Karnataka HC, Begur Lake
Karnataka HC, Begur Lake

ಬೇಗೂರು ಕೆರೆಯಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪನೆ: ಬಿಡುಬೀಸಾಗಿ ನ್ಯಾಯಾಲಯ ಆದೇಶದ ಉಲ್ಲಂಘನೆ - ಹೈಕೋರ್ಟ್‌

ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಹಲವು ಕೆರೆಗಳು ಒತ್ತುವರಿಯಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗಳ ವಿಚಾರಣೆಯನ್ನು ವಿಭಾಗೀಯ ಪೀಠ ನಡೆಸಿತು.

ಬೆಂಗಳೂರಿನ ಬೇಗೂರು ಕೆರೆಯಲ್ಲಿ ಕೃತಕವಾಗಿ ದ್ವೀಪ ಸೃಷ್ಟಿಸಿ ಅಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪಿಸಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ಬುಧವಾರ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ. ಅಲ್ಲದೇ, ಕೆರೆಯ ಸುತ್ತಲೂ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡುವಂತೆಯೂ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.

ಪ್ರಕರಣದಲ್ಲಿ ಅರ್ಜಿದಾರರಾಗಿರುವ ಪರಿಸರ ಬೆಂಬಲಿತ ಸಂಸ್ಥೆ ಸಲ್ಲಿಸಿದ್ದ ಮೊಮೊ ಆಧರಿಸಿ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ವಿಭಾಗೀಯ ಪೀಠವು ಆದೇಶ ಹೊರಡಿಸಿದೆ. ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯ ಆದೇಶ ಹೊರಡಿಸಿದ್ದರೂ ಕೆರೆಯ ಮಧ್ಯದಲ್ಲಿ ಕೃತವಾಗಿ ಸೃಷ್ಟಿಸಲಾಗಿರುವ ದ್ವೀಪ ಪ್ರದೇಶದಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂದು ಮೆಮೊದಲ್ಲಿ ಉಲ್ಲೇಖಿಸಲಾಗಿದೆ.

ಕೆರೆಯಲ್ಲಿ ಈ ರೀತಿಯ ಚಟುವಟಿಕೆಗಳನ್ನು ನಡೆಸಬಾರದು ಎಂದು ಹಲವು ಆದೇಶಗಳನ್ನು ಹೊರಡಿಸಿದ್ದರೂ ಹೀಗೆ ಮಾಡುತ್ತಿರುವುದು ಆಘಾತ ಉಂಟು ಮಾಡಿದೆ. "ನ್ಯಾಯಾಲಯದ ಆದೇಶಗಳನ್ನು ಬಿಡುಬೀಸಾಗಿ ಉಲ್ಲಂಘಿಸಲಾಗಿದೆ. ನ್ಯಾಯಾಲಯದ ಆದೇಶದಿಂದ ಯಾರಿಗಾದರೂ ಸಮಸ್ಯೆಯಾದರೆ ಅದಕ್ಕೆ ಶಾಸನಬದ್ಧವಾದ ಪರಿಹಾರಗಳಿವೆ" ಎಂದು ನ್ಯಾಯಾಲಯ ಹೇಳಿದೆ.

“ಮೆಮೊದಲ್ಲಿ ಉಲ್ಲೇಖಿಸಿರುವ ವಿಚಾರ ದಿಟವೇ ಆಗಿದ್ದರೆ, ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುವುದನ್ನು ಸಂಬಂಧಪಟ್ಟ ಎಲ್ಲರೂ ವಿರೋಧಿಸಬೇಕು. ನ್ಯಾಯಾಲಯದ ಆದೇಶಗಳನ್ನು ಗಮನಿಸಿದರೆ ಅವುಗಳು ಕೆರೆಗಳ ರಕ್ಷಣೆ, ನಾಪತ್ತೆಯಾಗಿರುವ ಕೆರೆಗಳನ್ನು ಪತ್ತೆ ಮಾಡಿ, ಪುನರುಜ್ಜೀವನಗೊಳಿಸುವ ಉದ್ದೇಶ ಹೊಂದಿವೆ” ಎಂದು ನ್ಯಾಯಾಲಯ ಹೇಳಿದೆ.

ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಹಲವು ಕೆರೆಗಳು ಒತ್ತುವರಿಯಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗಳ ವಿಚಾರಣೆಯನ್ನು ಪೀಠ ನಡೆಸಿತು. ಬೇಗೂರು ಕೆರೆಯಲ್ಲಿ ಕೃತಕ ದ್ವೀಪ ಸೃಷ್ಟಿಸಿ ಅಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಕ್ರಮವನ್ನು ಮನವಿಯಲ್ಲಿ ಪ್ರಶ್ನಿಸಲಾಗಿತ್ತು.

Also Read
ಕಣ್ವ ಬಹುಕೋಟಿ ವಂಚನೆ ಹಗರಣ: ಸಂಸ್ಥೆಯ ಸಂಸ್ಥಾಪಕ ನಂಜುಂಡಯ್ಯಗೆ ಜಾಮೀನು ಮಂಜೂರು ಮಾಡಿದ ಕರ್ನಾಟಕ ಹೈಕೋರ್ಟ್‌

ಕೆರೆಯ ಮಧ್ಯದಲ್ಲಿ ಕೃತಕ ದ್ವೀಪ ಸೃಷ್ಟಿಸಬಹುದೇ ಎಂಬುದಕ್ಕೆ ಸಂಬಂಧಿಸಿದಂತೆ ಕಾನೂನಿನ ಮಾನ್ಯತೆ ಪರಿಶೀಲಿಸಬೇಕಿದೆ. “ಈ ಮನವಿಗಳಲ್ಲಿ ಯಾವುದೇ ಧಾರ್ಮಿಕ ವಿಚಾರಗಳು ಸೇರಿಲ್ಲ” ಎಂದು ನ್ಯಾಯಾಲಯ ಹೇಳಿದೆ. ಮುಂದಿನ ಮಂಗಳವಾರದೊಳಗೆ ಇದಕ್ಕೆ ಸಂಬಂಧಿಸಿದಂತೆ ಅನುಸರಣಾ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಪೀಠ ಆದೇಶ ಮಾಡಿದೆ.

ಈ ಮಧ್ಯೆ, ಶಿವನ ಮೂರ್ತಿಯನ್ನು ಮುಚ್ಚುವ ಮೂಲಕ ಯಥಾಸ್ಥಿತಿ ಕಾಪಾಡಲಾಗಿದೆ ಎಂದು ಬಿಬಿಎಂಪಿ ನ್ಯಾಯಾಲಯಕ್ಕೆ ತಿಳಿಸಿತು. ಮೂರ್ತಿಯನ್ನು ಮುಚ್ಚಿ, ದ್ವೀಪದಲ್ಲಿನ ಬಾವುಟಗಳನ್ನು ತೆರೆವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಪೊಲೀಸರ ನೆರವು ಪಡೆಯಬಹುದು ಎಂದು ನ್ಯಾಯಾಲಯ ಹೇಳಿದೆ.

Related Stories

No stories found.
Kannada Bar & Bench
kannada.barandbench.com