Amazon - Future Group (Representation only) 
ಸುದ್ದಿಗಳು

ಅಮೆಜಾನ್‌ಗೆ ₹23.7 ಕೋಟಿ ಪರಿಹಾರ, ₹77 ಕೋಟಿ ಕಾನೂನು ಶುಲ್ಕ ನೀಡುವಂತೆ ಫ್ಯೂಚರ್ ಗ್ರೂಪ್‌ಗೆ ಎಸ್ಐಎಸಿ ಆದೇಶ

ಫ್ಯೂಚರ್ ಕೂಪನ್ಸ್‌ನಲ್ಲಿ ಶೇ 49ರಷ್ಟು ಪಾಲು ಪಡೆಯಲು ಅಮೆಜಾನ್‌ 2019ರಲ್ಲಿ ₹1,436 ಕೋಟಿ ಹೂಡಿಕೆ ಮಾಡಿತ್ತು. ನಂತರ ರಿಲಯನ್ಸ್‌ ಜೊತೆ ಫ್ಯೂಚರ್‌ ಗ್ರೂಪ್‌ ಒಪ್ಪಂದ ಆರಂಭಿಸಿದ್ದು ವ್ಯಾಜ್ಯದ ಮೂಲ.

Bar & Bench

ಸುದೀರ್ಘ ಕಾನೂನೂ ಹೋರಾಟವೊಂದರಲ್ಲಿ ಅಮೆಜಾನ್‌ಗೆ ₹23.7 ಕೋಟಿ ಪರಿಹಾರ ನೀಡುವಂತೆ ಕಿಶೋರ್ ಬಿಯಾನಿ ನೇತೃತ್ವದ ಫ್ಯೂಚರ್ ಗ್ರೂಪ್‌ಗೆ ಸಿಂಗಾಪುರ್ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ (ಎಸ್‌ಐಎಸಿ) ಆದೇಶಿಸಿದೆ.

ರಿಲಯನ್ಸ್ ಜೊತೆ ವ್ಯವಹಾರ ಆರಂಭಿಸುವ ಮೂಲಕ ಅಮೆಜಾನ್ ಜೊತೆಗೆ ಈ ಹಿಂದೆ ಮಾಡಿಕೊಳ್ಳಲಾಗಿದ್ದ ಒಪ್ಪಂದದ ಹೊಣೆಗಾರಿಕೆಯಿಂದ ಫ್ಯೂಚರ್‌ ಗ್ರೂಪ್‌ ನುಣುಚಿಕೊಂಡಿದೆ ಎಂದು ಎಸ್‌ಐಎಸಿ ತಿಳಿಸಿದೆ.

ಫ್ಯೂಚರ್‌ ಕೂಪನ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ತಾನು ಹೂಡಿಕೆ ಮಾಡಿದ ₹1,436 ಕೋಟಿ ಮೊತ್ತವನ್ನು ಪರಿಹಾರವಾಗಿ ನೀಡಬೇಕು ಎಂದು ಅಮೆಜಾನ್‌ ಕೋರಿದ್ದರೂ  ₹23.7 ಕೋಟಿ ನೀಡುವಂತೆ ಮಧ್ಯಸ್ಥಿಕೆ ಕೇಂದ್ರ ಆದೇಶಿಸಿತು.

ಅಮೆಜಾನ್ ಮಧ್ಯಸ್ಥಿಕೆ ಪ್ರಕ್ರಿಯೆಗಳಲ್ಲಿ ಮತ್ತು ಭಾರತದಲ್ಲಿನ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳ ಮುಂದಿರುವ ಪ್ರಕರಣಗಳನ್ನು ನಡೆಸಲು ವ್ಯಯಿಸಿದ ₹125 ಕೋಟಿ ಕಾನೂನು ಶುಲ್ಕ ಪಡೆಯಲು ಕೂಡ ಅಮೆಜಾನ್‌ ಮುಂದಾಗಿತ್ತು.  ಆದರೆ ಮಧ್ಯಸ್ಥಿಕೆ ಕೇಂದ್ರ ಕಾನೂನು ಶುಲ್ಕ ರೂಪದಲ್ಲಿ  ₹77 ಕೋಟಿ  ಮತ್ತು ಮಧ್ಯಸ್ಥಿಕೆ ಶುಲ್ಕವಾಗಿ ₹6 ಕೋಟಿ ಪಡೆದುಕೊಳ್ಳುವಂತೆ ಸೂಚಿಸಿದೆ.

ರಿಲಯನ್ಸ್ ಜೊತೆಗಿನ ವಹಿವಾಟನ್ನು ಒಪ್ಪಿ ಫ್ಯೂಚರ್‌ ಗ್ರೂಪ್‌ ನಿರ್ದೇಶಕರ ಮಂಡಳಿ ಕೈಗೊಂಡ ನಿರ್ಣಯವು ಅಮೆಜಾನ್ ಜೊತೆಗಿನ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಪ್ರೊ. ಆಲ್ಬರ್ಟ್ ಜಾನ್ ವ್ಯಾನ್ ಡೆನ್ ಬರ್ಗ್ , ಪ್ರೊ. ಜಾನ್ ಪಾಲ್ಸನ್ ಹಾಗೂ ಹಿರಿಯ ಸದಸ್ಯ ಮೈಕೆಲ್ ಹ್ವಾಂಗ್ ಅವರಿದ್ದ ಮಧ್ಯಸ್ಥಿಕೆ ಕೇಂದ್ರ ತಿಳಿಸಿದೆ.

ಫ್ಯೂಚರ್ ಕೂಪನ್ಸ್‌ನಲ್ಲಿ ಶೇ 49ರಷ್ಟು ಪಾಲು ಪಡೆಯಲು ಅಮೆಜಾನ್‌ 2019ರಲ್ಲಿ ವ್ಯೂಹಾತ್ಮಕವಾಗಿ ₹1,436 ಕೋಟಿ ಹೂಡಿಕೆ ಮಾಡಿತ್ತು. ನಂತರ ರಿಲಯನ್ಸ್‌ ಜೊತೆ ಫ್ಯೂಚರ್‌ ಗ್ರೂಪ್‌ ಒಪ್ಪಂದ ಆರಂಭಿಸಿದ್ದು ವ್ಯಾಜ್ಯದ ಮೂಲ.

ಹಿರಿಯ ವಕೀಲರಾದ ಗೋಪಾಲ್ ಸುಬ್ರಮಣಿಯಂ, ಗೌರಬ್ ಬ್ಯಾನರ್ಜಿ, ಅಮಿತ್ ಸಿಬಲ್ ಮತ್ತು ನಕುಲ್ ದಿವಾನ್ ಅವರು ಅಮೆಜಾನ್ ಪರವಾಗಿ ವಾದ ಮಂಡಿಸಿದರು.  

ಫ್ಯೂಚರ್ ಕೂಪನ್ಸ್‌ ಮತ್ತು ಪ್ರವರ್ತಕ ಗುಂಪನ್ನು ಹಿರಿಯ ವಕೀಲ ದಯಾನ್ ಕೃಷ್ಣನ್ ಮತ್ತು  ಸಿಂಗಪುರದ ಹಿರಿಯ ವಕೀಲ ಅಬ್ರಹಾಂ ವರ್ಗಿಸ್ ಪ್ರತಿನಿಧಿಸಿದ್ದರು.

ಫ್ಯೂಚರ್ ರಿಟೇಲ್ ಲಿಮಿಟೆಡ್ ಪರವಾಗಿ ಹಿರಿಯ ನ್ಯಾಯವಾದಿಗಳಾದ ಹರೀಶ್ ಎನ್ ಸಾಳ್ವೆ ಮತ್ತು ವಕೀಲ ಡೇರಿಯಸ್ ಖಂಬಟ ವಾದಿಸಿದರು.