ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಸತಿ ಗೃಹಗಳನ್ನು ಜಾರಿ ನಿರ್ದೇಶನಾಲಯವು ತಾತ್ಕಾಲಿಕ ವಶಕ್ಕೆ ತೆಗೆದುಕೊಂಡು ಅವುಗಳನ್ನು ತೆರವುಗೊಳಿಸಲು ಸೂಚಿಸಿ ನೀಡಿರುವ ನೋಟಿಸ್ ಪ್ರಶ್ನಿಸಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಪಿಎಂಎಲ್ಎ ಕಾಯಿದೆಯಡಿ ರೂಪುಗೊಂಡಿರುವ ನವದೆಹಲಿಯ ನ್ಯಾಯ ನಿರ್ಣಯ ಪ್ರಾಧಿಕಾರ ನೀಡಿದ ಆದೇಶದಂತೆ ಪುಣೆಯ ಪಾವಾನಾ ಅಣೆಕಟ್ಟಿನ ಬಳಿ ಇರುವ ಬಂಗಲೆ ಮತ್ತು ಮುಂಬೈನ ಸಾಂತಾಕ್ರೂಜ್‌ನಲ್ಲಿರುವ ದಂಪತಿಯ ಫ್ಲ್ಯಾಟ್ ತೆರವಿಗೆ ನೋಟಿಸ್ ಸೂಚಿಸಿತ್ತು.
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಪಿ ಕೆ ಚವಾಣ್ ಅವರಿದ್ದ ಪೀಠ ನಾಳೆ (ಅಕ್ಟೋಬರ್ 10, ಗುರುವಾರ) ಅರ್ಜಿಯ ವಿಚಾರಣೆ ನಡೆಸಲಿದೆ.
ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ 2018 ರಲ್ಲಿ ಅಮಿತ್ ಭಾರದ್ವಾಜ್ ಎಂಬುವವರನ್ನು ಇ ಡಿ ತನಿಖೆ ಮಾಡುತ್ತಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಶಿಲ್ಪಾ ಅವರಾಗಲೀ ಕುಂದ್ರಾ ಅವರನ್ನಾಗಲೀ ಅಧಿಸೂಚಿತ ಅಪರಾಧದಡಿಯಲ್ಲಾಗಲಿ ಇಲ್ಲವೇ ಜಾರಿ ಪ್ರಕರಣ ಮಾಹಿತಿ ವರದಿಯಲ್ಲಿ (ಇಸಿಐಆರ್) ಆರೋಪಿಗಳೆಂದು ಉಲ್ಲೇಖಿಸರಲಿಲ್ಲ.
ಆದರೆ ದಂಪತಿಗೆ ಸೇರಿದ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಏಪ್ರಿಲ್ 2024 ರಲ್ಲಿ, ಇ ಡಿ ನೋಟಿಸ್ ನೀಡಿತ್ತು.
ಆದರೆ ತಾವು ತನಿಖೆಯುದ್ದಕ್ಕೂ ಸಹಕರಿಸಿದ್ದು ಕುಂದ್ರಾ ಅವರು ಸಮನ್ಸ್‌ಗಳಿಗೆ ಸಂಬಂಧಿಸಿದಂತೆ ಖುದ್ದು ಹಾಜರಾಗಿದ್ದರು. ಅಲ್ಲದೆ ಶಿಲ್ಪಾ ಶೆಟ್ಟಿ ಕೂಡ ತಮ್ಮ ಅಧಿಕೃತ ಪ್ರತಿನಿಧಿಯ ಮೂಲಕ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದಾರೆ. ಇಷ್ಟಾದರೂ ತಮ್ಮ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲು ಇ ಡಿ ಸೆಪ್ಟೆಂಬರ್ 18, 2024ರಂದು ಮುಂದಾಯಿತು. ವಿಚಾರಣೆ ಮುಗಿಯುವವರೆಗೂ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿತ್ತು ಎಂದು ಅರ್ಜಿಯಲ್ಲಿ ದೂರಲಾಗಿದೆ.
ಪಿಎಂಎಲ್‌ಎ ಅಡಿ ರೂಪುಗೊಂಡಿರುವ ಮೇಲ್ಮನವಿ ಪ್ರಾಧಿಕಾರಕ್ಕೆ ಆದೇಶ ಪ್ರಶ್ನಿಸಲು ದಂಪತಿಗೆ 45 ದಿನಗಳ ಅವಕಾಶ ಇದೆಯಾದರೂ ಆದೇಶ ಪ್ರಶ್ನಿಸುವ ತಮ್ಮ ಹಕ್ಕನ್ನು ಇ ಡಿ ಮೊಟಕುಗೊಳಿಸುತ್ತಿದೆ. ಬಂಗಲೆ ತೆರವು ನೋಟಿಸ್ ಮನಸೋಇಚ್ಛೆಯಿಂದ ಕೂಡಿದ್ದು ಕಾನೂನಿಗೆ ವಿರುದ್ಧವಾಗಿದೆ. ವಿಜಯ್ ಮದನ್‌ಲಾಲ್ ಚೌಧರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಶಿಕ್ಷೆಗೆ ಮೊದಲೇ ಮನೆ ತೆರವುಗೊಳಿಸುವುದನ್ನು ನಿಷೇಧಿಸಿದೆ ಎಂದು ದಂಪತಿ ವಾದಿಸಿದ್ದಾರೆ.