ಸುದ್ದಿಗಳು

ಜಾಮೀನಿನ ಮೇಲಿರುವ ಆರೋಪಿಗಳ ಬಗ್ಗೆ ಸಹಾನುಭೂತಿ ಇರಲಿ: ಪೊಲೀಸರಿಗೆ ಮಣಿಪುರ ಹೈಕೋರ್ಟ್ ಕಿವಿಮಾತು

ಪ್ರತಿ ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವದ ವೇಳೆ ತನ್ನನ್ನು ಪೊಲೀಸರು ಕರೆದೊಯ್ಯುತ್ತಾರೆ. ಅಲ್ಲದೆ ಜನರಿಗೆ ಕಾಣುವಂತೆ ಛಾಯಾಚಿತ್ರ ತೆಗೆದು ತನ್ನ ಪ್ರತಿಷ್ಠೆಗೆ ಧಕ್ಕೆ ತರುತ್ತಾರೆ ಎಂದು ಆರೋಪಿ ಅರ್ಜಿದಾರ ಅಳಲು ತೋಡಿಕೊಂಡಿದ್ದರು.

Bar & Bench

ಜಾಮೀನಿನ ಮೇಲಿರುವ ಆರೋಪಿಗಳ ಬಗ್ಗೆ ಸಹಾನುಭೂತಿಯಿಂದ ವರ್ತಿಸುವಂತೆ ಮಣಿಪುರ ಹೈಕೋರ್ಟ್‌ ಇತ್ತೀಚೆಗೆ ಪೊಲೀಸರಿಗೆ ಸಲಹೆ ನೀಡಿದೆ [ಮೈಸ್ನಮ್‌ ಕರೌಹ್ನಬಾ ಲುವಾಂಗ್‌ ಮತ್ತು ಮಣಿಪುರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಜಾಮೀನಿನ ಮೇಲೆ ಹೊರಗಿರುವ ತನ್ನನ್ನು ಪ್ರತಿ ಸ್ವಾತಂತ್ರ್ಯೋತ್ಸವದ (ಆಗಸ್ಟ್ 15) ಮತ್ತು ಗಣರಾಜ್ಯೋತ್ಸವದ  (ಜನವರಿ 26) ಮುನ್ನಾದಿನ ಪೊಲೀಸರು ಕರೆದೊಯ್ದು ಕಿರುಕುಳ ನೀಡುತ್ತಿದ್ದಾರೆ ಎಂದು ವ್ಯಕ್ತಿಯೊಬ್ಬರು ನೀಡಿದ್ದ ದೂರಿನ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಜಾಮೀನಿನ ಮೇಲೆ ಹೊರಗಿರುವ ವ್ಯಕ್ತಿಗಳೊಂದಿಗೆ ಸಹಾನುಭೂತಿಯಿಂದ ವ್ಯವಹರಿಸುವಂತೆ ಪೊಲೀಸರಿಗೆ ಸೂಚಿಸುವ ನಿಟ್ಟಿನಲ್ಲಿ ಆದೇಶದ ಪ್ರತಿಯನ್ನು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಕಳಿಸುವಂತೆಯೂ ನ್ಯಾಯಮೂರ್ತಿ ಎ ಗುಣೇಶ್ವರ್ ಶರ್ಮಾ ಈ ಸಂದರ್ಭದಲ್ಲಿ ತಿಳಿಸಿದರು.

ಅರ್ಜಿದಾರರು ನಿಷೇಧಿತ ಉಗ್ರಗಾಮಿ ಸಂಘಟನೆಯ (ಪಿಎಲ್‌ಎ/ಆರ್‌ಪಿಎಫ್) ಸದಸ್ಯ ಎಂದು ಆರೋಪಿಸಲಾಗಿದ್ದು 2012ರಲ್ಲಿ 9ರಿಂದ 10 ದಿನಗಳ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಹತ್ತು ವರ್ಷಗಳ ಹಿಂದೆ ತನ್ನನ್ನು ಬಂಧಿಸಲಾಗಿದ್ದರೂ ತನಿಖೆಯಲ್ಲಿ ಯಾವುದೇ ಪ್ರಗತಿ ಆಗಿಲ್ಲ, ತನ್ನ ವಿರುದ್ಧ ಯಾವುದೇ ಪ್ರಾಥಮಿಕ ಪ್ರಕರಣಗಳಿಲ್ಲದಿದ್ದರೂ ನಿರಂಕುಶವಾಗಿ ತನ್ನನ್ನು ಬಂಧಿಸಲಾಗಿದೆ ಎಂದು ಅವರು ವಾದಿಸಿದರು.

ಪ್ರಸ್ತುತ ವ್ಯಾಪಾರ ನಡೆಸುತ್ತಿರುವ ತಾನೇ ಕುಟುಂಬದ ಜೀವನಾಧಾರ. ವೃದ್ಧ ಪೋಷಕರು, ಹೆಂಡತಿ ಹಾಗೂ ಇಬ್ಬರು ಅಪ್ರಾಪ್ತ ವಯಸ್ಕ ಮಕ್ಕಳನ್ನು ನೋಡಿಕೊಳ್ಳಬೇಕಿದೆ. ಹೀಗಿರುವಾಗ ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನದಂದು ಪೊಲೀಸರು ತನ್ನನ್ನು ಮನೆಯಿಂದ ಕರೆದೊಯ್ದು ಛಾಯಾಚಿತ್ರ ತೆಗೆದು ಸಮಾಜದಲ್ಲಿ ತನ್ನ ಪ್ರತಿಷ್ಠೆಗೆ ಧಕ್ಕೆ ತರುತ್ತಿದ್ದಾರೆ. ಇದು ತನ್ನ ಖಾಸಗಿತನದ ಹಕ್ಕು ಮತ್ತು ಘನತೆಯಿಂದ ಬದುಕುವ ಹಕ್ಕಿನ ಉಲ್ಲಂಘನೆ ಎಂದು ಅರ್ಜಿದಾರರು ಅಳಲು ತೋಡಿಕೊಂಡಿದ್ದರು.

ಹೀಗಾಗಿ ಎಫ್‌ಐಆರ್‌ನಲ್ಲಿರುವ ತಮ್ಮ ವಿರುದ್ಧದ ಆರೋಪಗಳನ್ನು ರದ್ದುಗೊಳಿಸಬೇಕು ಅಥವಾ ನಿರ್ದಿಷ್ಟ ಕಾಲಮಿತಿಯೊಳಗೆ ತನಿಖೆಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.

ಆದರೆ ಸರ್ಕಾರದ ಅಧಿಕಾರಿಗಳು ಅರ್ಜಿದಾರರ ದೂರನ್ನು ಅಲ್ಲಗಳೆದಿದ್ದರು. ಮಣಿಪುರ ದಂಗೆ ಪೀಡಿತ ರಾಜ್ಯವಾಗಿದ್ದು ಜಾಮೀನಿನ ಮೇಲಿರುವ ಮತ್ತು ಶರಣಾಗತ ಉಗ್ರರನ್ನು ಕೆಲವೊಮ್ಮೆ ಅವರ ಯೋಗಕ್ಷೇಮ ವಿಚಾರಿಸಲು ಇಲ್ಲವೇ ಅವರಿಗೆ ಸಲಹೆ ನೀಡಲು ಪೊಲೀಸ್‌ ಠಾಣೆಗೆ ಕರೆಸಲಾಗುತ್ತದೆ ಎಂದು ಅವರು ವಾದಿಸಿದ್ದರು.

ಅರ್ಜಿದಾರರ ವಿರುದ್ಧದ ಪ್ರಕರಣದ ತನಿಖೆ ಪೂರ್ಣಗೊಳಿಸಲು ವಿಳಂಬವಾಗುತ್ತಿರುವುದಕ್ಕೆ ಕಾರಣ ಎಂದರೆ ಅವರ ಸಹಚರರನ್ನು ಬಂಧಿಸಲು ಸಾಧ್ಯವಿಲ್ಲ ಎಂಬುದಾಗಿದೆ ಎನ್ನುವುದನ್ನು ನ್ಯಾಯಾಲಯ ಈ ಸಂದರ್ಭದಲ್ಲಿ ಗಮನಿಸಿತು.

ಆದರೆ ಯುಎಪಿಎ ಅಡಿಯ ಅಪರಾಧಗಳು ಗಂಭೀರವಾಗಿದ್ದು ರಾಷ್ಟ್ರದ ಭದ್ರತೆಗೆ ಸಂಬಂಧಿಸಿರುವುದರಿಂದ ಕೇವಲ ತಾಂತ್ರಿಕ ಕಾರಣಗಳಿಗಾಗಿ ಅರ್ಜಿದಾರರ ವಿರುದ್ಧದ ಎಫ್‌ಐಆರ್‌ ರದ್ದುಗೊಳಿಸಲು ಸಾಧ್ಯವಿಲ್ಲ ಎಂದಿರುವ ನ್ಯಾಯಾಲಯ ಹೀಗಾಗಿ, 6 ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ, ಈ ಗಡುವಿನೊಳಗೆ ಸಂಬಂಧಪಟ್ಟ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದೆ.  

ಇದಲ್ಲದೆ ಭವಿಷ್ಯದಲ್ಲಿ ತನಿಖಾಧಿಕಾರಿಗಳ ಮುಂದೆ ಅರ್ಜಿದಾರರನ್ನು ಹಾಜರುಪಡಿಸುವ ಮುನ್ನ ಸಿಆರ್‌ಪಿಸಿ ಸೆಕ್ಷನ್‌ 41 ಎ ಅಡಿಯಲ್ಲಿ ಅವರಿಗೆ ನೋಟಿಸ್‌ ನೀಡಬೇಕು. ಆಗಲೂ ಅವರು ಹಾಜರಾಗದಿದ್ದರೆ ಅವರನ್ನು ಹಾಜರುಪಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬಹುದು ಎಂದು ನ್ಯಾಯಾಲಯ ತಿಳಿಸಿತು.