ಲಿವ್‌-ಇನ್‌ ಸಂಬಂಧ ಎಲ್ಲರಿಗೂ ಒಪ್ಪಿತವಾಗದಿರಬಹುದು, ಆದರೆ ಕಾನೂನುಬಾಹಿರ, ಅಪರಾಧವಲ್ಲ: ಪಂಜಾಬ್‌ & ಹರಿಯಾಣ ಹೈಕೋರ್ಟ್‌

“ವಿವಾಹ ಬಂಧಕ್ಕೆ ಒಳಗಾಗದ ಹೊರತಾಗಿ ಸಹ ಜೀವನ ನಡೆಸಲು ನಿರ್ಧರಿಸಿದ ಜೋಡಿಗೆ ರಕ್ಷಣೆ ನೀಡಲು ನಿರಾಕರಿಸುವುದು ನ್ಯಾಯದಾನದ ಅಪಹಾಸ್ಯವಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.
Punjab and Haryana High Court
Punjab and Haryana High Court

ಲಿವ್-ಇನ್‌ ಸಂಬಂಧದ ಕುರಿತು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ಎರಡು ಪೀಠಗಳು ಭಿನ್ನ ಆದೇಶಗಳನ್ನು ಹೊರಡಿಸಿರುವ ನಡುವೆಯೇ ಮತ್ತೊಂದು ಪೀಠವು ವಿವಾಹೇತರ ಸಹ ಜೀವನವನ್ನು ವಾಸ್ತವಿಕ ನೆಲೆಗಟ್ಟಿನ ಜೊತೆಗೆ ಕಾನೂನಾತ್ಮಕವಾಗಿ ವ್ಯಾಖ್ಯಾನಿಸಿದೆ. ಲಿವ್‌-ಇನ್‌ ಸಂಬಂಧವನ್ನು ಎಲ್ಲರೂ ಒಪ್ಪಿಕೊಳ್ಳದಿದ್ದರೂ ಆ ಸಂಬಂಧವು ಕಾನೂನುಬಾಹಿರವಾದುದು ಅಥವಾ ಅದು ಅಪರಾಧವಾಗುತ್ತದೆ ಎಂದು ಹೇಳಲಾಗದು ಎಂದು ನ್ಯಾಯಮೂರ್ತಿ ಜೈಶ್ರೀ ಠಾಕೂರ್‌ ಅವರಿದ್ದ ಏಕಸದಸ್ಯ ಪೀಠ ಹೇಳಿದೆ (ಸೋನಿಯಾ ಮತ್ತು ಇತರರು ವರ್ಸಸ್‌ ಹರಿಯಾಣ ರಾಜ್ಯ).

“ಲಿವ್-ಇನ್‌ ಸಂಬಂಧವು ಎಲ್ಲರಿಗೂ ಒಪ್ಪಿತವಾಗದಿರಬಹುದು. ಆದರೆ, ಅಂಥ ಸಂಬಂಧವು ಕಾನೂನುಬಾಹಿರ ಅಥವಾ ವಿವಾಹ ಬಂಧಕ್ಕೆ ಒಳಗಾಗದೇ ಸಹ ಜೀವನ ನಡೆಸುವುದು ಅಪರಾಧವಾಗುತ್ತದೆ ಎಂದು ಹೇಳಲಾಗದು” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣಾ ಕಾಯಿದೆ 2005ರ ಅಡಿ ಕೌಟುಂಬಿಕ ಸಂಬಂಧದಲ್ಲಿರುವ ಮಹಿಳೆಗೆ ರಕ್ಷಣೆ, ಜೀವನ ನಿರ್ವಹಣೆ ಹಕ್ಕು ಇತ್ಯಾದಿ ಸೇರಿರುತ್ತದೆ ಎಂದೂ ನ್ಯಾಯಮೂರ್ತಿ ಠಾಕೂರ್‌ ಹೇಳಿದ್ದಾರೆ.

“ಕೌಟುಂಬಿಕ ದೌರ್ಜನ್ಯ ಕಾಯಿದೆಯಲ್ಲಿ ಪತ್ನಿ ಎಂಬ ಪದವನ್ನು ಬಳಸಿಲ್ಲ ಎಂಬುದನ್ನು ಗಮನಿಸಬೇಕಿದೆ. ಹೀಗಾಗಿ, ಲಿವ್-ಇನ್‌ ಸಂಬಂಧದಲ್ಲಿ ಮಹಿಳೆ ಮತ್ತು ಲಿವ್-ಇನ್‌ ಸಂಬಂಧದಲ್ಲಿದ್ದ ಜೋಡಿಯ ಮಕ್ಕಳಿಗೆ ಅಗತ್ಯ ರಕ್ಷಣೆಯನ್ನು ಸಂಸತ್‌ ಕಲ್ಪಿಸಿದೆ” ಎಂದು ಪೀಠ ಹೇಳಿದೆ.

ಲಿವ್‌-ಇನ್‌ ಸಂಬಂಧವು ನೈತಿಕ ಮತ್ತು ಸಾಮಾಜಿಕವಾಗಿ ಒಪ್ಪಿತವಲ್ಲ ಮತ್ತು ಇದು ಸಾಮಾಜಿಕ ವ್ಯವಸ್ಥೆಯ ಕಟ್ಟಲೆಗಳನ್ನು ಶಿಥಿಲಗೊಳಿಸಬಹುದು ಎಂದು ಹೇಳಿ ಅವಿವಾಹಿತ ದಂಪತಿಗೆ ರಕ್ಷಣೆ ನಿರಾಕರಿಸಿರುವ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ಇತರ ಎರಡು ನ್ಯಾಯಪೀಠಗಳ ಆದೇಶದ ಬೆನ್ನಿಗೇ ಈ ತೀರ್ಪು ಬಂದಿದೆ.

“… ಲಿವ್‌ –ಇನ್‌ ಸಂಬಂಧದಲ್ಲಿದ್ದ ಜೋಡಿಗೆ ರಕ್ಷಣೆ ನಿರಾಕರಿಸಿದ ಎರಡು ಸಹವರ್ತಿ ಪೀಠಗಳು ನೀಡಿರುವ ತೀರ್ಪುಗಳನ್ನು ಗೌರವಿಸುತ್ತಲೇ ಈ ಪೀಠವು ಅದೇ ದೃಷ್ಟಿಯನ್ನು ಅಳವಡಿಸಿಕೊಳ್ಳಲು ಸಿದ್ಧವಿಲ್ಲ” ಎಂದು ನ್ಯಾ. ಠಾಕೂರ್‌ ಹೇಳಿದ್ದಾರೆ.

Also Read
ಲಿವ್‌-ಇನ್‌ ಸಂಬಂಧ ನಿಷೇಧಿಸಿಲ್ಲ; ಕಾನೂನಿನ ರಕ್ಷಣೆಗೆ ಅರ್ಹ: ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್

ಮಹಿಳೆಯ ಪೋಷಕರು ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಹ ಜೀವನ ನಡೆಸುತ್ತಿದ್ದ ಮಹಿಳೆ ಮತ್ತು ಪುರುಷ ರಕ್ಷಣೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪುರುಷನಿಗೆ 19 ವರ್ಷ ಮಾತ್ರವಾಗಿದ್ದ ಹಿನ್ನೆಲೆಯಲ್ಲಿ ಅರ್ಜಿದಾರರು ಆತ ವಿವಾಹದ ವಯಸ್ಸು ದಾಟುವವರೆಗೆ ಸಹ ಜೀವನ ನಡೆಸುವ ನಿರ್ಧಾರ ಮಾಡಿದ್ದರು. ಅರ್ಜಿದಾರರು ಭಿನ್ನ ಜಾತಿಗಳಿಗೆ ಸೇರಿದ್ದರಿಂದ ಈ ಸಂಬಂಧವನ್ನು ಕುಟುಂಬ ಸದಸ್ಯರು ಒಪ್ಪಿಕೊಂಡಿರಲಿಲ್ಲ ಎಂದು ಪೀಠದ ಗಮನಕ್ಕೆ ತರಲಾಗಿತ್ತು.

ಅರ್ಜಿದಾರರು ವಿವಾಹವಾಗಲು ಅಥವಾ ತಮ್ಮ ಸಂಬಂಧಕ್ಕೆ ಅಧಿಕೃತತೆ ಗಿಟ್ಟಿಸಿಕೊಳ್ಳಲು ನ್ಯಾಯಾಲಯವನ್ನು ಸಂಪರ್ಕಿಸಿಲ್ಲ ಎಂದು ನ್ಯಾ. ಜೈಶ್ರೀ ಠಾಕೂರ್‌ ದಾಖಲಿಸಿಕೊಂಡಿದ್ದಾರೆ. ಕುಟುಂಬ ಸದಸ್ಯರಿಂದ ಪಾರಾಗಲು ರಕ್ಷಣೆ ನೀಡುವಂತೆ ಅರ್ಜಿದಾರರು ಕೋರಿದ್ದಾರೆ ಎಂದು ಪೀಠ ಹೇಳಿದೆ.

Also Read
ಲಿವ್ ಇನ್‌ ಸಂಬಂಧ ನೈತಿಕ, ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲ: ರಕ್ಷಣೆ ನೀಡಲು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ನಕಾರ

ಉತ್ತರ ಭಾರತದಲ್ಲಿ ಮರ್ಯಾದೆಗೇಡು ಹತ್ಯೆ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ರಕ್ಷಣೆ ನಿರಾಕರಿಸುವುದು ನ್ಯಾಯದ ಅವಹೇಳನ ಎನಿಸಿಕೊಳ್ಳಲಿದೆ ಎಂದು ನ್ಯಾಯಾಲಯ ಹೇಳಿದೆ. “ವಿವಾಹ ಬಂಧಕ್ಕೆ ಒಳಗಾಗದೇ ಸಹ ಜೀವನ ನಡೆಸಲು ನಿರ್ಧರಿಸಿದ ಜೋಡಿಗೆ ರಕ್ಷಣೆ ನಿರಾಕರಿಸುವುದು ನ್ಯಾಯದ ಅವಹೇಳನವಾಗುತ್ತದೆ. ಬೆದರಿಕೆಯೊಡ್ಡುವವರಿಂದ ಇಂಥ ಜನರು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಒಂದೊಮ್ಮೆ ನ್ಯಾಯಾಲಯವು ರಕ್ಷಣೆ ನಿರಾಕರಿಸಿದರೆ ಸಂವಿಧಾನದ 21ನೇ ವಿಧಿಯಡಿ ನಾಗರಿಕರ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕು ಮತ್ತು ಕಾನೂನನ್ನು ಎತ್ತಿಹಿಡಿಯಲು ವಿಫಲವಾದಂತಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಜೀವಿಸುವ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಇದೆ ಎಂದಾದರೆ ಅವರಿಗೆ ರಕ್ಷಣೆ ನೀಡುವಂತೆ ಪೋಲೀಸರಿಗೆ ನ್ಯಾಯಾಲಯವು ನಿರ್ದೇಶಿಸಿದೆ.

Related Stories

No stories found.
Kannada Bar & Bench
kannada.barandbench.com