ಮುಚ್ಚಿದ ಪತ್ರಿಕೆಯಲ್ಲಿ ಕೆಲಸ, ನಿಷೇಧಿತ ಸಂಘಟನೆಗಳ ಜೊತೆ ಕಪ್ಪನ್ ಸಂಪರ್ಕ: ಸುಪ್ರೀಂಗೆ ಉತ್ತರ ಪ್ರದೇಶ ಸರ್ಕಾರ ಮಾಹಿತಿ

ಇನ್ನಿತರ ಆರೋಪಿಗಳ ಜೊತೆ ಸಿದ್ದಿಕಿ ಕಪ್ಪನ್ ಅವರನ್ನು ಬಂಧಿಸಲಾಗಿದ್ದು, ಅವರನ್ನು ಸಂಬಂಧಿತ ನ್ಯಾಯಾಲಯವು ವಶಕ್ಕೆ ನೀಡಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
Siddique Kappan, Hathras
Siddique Kappan, Hathras

ಹಾಥ್‌ರಸ್‌ ಸಾಮೂಹಿಕ ಅತ್ಯಾಚಾರ ಘಟನೆಯ ವರದಿಗಾರಿಕೆಗೆ ತೆರಳುವಾಗ ಬಂಧಿಸಲ್ಪಟ್ಟ ಕೇರಳದ ಪತ್ರಕರ್ತ ಸಿದ್ದಿಕಿ ಕಪ್ಪನ್‌ ಅವರು 2018ರಲ್ಲಿ ಮುಚ್ಚಿದ ತೇಜಸ್‌ ಪತ್ರಿಕೆಯ ಗುರುತಿನ ಚೀಟಿ ಹೊಂದಿದ್ದರು ಎಂದು ಸುಪ್ರೀಂ ಕೋರ್ಟ್‌ಗೆ ಉತ್ತರ ಪ್ರದೇಶ ಸರ್ಕಾರ ವಿವರಿಸಿದೆ.

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಕಚೇರಿಯ ಕಾರ್ಯದರ್ಶಿಯಾದ ಕಪ್ಪನ್‌ ಅವರು 'ಜಾತಿ ಭಿನ್ನಮತ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿ' ಮಾಡುವ ಉದ್ದೇಶದಿಂದ ಹಾಥ್‌ರಸ್‌ಗೆ ಪಿಎಫ್‌ಐನ ಇತರೆ ಸದಸ್ಯರ ಜೊತೆ ಪ್ರಯಾಣ ಮಾಡುತ್ತಿದ್ದರು ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿರುವ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

2018ರಲ್ಲಿ ಮುಚ್ಚಿದ ತೇಜಸ್‌ ಪತ್ರಿಕೆಯ ಗುರುತಿನ ಚೀಟಿ ತೋರ್ಪಡಿಸುವ ಮೂಲಕ ಕಪ್ಪನ್‌ ಅವರು “ಪತ್ರಕರ್ತನ ಸೋಗು” ಹೊಂದಿದ್ದರು ಎಂದು ದೂರಲಾಗಿದೆ. ಕಪ್ಪನ್‌ ಸೇರಿದಂತೆ ಐದು ಮಂದಿಯನ್ನು ಅಕ್ಟೋಬರ್‌ 5ರಂದು ಬಂಧಿಸಲಾಗಿದ್ದು, ಪತ್ರಕರ್ತ ಮತ್ತು ಇತರೆ ಮೂವರ ಜಾಮೀನು ಅರ್ಜಿಯನ್ನು ವಿವರಣೆ ನೀಡುವ ಮೂಲಕ ನ್ಯಾಯಾಲಯ ವಜಾಗೊಳಿಸಿದೆ ಎಂದು ಹೇಳಲಾಗಿದೆ.

ಕೇರಳ ಕಾರ್ಯನಿರತ ಪತ್ರಕರ್ತರ ಸಂಘದ ಪರವಾಗಿ ಕಪ್ಪನ್‌ ಅವರನ್ನು ಪ್ರತಿನಿಧಿಸಿರುತ್ತಿರುವ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು “ಕಪ್ಪನ್‌ ಅವರನ್ನು ಅವರ ವಕೀಲರು ಅಥವಾ ಕುಟುಂಬ ಸದಸ್ಯರು ಭೇಟಿ ಮಾಡಲು ಅವಕಾಶ ನೀಡದೇ ಇರುವುದರಿಂದ ಅಲಾಹಾಬಾದ್‌ ಹೈಕೋರ್ಟ್‌ ಅನ್ನು ಸಂಪರ್ಕಿಸಲಾಗಿಲ್ಲ” ಎಂದು ಸುಪ್ರೀಂ ಕೋರ್ಟ್‌ಗೆ ವಿವರಿಸಿದರು. ಇದನ್ನು ನಿರಾಕರಿಸಿರುವ ಉತ್ತರ ಪ್ರದೇಶ ಸರ್ಕಾರವು ಕಪ್ಪನ್‌ ತಮ್ಮನ್ನು ದೆಹಲಿಗೆ ಕರೆತಂದ ವಿಶೇಷ ತನಿಖಾ ದಳದ ದಾರಿ ತಪ್ಪಿಸಿದ್ದಾರೆ ಎಂದಿದೆ.

“ತನಿಖಾ ತಂಡದ ಸದಸ್ಯರಿಗೆ ಅವರು ಸರಿಯಾಗಿ ಸಹಕಾರ ನೀಡಿಲ್ಲ. ಬದಲಿಗೆ ದಾರಿತಪ್ಪಿಸುವ ಮಾಹಿತಿ ನೀಡಿದ್ದಾರೆ. ಕಪ್ಪನ್‌ ಫ್ಲಾಟ್‌ ಸಹವರ್ತಿಯು ಪಿಎಫ್‌ಐ ಹಾಗೂ ಹಲವಾರು ಸಂಘಟನೆಗಳ ಸದಸ್ಯರಾಗಿದ್ದು, ಫ್ಲಾಟ್‌ಗೆ ತೆರಳಿ ಶೋಧಿಸಲು ಅವಕಾಶ ನಿರಾಕರಿಸಿದ್ದರು. ಅಂತಿಮವಾಗಿ ಸರ್ಚ್‌ ವಾರೆಂಟ್‌ ಸಹಿತ ಅಲ್ಲಿ ಪೊಲೀಸರು ಶೋಧ ನಡೆಸಿದಾಗ ದೋಷಾರೋಪ ಮಾಡಬಹುದಾದ ದಾಖಲೆಗಳು ದೊರೆತಿದ್ದು, ಅವುಗಳು ತನಿಖೆಯ ಭಾಗವಾಗಿವೆ.”
ಉತ್ತರ ಪ್ರದೇಶ ಸರ್ಕಾರದ ಅಫಿಡವಿಟ್‌

ಹಲವು ನಿಷೇಧಿತ ಸಂಘಟನೆಗಳ ಜೊತೆ ಕಪ್ಪನ್‌ ಸಂಪರ್ಕ ಹೊಂದಿದ್ದು, ಆರೋಪಿತರನ್ನು ಭೇಟಿ ಮಾಡುವ ಸಂಬಂಧ ಅವರ ಯಾವುದೇ ಕುಟುಂಬ ಸದಸ್ಯರು ಜೈಲು ಅಧಿಕಾರಿಗಳನ್ನುಇದುವರೆಗೆ ಸಂಪರ್ಕಿಸಿಲ್ಲ. ಆರೋಪಿ ಕಪ್ಪನ್‌ ಸಹಿ ಮಾಡಿಸುವ ಸಂಬಂಧ ವಕಾಲತ್ತಿನೊಂದಿಗೆ ಇದುವರೆಗೆ ಯಾವುದೇ ವಕೀಲರು ಜೈಲು ಅಧಿಕಾರಿಗಳನ್ನು ಸಂಪರ್ಕಿಸಿಲ್ಲ ಎಂದು ಸರ್ಕಾರದ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

“ಸಿದ್ದಿಕಿ ಕಪ್ಪನ್‌ ಅವರು ನ್ಯಾಯಾಂಗ ಬಂಧನದಲ್ಲಿದ್ದಾಗ ಅವರ ಲಿಖಿತ ಮನವಿಯ ಮೇರೆಗೆ ಮೂರು ಬಾರಿ 02.11.2020, 10.11.2020 ಮತ್ತು 17.11.2020 ರಂದು ಫೋನಿನ ಮೂಲಕ ಅವರ ಕುಟುಂಬ ಸದಸ್ಯರ ಜೊತೆ ಮಾತನಾಡಿದ್ದಾರೆ” ಎಂದು ಉತ್ತರ ಪ್ರದೇಶ ಸರ್ಕಾರದ ಅಫಿಡವಿಟ್‌ನಲ್ಲಿ ಹೇಳಲಾಗಿದೆ.

ಹಾಥ್‌ರಸ್‌ನಲ್ಲಿ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಆನಂತರದ ಬೆಳವಣಿಗೆಗಳನ್ನು www.azhimukham.com ವೆಬ್‌ಸೈಟ್ ಗೆ‌ ವರದಿ ಮಾಡಲು ತೆರಳಿದ್ದ ಕಪ್ಪನ್‌ ಅವರನ್ನು ಹಾಥ್‌ರಸ್‌ ಸಮೀಪದ ಟೋಲ್‌ ಪ್ಲಾಜಾದ ಬಳಿ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ಕಪ್ಪನ್‌ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಲಾಗಿದೆ.

Also Read
ಪತ್ರಕರ್ತ ಸಿದ್ದಿಕಿ ಕಪ್ಪನ್‌ ಬಿಡುಗಡೆಗೆ ಮನವಿ: ಉತ್ತರ ಪ್ರದೇಶದ ಪ್ರತಿಕ್ರಿಯೆ ಬಯಸಿದ ಸುಪ್ರೀಂ ಕೋರ್ಟ್

ಕಪ್ಪನ್‌ ಬಂಧನವನ್ನು ಪ್ರಶ್ನಿಸಿ ಹಾಗೂ ಸಂವಿಧಾನದ 14, 19 ಮತ್ತು 21ನೇ ವಿಧಿಗಳನ್ನು ಉಲ್ಲಂಘಿಸಿ ಅವರ ಮೂಲಭೂತ ಹಕ್ಕುಗಳಿಗೆ ಚ್ಯುತಿಯುಂಟು ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಕೇರಳ ಕಾರ್ಯನಿರತ ಪತ್ರಕರ್ತರ ಸಂಘವು ಹೇಬಿಯಸ್‌ ಕಾರ್ಪಸ್‌ ಮನವಿ ಸಲ್ಲಿಸಿದೆ.

ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿಗಾರಿಕೆಯ ಕುರಿತು ಶುಕ್ರವಾರ ಸುಪ್ರೀಂ ಕೋರ್ಟ್‌ ಆಕ್ಷೇಪ ಎತ್ತಿದೆ. ಕಪ್ಪನ್‌ ಅವರಿಗೆ ಸರ್ವೋಚ್ಚ ನ್ಯಾಯಾಲಯ ಪರಿಹಾರ ನಿರಾಕರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿರುವುದು ಸರಿಯಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಹೇಳಿದ್ದಾರೆ. “ನಮ್ಮ ಹಿಂದಿನ ಆದೇಶ ಕುರಿತು ಸರಿಯಾದ ರೀತಿಯಲ್ಲಿ ವರದಿ ಮಾಡಲಾಗಿಲ್ಲ. ನಾವು ಪರಿಹಾರ ನಿರಾಕರಿಸಿದ್ದೇವೆ ಎಂದು ಹೇಳಿದ್ದಾಗಿ ಬರೆಯಲಾಗಿದೆ” ಎಂದು ಬೊಬ್ಡೆ ಹೇಳಿದರು.

Related Stories

No stories found.
Kannada Bar & Bench
kannada.barandbench.com