<div class="paragraphs"><p>Sumedhi Singh Saini and Supreme Court</p></div>

Sumedhi Singh Saini and Supreme Court

 
ಸುದ್ದಿಗಳು

ಭವಿಷ್ಯದಲ್ಲಿ ದಾಖಲಾಗಬಹುದಾದ ಪ್ರಕರಣಕ್ಕೂ ಜಾಮೀನು: ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ಆದೇಶ ಆಘಾತಕಾರಿ ಎಂದ ಸುಪ್ರೀಂ

Bar & Bench

ಪಂಜಾಬ್‌ನ ಮಾಜಿ ಪೊಲೀಸ್‌ ಮಹಾನಿರ್ದೇಶಕ ಸುಮೇಧ್‌ ಸಿಂಗ್‌ ಸೈನಿ ಅವರಿಗೆ ಬಾಕಿ ಇರುವ ಮತ್ತು ಭವಿಷ್ಯದಲ್ಲಿ ಅವರ ವಿರುದ್ಧ ದಾಖಲಾಗಬಹುದಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ನ ಆದೇಶದ ಕುರಿತು ಸುಪ್ರೀಂ ಕೋರ್ಟ್‌ ಶುಕ್ರವಾರ ಆಘಾತ ವ್ಯಕ್ತಪಡಿಸಿದೆ.

ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ನ್ಯಾಯಮೂರ್ತಿ ಅರವಿಂದ್‌ ಸಿಂಗ್‌ ಸಾಂಗ್ವಾನ್‌ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರ ನೇತೃತ್ವದ ಪೀಠವು ನಡೆಸಿತು.

ನ್ಯಾ. ಸಾಂಗ್ವಾನ್‌ ಅವರು ಹೊರಡಿಸಿರುವ ಆದೇಶವು ಕಂಡುಕೇಳರಿಯದ್ದು. ಇನ್ನೂ ದಾಖಲಾಗದೇ ಇರುವ ಭವಿಷ್ಯದ ಪ್ರಕರಣಗಳಿಗೆ ಈಗಲೇ ಹೇಗೆ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯ ಎಂದು ಸಿಜೆಐ ಪ್ರಶ್ನಿಸಿದ್ದಾರೆ. “ಇದು ಹಿಂದೆಂದೂ ಕಂಡಿರದಂತಹ ಆದೇಶ. ಭವಿಷ್ಯದಲ್ಲಿನ ಕ್ರಮವನ್ನು ಈಗಲೇ ಹೇಗೆ ನಿರ್ಬಂಧಿಸಲಾಗುತ್ತದೆ? ಇದು ಆಘಾತಕಾರಿಯಾಗಿದ್ದು, ಇದು ಹಿಂದೆಂದೂ ಕಂಡಿರದಂತಹ ಆದೇಶ ಎಂದು ನಾವು ಮೂವರೂ ನ್ಯಾಯಾಮೂರ್ತಿಗಳು ಭಾವಿಸುತ್ತೇವೆ. ಇದರ ವಿಚಾರಣೆ ಅಗತ್ಯ” ಎಂದರು.

“ಆಕ್ಷೇಪಾರ್ಹವಾದ ಪ್ರಕರಣವನ್ನು ಮತ್ತೊಬ್ಬ ನ್ಯಾಯಮೂರ್ತಿಯವರ ಪೀಠಕ್ಕೆ ವರ್ಗಾಯಿಸಿ ಎರಡು ವಾರಗಳಲ್ಲಿ ವಿಲೇವಾರಿ ಮಾಡುವಂತೆ ಹೈಕೋರ್ಟ್‌ಗೆ ಕೋರುತ್ತೇವೆ. ಮುಖ್ಯ ನ್ಯಾಯಮೂರ್ತಿ ತಾವೇ ಆಲಿಸುವಂತೆ ಅಥವಾ ಬೇರೆ ಯಾರಾದರೂ ನ್ಯಾಯಮೂರ್ತಿಗಳಿಗೆ ಈ ಪ್ರಕರಣ ನಿಯೋಜಿಸುವಂತೆ ಕೋರುತ್ತಿದ್ದು, ನಾವು ಈ ವಿಶೇಷ ಮನವಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿಸುತ್ತೇವೆ” ಎಂದರು.

ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಬಲವಂತ್‌ ಸಿಂಗ್‌ ಮುಲ್ತಾನಿ ಕೊಲೆ ಪ್ರಕರಣ ಹೊರತುಪಡಿಸಿ ಉಳಿದ ಯಾವುದೇ ಪ್ರಕರಣದಲ್ಲಿ ಸೈನಿ ಅವರನ್ನು ಏಪ್ರಿಲ್‌ 20ರವರೆಗೆ ಬಂಧಿಸಬಾರದು ಎಂದು ಗುರುವಾರ ನ್ಯಾ. ಸಾಂಗ್ವಾನ್‌ ಅವರು ಆದೇಶ ಮಾಡಿದ್ದರು.

ಆಟೊ ಮೊಬೈಲ್‌ ಉದ್ಯಮಿ ವಿನೋದ್‌ ಕುಮಾರ್‌, ಆತನ ಭಾವ ಮೈದುನ ಅಶೋಕ್ ಕುಮಾರ್‌ ಮತ್ತು ಅವರ ಚಾಲಕ ಮುಖ್ತಿಯಾರ್‌ ಸಿಂಗ್‌ ಅಪಹರಣ ಪ್ರಕರಣವು ದೆಹಲಿಯ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿದ್ದು, ಅದರಲ್ಲೂ ಸೈನಿ ಆರೋಪಿಯಾಗಿದ್ದಾರೆ.