Karnataka HC, Begur Lake 
ಸುದ್ದಿಗಳು

[ಕೆರೆಯಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪನೆ] ನ್ಯಾಯಾಲಯದ ಆದೇಶ ಉಲ್ಲಂಘನೆ ಪರಿಣಾಮ ಬಿಬಿಎಂಪಿಗೆ ಗೊತ್ತಿದೆ: ಹೈಕೋರ್ಟ್‌

ಪ್ರಕರಣದ ಸಂಬಂಧ ಎಫ್‌ಐಆರ್‌ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಕೈಗೊಳ್ಳಲಾಗಿರುವ ಕ್ರಮದ ಕುರಿತ ಮಾಹಿತಿಯನ್ನು ಒಳಗೊಂಡ ಅಫಿಡವಿಟ್‌ ಅನ್ನು ಬೆಂಗಳೂರು ಪೊಲೀಸ್ ಆಯುಕ್ತರು ನ್ಯಾಯಾಲಯಕ್ಕೆ ಸಲ್ಲಿಸಿದರು.

Bar & Bench

ಬೆಂಗಳೂರಿನ ಬೇಗೂರು ಕೆರೆಯಲ್ಲಿ ಕೃತಕವಾಗಿ ದ್ವೀಪ ಸೃಷ್ಟಿಸಿ ಅಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪಿಸಿರುವ ಪ್ರಕರಣದ ತನಿಖೆ ನಡೆಸಿ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿಗೆ ಕರ್ನಾಟಕ ಹೈಕೋರ್ಟ್‌ ಬುಧವಾರ ಆದೇಶಿಸಿದೆ.

ಪ್ರಕರಣದಲ್ಲಿ ಅರ್ಜಿದಾರರಾಗಿರುವ ಪರಿಸರ ಬೆಂಬಲಿತ ಸಂಸ್ಥೆ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ವಿಭಾಗೀಯ ಪೀಠವು ಬೆಂಗಳೂರಿನ ಆಗ್ನೇಯ ವಿಭಾಗದ ಡಿಸಿಪಿಗೆ ತನಿಖೆಯ ಹೊಣೆ ನೀಡಿದೆ.

ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು ಬಿಬಿಎಂಪಿಯ ನಿಲುವಿಗೆ ಆಕ್ಷೇಪಿಸಿದರು. ಆಗ, “ಬಿಬಿಎಂಪಿ ಇದುವರೆಗೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿಲ್ಲ. ಒಂದೊಮ್ಮೆ ಹಾಗೆ ಮಾಡಿದರೆ ಅದರ ಪರಿಣಾಮ ಏನು ಎಂಬುದು ಬಿಬಿಎಂಪಿಗೆ ಗೊತ್ತಿದೆ. ನ್ಯಾಯಾಂಗ ನಿಂದನೆ ವಿಚಾರವನ್ನು ನಮಗೆ ಬಿಡಿ” ಎಂದು ಮುಖ್ಯ ನ್ಯಾಯಮೂರ್ತಿ ಓಕಾ ಹೇಳಿದರು.

ಶಿವನ ಪ್ರತಿಮೆಗೆ ಪರದೆ ಹಾಕಲಾಗಿದೆ. ನ್ಯಾಯಾಲಯದ ಆದೇಶದಂತೆ ಯಥಾಸ್ಥಿತಿ ಕಾಪಾಡಲಾಗಿದೆ ಎಂದು ಸರ್ಕಾರಿ ವಕೀಲ ವಿಜಯ್‌ ಕುಮಾರ್‌ ಪಾಟೀಲ್‌ ಅವರು ನ್ಯಾಯಾಲಯಕ್ಕೆ ವಿವರಿಸಿದರು.

ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಕೈಗೊಳ್ಳಲಾಗಿರುವ ಕ್ರಮದ ಕುರಿತ ಮಾಹಿತಿಯನ್ನು ಒಳಗೊಂಡ ಅಫಿಡವಿಟ್‌ ಅನ್ನು ಬೆಂಗಳೂರು ಪೊಲೀಸ್ ಆಯುಕ್ತರು ನ್ಯಾಯಾಲಯಕ್ಕೆ ಸಲ್ಲಿಸಿದರು. ಈಗಾಗಲೇ ಪ್ರಕರಣದ ಸಂಬಂಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪಂತ್‌ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ವಿವರಿಸಿದ್ದಾರೆ. ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್‌ 2ಕ್ಕೆ ಮುಂದೂಡಿದೆ.

ಕಳೆದ ವಿಚಾರಣೆಯ ಸಂದರ್ಭದಲ್ಲಿ ಬೇಗೂರು ಕೆರೆಯಲ್ಲಿ ಕೃತಕ ದ್ವೀಪ ಸೃಷ್ಟಿಸಿ ಶಿವನ ಮೂರ್ತಿ ಪ್ರತಿಷ್ಠಾಪಿಸಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಅಲ್ಲದೇ, ಕೆರೆಯ ಸುತ್ತಲೂ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡುವಂತೆಯೂ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿತ್ತು.

ಕೆರೆಯಲ್ಲಿ ಈ ರೀತಿಯ ಚಟುವಟಿಕೆಗಳನ್ನು ನಡೆಸಬಾರದು ಎಂದು ಹಲವು ಆದೇಶಗಳನ್ನು ಹೊರಡಿಸಿದ್ದರೂ ಹೀಗೆ ಮಾಡುತ್ತಿರುವುದು ಆಘಾತ ಉಂಟು ಮಾಡಿದೆ. "ನ್ಯಾಯಾಲಯದ ಆದೇಶಗಳನ್ನು ಬಿಡುಬೀಸಾಗಿ ಉಲ್ಲಂಘಿಸಲಾಗಿದೆ. ನ್ಯಾಯಾಲಯದ ಆದೇಶದಿಂದ ಯಾರಿಗಾದರೂ ಸಮಸ್ಯೆಯಾದರೆ ಅದಕ್ಕೆ ಶಾಸನಬದ್ಧವಾದ ಪರಿಹಾರಗಳಿವೆ" ಎಂದು ನ್ಯಾಯಾಲಯ ಹೇಳಿತ್ತು.

“ಮೆಮೊದಲ್ಲಿ ಉಲ್ಲೇಖಿಸಿರುವ ವಿಚಾರ ದಿಟವೇ ಆಗಿದ್ದರೆ, ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುವುದನ್ನು ಸಂಬಂಧಪಟ್ಟ ಎಲ್ಲರೂ ವಿರೋಧಿಸಬೇಕು. ನ್ಯಾಯಾಲಯದ ಆದೇಶಗಳನ್ನು ಗಮನಿಸಿದರೆ ಅವುಗಳು ಕೆರೆಗಳ ರಕ್ಷಣೆ, ನಾಪತ್ತೆಯಾಗಿರುವ ಕೆರೆಗಳನ್ನು ಪತ್ತೆ ಮಾಡಿ, ಪುನರುಜ್ಜೀವನಗೊಳಿಸುವ ಉದ್ದೇಶ ಹೊಂದಿವೆ” ಎಂದು ನ್ಯಾಯಾಲಯ ಹೇಳಿತ್ತು.