ಸುಪ್ರೀಂಕೋರ್ಟ್‌ನಲ್ಲಿ ಪತ್ರಕರ್ತ ಸಿದ್ದಿಕಿ ಕಪ್ಪನ್ ಬಂಧನ ಪ್ರಕರಣದ ವಿಚಾರಣೆ ವೇಳೆ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಪ್ರಕರಣವನ್ನು ಕೈಗೆತ್ತಿಕೊಂಡ ಮತ್ತು ತ್ವರಿತ ಪರಿಹಾರ ನೀಡಿದ ರೀತಿ ಮುನ್ನೆಲೆಗೆ ಬಂದಿತು.
ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರು ಕೇರಳ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದರು. ಆಗ ಕೆಯುಡಬ್ಲ್ಯೂಜೆ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್, “ಅರ್ನಾಬ್ ಅರ್ಜಿ ಕೆಳ ನ್ಯಾಯಾಲಯದಲ್ಲೇ ಇದ್ದರೂ ಸುಪ್ರೀಂಕೋರ್ಟ್ ಇತ್ಯರ್ಥಪಡಿಸಿತು” ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಬೊಬ್ಡೆ ʼಪ್ರತಿ ಪ್ರಕರಣವೂ ಭಿನ್ನʼ ಎಂದರು.
ಪತ್ರಕರ್ತ ಸಿದ್ದಿಕಿ ಕಪ್ಪನ್ ಅವರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿರುವುದನ್ನು ಪ್ರಶ್ನಿಸಿ ಕೆಯುಡಬ್ಲ್ಯೂಜೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯುತ್ತರ ಸಲ್ಲಿಸಬೇಕಿರುವುದರಿಂದ ವಿಚಾರಣೆಯನ್ನು ಮುಂದೂಡುವಂತೆ ಉತ್ತರಪ್ರದೇಶ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರಿದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಬಲ್, ಪ್ರಕರಣ ಸ್ವಾತಂತ್ರ್ಯದ ಪ್ರಶ್ನೆಯನ್ನು ಒಳಗೊಂಡಿದ್ದು ಎರಡು ವಾರಗಳಷ್ಟು ಕಾಲವೆಲ್ಲಾ ವಿಚಾರಣೆ ಮುಂದೂಡಬಾರದು ಎಂದು ಮನವಿ ಮಾಡಿದರು. ಆದರೆ ಸಿಬಲ್ ಅವರ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಬರುವ ವಾರಕ್ಕೆ ಮುಂದೂಡಿದೆ.