Shirur landslide 
ಸುದ್ದಿಗಳು

ಶಿರೂರು ಗುಡ್ಡ ಕುಸಿತ: ಸಂತ್ರಸ್ತರಿಗೆ ಕಲ್ಪಿಸಿರುವ ಪುನರ್ವಸತಿ ಮಾಹಿತಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಪ್ರಕರಣದಲ್ಲಿ ಒಟ್ಟು 11 ಮಂದಿ ನಾಪತ್ತೆಯಾಗಿದ್ದು, 8 ಮೃತದೇಹಗಳು ಪತ್ತೆಯಾಗಿವೆ. ಇನ್ನೂ ಮೂರು ಮಂದಿ ಪತ್ತೆಯಾಗಿಲ್ಲ. ಒಟ್ಟು 171 ಮಂದಿಯನ್ನು ಕಾರ್ಯಾಚರಣೆಯಲ್ಲಿ ಬಳಕೆ ಮಾಡಲಾಗಿದೆ ಎಂದು ತಿಳಿಸಿದ ಎಜಿ.

Bar & Bench

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಶಿರೂರು ಗ್ರಾಮ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-66ರ ಅಂಚಿನಲ್ಲಿ ಉಂಟಾದ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿರುವ ಕುರಿತು ಮಾಹಿತಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಬುಧವಾರ ಆದೇಶಿಸಿದೆ. ಅಲ್ಲದೇ, ಗುಡ್ಡ ಕುಸಿತದಲ್ಲಿ ಸಿಲುಕಿರುವವರ ಪತ್ತೆ ಕಾರ್ಯಾಚರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ಗೆ ಪ್ರತಿಕ್ರಿಯಿಸಲು ಅರ್ಜಿದಾರರಿಗೆ ನ್ಯಾಯಾಲಯ ಅನುಮತಿಸಿದೆ.

ವಕೀಲ ಶಿಜಿ ಮಲಯಾಳಿ ಹಾಗೂ ನವದೆಹಲಿಯ ಕೆ ಆರ್ ಸುಭಾಷ್‌ ಚಂದ್ರನ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರದ ಪರವಾಗಿ ಹಾಜರಾದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಪ್ರಕರಣದಲ್ಲಿ ಒಟ್ಟು 11 ಮಂದಿ ನಾಪತ್ತೆಯಾಗಿದ್ದು, 8 ಮೃತದೇಹಗಳು ಪತ್ತೆಯಾಗಿವೆ. ಇನ್ನೂ ಮೂರು ಮಂದಿ ಪತ್ತೆಯಾಗಿಲ್ಲ. ಕಾರ್ಯಾಚರಣೆಗೆ ರಾಜ್ಯ ವಿಪತ್ತು ನಿರ್ವಹಣಾ ಪಡೆಯ 71 ಮಂದಿ, ಸೇನೆಯ 60, ನೌಕಾ ದಳದ 12, ಅಗ್ನಿಶಾಮಕ ದಳದ 26, ಕರಾವಳಿ ಕಾವಲು ಪಡೆಯ ಇಬ್ಬರು ಸೇರಿ 171 ಮಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ” ಎಂದರು.

ಅರ್ಜಿದಾರರ ಪರ ವಕೀಲ ಬಿಜು ಪಿ. ರಾಮನ್‌ ಅವರು “ನಾಪತ್ತೆಯಾಗಿರುವವರ ಪತ್ತೆಗೆ ಸ್ಥಳೀಯರಾದ ಈಶ್ವರ್‌ ಮಲ್ಪೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಸರ್ಕಾರ ಅವರ ಕಾರ್ಯಾಚರಣೆ ನಡೆಸಲು ಬಿಡುತ್ತಿಲ್ಲ. ಪೊಲೀಸರ ಮೂಲಕ ಅವರಿಗೆ ಬೆದರಿಕೆ ಹಾಕುವ ಕೆಲಸ ಮಾಡಲಾಗುತ್ತಿದೆ. ನಾವು ಸರ್ಕಾರದ ವಿರುದ್ಧ ದಾವೆ ಹೂಡಿಲ್ಲ. ಕನಿಷ್ಠ ಪಕ್ಷ ಮೃತದೇಹಗಳನ್ನು ಪತ್ತೆಹಚ್ಚುವ ಮೂಲಕ ಅವರ ಅಂತಿಮ ವಿಧಿ-ವಿಧಾನ ನಡೆಸುವುದಕ್ಕಾದರೂ ಅನುಮತಿಸಬೇಕು” ಎಂದರು.

ಇದಕ್ಕೆ ಆಕ್ಷೇಪಿಸಿದ ಎಜಿ ಶೆಟ್ಟಿ ಅವರು “171 ಮಂದಿಯನ್ನು ಕಾರ್ಯಾಚರಣೆಗೆ ಬಳಕೆ ಮಾಡಲಾಗಿದೆ. ನದಿಯಲ್ಲಿ ನೀರಿನ ಮಟ್ಟ ಅಪಾಯಕಾರಿ ಹಂತ ತಲುಪಿದೆ. ಒಬ್ಬ ವ್ಯಕ್ತಿ ಕಾರ್ಯಾಚರಣೆ ನಡೆಸಲು ಸರ್ಕಾರ ಅನುಮತಿಸುತ್ತಿಲ್ಲ ಎಂದು ಅರ್ಜಿದಾರರು ದೂರುತ್ತಿದ್ದಾರೆ. ಮಾನವ ಸಾಧ್ಯವಾದ ಎಲ್ಲಾ ಪ್ರಯತ್ನವನ್ನೂ ಕಾರ್ಯಾಚರಣೆಯಲ್ಲಿ ಮಾಡಲಾಗಿದೆ. ಹೀಗಾಗಿ, ಪಿಐಎಲ್‌ ಇತ್ಯರ್ಥಪಡಿಸಬಹುದು. ಸದ್ಯದ ಪರಿಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸುವುದೂ ಕಷ್ಟವಾಗಿದೆ. ಆಗಸ್ಟ್‌ 16ರಂತೆ ಪ್ರವಾಹ ಹೆಚ್ಚಾಗಿದೆ. ಸಂತ್ರಸ್ತರಿಗೆ ಪರಿಹಾರ ವಿತರಿಸಲಾಗಿದೆ” ಎಂದರು.

ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ್‌ ಕಾಮತ್‌ ಅವರು “ಆಗಸ್ಟ್‌ನಲ್ಲಿ ನೀರಿನ ಸೆಳವು ಹೆಚ್ಚಳವಾಗಿದೆ. 7 ನಾಟ್‌ ಹೆಚ್ಚಾಗಿದೆ. ಈ ಪ್ರವಾಹವು ಏಳು ನಾಟ್ಸ್‌ಗಿಂತ ಹೆಚ್ಚಾದರೆ ಕಾರ್ಯಾಚರಣೆ ಅಪಾಯಕಾರಿ ಪ್ರಯತ್ನ. ಈ ಸ್ಥಿತಿಯಲ್ಲಿ ಮುಳುಗು ತಜ್ಞರನ್ನು (ಡೈವಿಂಗ್‌ ತಂಡ) ಕಾರ್ಯಾಚರಣೆಗೆ ಬಳಕೆ ಮಾಡಲಾಗದು. ಮುಳುಗು ತಜ್ಞರು ಒಂದು ವಾರ ಕಾಲ ಕೆಲಸ ಮಾಡಿದ್ದಾರೆ” ಎಂದರು.

ಆನಂತರ ಅರ್ಜಿದಾರರ ಪರ ವಕೀಲ “ಸರ್ಕಾರದ ಅಫಿಡವಿಟ್‌ಗೆ ಪ್ರತಿಕ್ರಿಯೆ ಸಲ್ಲಿಸುತ್ತೇವೆ. ನಾವು ವಿರುದ್ಧವಾದ ದಾವೆ ಹೂಡಿಲ್ಲ. ಹಾಗೆಯೇ ಸರ್ಕಾರದ ಕಾರ್ಯಾಚರಣೆಯನ್ನು ಅನುಮಾನಿಸುತ್ತಿಲ್ಲ” ಎಂದು ಸಮಜಾಯಿಷಿ ನೀಡಿದರು.

ಅಂತಿಮವಾಗಿ ಪೀಠವು ಅರ್ಜಿದಾರರಿಗೆ ಸರ್ಕಾರದ ಅಫಿಡವಿಟ್‌ಗೆ ಪ್ರತಿಕ್ರಿಯಿಸಲು ಸೂಚಿಸಿತು. ಮಳೆ ಹೆಚ್ಚಾಗಿ, ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿರುವುದರಿಂದ ಕಾರ್ಯಾಚರಣೆ ಕಷ್ಟಸಾಧ್ಯವಾಗಿದೆ. ಪ್ರಕರಣದಲ್ಲಿ ಸಂತ್ರಸ್ತರಾಗಿರುವವರಿಗೆ ಏನೆಲ್ಲಾ ಪುನರ್ವಸತಿ ಕಲ್ಪಿಸಲಾಗಿದೆ ಎಂಬ ಬಗ್ಗೆ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಿತು. ವಿಚಾರಣೆಯನ್ನು ಸೆಪ್ಟೆಂಬರ್‌ 18ಕ್ಕೆ ಮುಂದೂಡಿತು. 

ಅಡಿಬರಹ: ಒಂದು ಗಂಟೆಯ ಅವಧಿಯಲ್ಲಿ 1.85 ಕಿ.ಮೀ. ವೇಗದಲ್ಲಿ ನೀರು ಹರಿಯುವುದನ್ನು ಒಂದು ನಾಟ್‌ ಎಂದು ಕರೆಯಲಾಗುತ್ತದೆ.