ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೇಳಿಗೆ ಹೋಲಿಸಿದ್ದ ಹೇಳಿಕೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸುವಂತೆ ಮಾಡಿದ್ದ ಮನವಿ ತಿರಿಸ್ಕರಿಸಿದ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್ ನಿನ್ನೆ (ಸೋಮವಾರ) ಸಲ್ಲಿಸಿದ್ದ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ಆಲಿಸಲಿದೆ.
ತುರ್ತು ವಿಚಾರಣೆಯ ಮನವಿಯನ್ನು ನ್ಯಾಯಾಲಯ ಪರಿಗಣಿಸಲಿದೆ ಎಂದು ಸಿಜೆಐ ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ತರೂರ್ ಪರ ವಕೀಲರಿಗೆ ನಿನ್ನೆ ಭರವಸೆ ನೀಡಿತ್ತು. ಪ್ರಕರಣವನ್ನು ಇಂದು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಆರ್ ಮಹದೇವನ್ ಅವರಿದ್ದ ಪೀಠ ಕೈಗೆತ್ತಿಕೊಳ್ಳಲಿದೆ.
ಬಿಜೆಪಿ ನಾಯಕ ರಾಜೀವ್ ಬಬ್ಬರ್ ತರೂರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ನಂತರ ವಿಚಾರಣಾ ನ್ಯಾಯಾಲಯ ತರೂರ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. 2018ರ ನವೆಂಬರ್‌ನಲ್ಲಿ ನಡೆದ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ತರೂರ್ ಈ ಹೇಳಿಕೆ ನೀಡಿದ್ದರು. ‘ಶ್ರೀ ಮೋದಿ ಅವರು ಶಿವಲಿಂಗದ ಮೇಲೆ ಕುಳಿತಿರುವ ಚೇಳು’ ಎಂದು ಅವರು ಬಣ್ಣಿಸಿದ್ದರು.
ಆಗಸ್ಟ್ 9 ರಂದು, ದೆಹಲಿ ಹೈಕೋರ್ಟ್ ಪ್ರಕರಣ ರದ್ದುಗೊಳಿಸಲು ನಿರಾಕರಿಸಿತ್ತು ತರೂರ್ ಅವರ ಹೇಳಿಕೆಗಳು ಮೋದಿ, ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) ದೂಷಿಸುವಂತಿವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.
ಹಾಲಿ ಪ್ರಧಾನಿ ವಿರುದ್ಧದ ಆರೋಪಗಳು ಹೇಯವೂ, ಖಂಡನಾರ್ಹವೂ ಆಗಿವೆ. ಇವು ಪಕ್ಷ, ಅದರ ಸದಸ್ಯರು ಮತ್ತು ಪದಾಧಿಕಾರಿಗಳ ವರ್ಚಸ್ಸಿಗೆ ಧಕ್ಕೆಯುಂಟು ಮಾಡುವಂತಿವೆ ಎಂದು ನ್ಯಾಯಮೂರ್ತಿ ಅನೂಪ್ ಕುಮಾರ್ ಮೆಂಡಿರಟ್ಟ ಅವರು ತೀರ್ಪು ನೀಡಿದ್ದರು. ಹೀಗಾಗಿ ತರೂರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.