Sidhu Moosewala and Lawrence Bishnoi Twitter
ಸುದ್ದಿಗಳು

ರಕ್ಷಣೆ ಕೋರಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ನಿಂದ ಹಿಂಪಡೆದ ಗಾಯಕ ಸಿಧು ಹತ್ಯೆ ಆರೋಪಿ ಬಿಷ್ಣೋಯ್

ಮನವಿ ಹಿಂಪಡೆದಿರುವ ಲಾರೆನ್ಸ್ ಈ ಸಂಬಂಧ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ ಮೊರೆ ಹೋಗಲು ನಿರ್ಧರಿಸಿದ್ದಾನೆ.

Bar & Bench

ಪಂಜಾಬಿ ಗಾಯಕ, ಕಾಂಗ್ರೆಸ್‌ ನಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಲಾರೆನ್ಸ್‌ ಬಿಷ್ಣೋಯ್‌ ತನಗೆ ಪೊಲೀಸ್‌ ಭದ್ರತೆ ಒದಗಿಸಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್‌ನಿಂದ ಬುಧವಾರ ಹಿಂಪಡೆದಿದ್ದಾನೆ.

ಕಾಂಗ್ರೆಸ್‌ ನಾಯಕ ಹಾಗೂ ಗಾಯಕ ಮೂಸೆ ವಾಲಾ (28) ಕಳೆದ ಭಾನುವಾರ ಎಸ್‌ಯುವಿ ಪ್ರಯಾಣಿಸುತ್ತಿದ್ದಾಗ ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಕೊಂದಿದ್ದರು. ಕೊಲೆಯಲ್ಲಿ ಬಿಷ್ಣೋಯ್ ಗ್ಯಾಂಗ್ ಭಾಗಿಯಾಗಿದ್ದು, ಕೆನಡಾ ಮೂಲದ ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್ ಹತ್ಯೆಯ ಹೊಣೆ ಹೊತ್ತಿದ್ದ ಎಂದು ಪಂಜಾಬ್ ಪೊಲೀಸರು ಹೇಳಿದ್ದರು. ಲಾರೆನ್ಸ್‌ ಆಪ್ತ ಸಹಾಯಕ ಬ್ರಾರ್‌ ಎನ್ನಲಾಗಿತ್ತು.

ಪಂಜಾಬ್‌ ಪೊಲೀಸರು ತನ್ನನ್ನು ಎನ್‌ಕೌಂಟರ್‌ ಮೂಲಕ ಕೊಲ್ಲಬಹುದು ಎಂಬ ಭೀತಿ ವ್ಯಕ್ತಪಡಿಸಿದ್ದ ಲಾರೆನ್ಸ್‌ ತನಗೆ ಭದ್ರತೆ ಒದಗಿಸಬೇಕೆಂದು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ʼಪಂಜಾಬ್‌ ಪೊಲೀಸರು ತನ್ನನ್ನು ವಶಕ್ಕೆ ಪಡೆದು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಬಹುದು ಎಂಬ ಬಲವಾದ ಆತಂಕ ಇದೆʼ ಎಂಬುದಾಗಿ ಅರ್ಜಿಯಲ್ಲಿ ದುಗುಡ ತೋಡಿಕೊಂಡಿದ್ದ.

ನ್ಯಾ. ಸ್ವರಣಾ ಕಾಂತ ಶರ್ಮಾ ಅವರಿದ್ದ ಏಕಸದಸ್ಯ ಪೀಠದೆದುರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿ ಲಾರೆನ್ಸ್‌ ಪರ ವಕೀಲರು ಮನವಿಯನ್ನು ಹಿಂಪಡೆದರು.