದ ಪೀಠವು ಪ್ರಕರಣಕ್ಕೆ ತಡೆ ವಿಧಿಸಲಾಗಿದ್ದು, ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸಬೇಕು ಎಂದು ಆದೇಶಿಸಿದೆ. ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಮುಂದೂಡಿತು.

ಪ್ರಕರಣದ ವಿವರ: ಮೀಸಲಾತಿಗೆ ಸಂಬಂಧಿಸಿದ ಆನಿಮೇಟೆಡ್‌ ವಿಡಿಯೊ ತುಣುಕೊಂದನ್ನು ಬಿಜೆಪಿ ರಾಜ್ಯ ಘಟಕದ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು.  ಸಮಾಜದಲ್ಲಿ ದ್ವೇಷ ಬಿತ್ತಲು ಯತ್ನಿಸಿದ್ದ ಆರೋಪದಡಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಹಾಗೂ ಚುನಾವಣಾ ಆಯೋಗ ಪ್ರತ್ಯೇಕ ದೂರು ನೀಡಿದ್ದವು. ಈ ಹಿನ್ನೆಲೆಯಲ್ಲಿ ಮೂವರು ಬಿಜೆಪಿ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.