ಗೇರ್-ಶಿಲ್ಪಾ ಚುಂಬನ ಪ್ರಕರಣ: ಸಾರ್ವಜನಿಕವಾಗಿ ಅಸಭ್ಯವಾಗಿ ಸ್ಪರ್ಶಿಸಲ್ಪಟ್ಟ ಮಹಿಳೆ ಆರೋಪಿಯಾಗುವುದಿಲ್ಲ ಎಂದ ನ್ಯಾಯಾಲಯ

ಗೇರ್ ಅವರಿಗೆ ಶಿಲ್ಪಾ ಮುತ್ತಿಟ್ಟಿಲ್ಲ ಬದಲಿಗೆ ಶಿಲ್ಪಾ ಅವರನ್ನು ಗೇರ್ ಚುಂಬಿಸಿದ್ದಾರೆ ಹೀಗಾಗಿ ಶಿಲ್ಪಾ ಅವರ ಕಡೆಯಿಂದ ಅಶ್ಲೀಲತೆ ಸಂಭವಿಸಿಲ್ಲ ಎಂದು ಸೆಷನ್ಸ್ ನ್ಯಾಯಾಧೀಶ ಎಸ್ ಸಿ ಜಾಧವ್ ತಿಳಿಸಿದರು.
Shilpa Shetty
Shilpa Shetty Facebook
Published on

ರಾಜಸ್ಥಾನದಲ್ಲಿ 2007ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಹಾಲಿವುಡ್‌ ನಟ ರಿಚರ್ಡ್‌ ಗೇರ್‌ ಚುಂಬಿಸಿದ ಪ್ರಕರಣದಿಂದ ಶಿಲ್ಪಾ ಅವರನ್ನು ಮುಕ್ತಗೊಳಿಸಿದ ಮುಂಬೈನ ನ್ಯಾಯಾಲಯ ಸಾರ್ವಜನಿಕವಾಗಿ ಅಸಭ್ಯವಾಗಿ ಸ್ಪರ್ಶಿಸಲ್ಪಟ್ಟ, ತಡವಲ್ಪಟ್ಟ ಮಹಿಳೆಯನ್ನು ಆರೋಪಿ ಎಂದು ಕರೆಯಲಾಗದು ಎಂದಿದೆ.

ಗೇರ್‌ ಅವರಿಗೆ ಶಿಲ್ಪಾ ಮುತ್ತಿಟ್ಟಿಲ್ಲ ಬದಲಿಗೆ ಶಿಲ್ಪಾ ಅವರನ್ನು ಗೇರ್‌ ಚುಂಬಿಸಿದ್ದಾರೆ ಹೀಗಾಗಿ ಶಿಲ್ಪಾ ಅವರ ಕಡೆಯಿಂದ ಅಶ್ಲೀಲ ವರ್ತನೆಯು ಸಂಭವಿಸಿಲ್ಲ ಎಂದು ಸೆಷನ್ಸ್‌ ನ್ಯಾಯಾಧೀಶ ಎಸ್‌ ಸಿ ಜಾಧವ್‌ ತಿಳಿಸಿದರು.

“ಮಹಿಳೆಯನ್ನು ಬೀದಿಯಲ್ಲಿ ತಬ್ಬಿಕೊಂಡರೆ ಅಥವಾ ಸಾರ್ವಜನಿಕ ರಸ್ತೆಯಲ್ಲಿ ಅಥವಾ ಸಾರಿಗೆಯಲ್ಲಿ ಅಸಭ್ಯವಾಗಿ ಸ್ಪರ್ಶಿಸಿದರೆ ಆಗ ಆ ಮಹಿಳೆಯನ್ನು ಮಾನಸಿಕ ಅಪರಾಧದ ಮಟ್ಟಿಗೆ ಆರೋಪಿ ಎಂದಾಗಲಿ ಅಥವಾ ಪಾಲುದಾರಳು ಎಂದಾಗಲಿ ಹೇಳಲಾಗದು. ಕಾನೂನುಬಾಹಿರ ಲೋಪಕ್ಕಾಗಿ ಆಕೆಯನ್ನು ಕಾನೂನು ಕ್ರಮಕ್ಕೆ ಹೊಣೆಗಾರಳನ್ನಾಗಿ ಮಾಡಲಾಗದು” ಎಂದು ನ್ಯಾಯಾಧೀಶರು ಹೇಳಿದರು.

ಆ ಮೂಲಕ ಪ್ರಕರಣದಿಂದ ಶೆಟ್ಟಿ ಅವರನ್ನು ಮುಕ್ತಗೊಳಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಸೆಷನ್ಸ್‌ ನ್ಯಾಯಾಲಯ ಎತ್ತಿ ಹಿಡಿಯಿತು. ಯಾರ ವಿರುದ್ಧ ಅಪರಾಧ ಎಸಗಲಾಗಿದೆಯೋ ಆ ಸಂತ್ರಸ್ತೆಯನ್ನು ಆರೋಪಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದೂ ನ್ಯಾಯಾಧೀಶರು ಅಭಿಪ್ರಾಯಪಟ್ಟರು.

Also Read
ರಿಚರ್ಡ್‌ ಗೇರ್‌ ಚುಂಬನ ವಿವಾದ: ಅಶ್ಲೀಲ ಪ್ರಕರಣದಿಂದ ಶಿಲ್ಪಾ ಶೆಟ್ಟಿಯನ್ನು ಮುಕ್ತಗೊಳಿಸಿದ ಮುಂಬೈ ನ್ಯಾಯಾಲಯ

ಶಿಲ್ಪಾ ಮತ್ತು ಗೇರ್‌ ವಿರುದ್ಧ ಪ್ರಕರಣ ದಾಖಲಿಸುವಂತೆ ಹದಿನಾರು ವರ್ಷಗಳ ಹಿಂದೆ ಅಂದರೆ 2007ರಲ್ಲಿ ರಾಜಸ್ಥಾನದ ಮುಂಡಾವರ್‌ನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೂರು ನೀಡಲಾಗಿತ್ತು. ಇದನ್ನು ಪುರಸ್ಕರಿಸಿದ್ದ ನ್ಯಾಯಾಲಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚಿಸಿತ್ತು. ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ 2017ರಲ್ಲಿ ಶಿಲ್ಪಾ ಅವರ ಅರ್ಜಿಯನ್ನು ಮುಂಬೈನ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಮ್ಯಾಜಿಸ್ಟ್ರೇಟ್ ಕೇತಕಿ ಚವಾಣ್ ಅವರು ಶಿಲ್ಪಾ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಿದ್ದರು. ಇದನ್ನು ಪ್ರಶ್ನಿಸಿ  ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು  ಏಪ್ರಿಲ್ 3, 2023ರಂದು ವಜಾಗೊಳಿಸಿದ್ದರು.

"ವಿಚಾರಣೆಯೊಂದಿಗೆ ಮುಂದುವರಿಯಲು ಯಾವುದೇ ಪ್ರಾಥಮಿಕ ಅಂಶಗಳಿಲ್ಲ. ಹಾಗಾಗಿ, ಆದೇಶಕ್ಕೆ ಈ ನ್ಯಾಯಾಲಯ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ಪರಿಗಣಿಸಿದ್ದಾರೆ. ಕ್ರಿಮಿನಲ್ ಪರಿಷ್ಕರಣೆ ಅರ್ಜಿ ವಜಾಕ್ಕೆ ಅರ್ಹವಾಗಿದೆ, ”ಎಂದು ಸೆಷನ್ಸ್ ನ್ಯಾಯಾಧೀಶರು ಹೇಳಿದ್ದರು. ತೀರ್ಪಿನ ವಿವರ ಈಚೆಗಷ್ಟೇ ಮಾಧ್ಯಮಗಳಿಗೆ ಲಭ್ಯವಾಗಿತ್ತು.

Kannada Bar & Bench
kannada.barandbench.com