Justice AS Bopanna, Justice DY Chandrachud and Justice JB Pardiwala 
ಸುದ್ದಿಗಳು

ಮಕ್ಕಳ ದತ್ತು ಸ್ವೀಕಾರ ಪ್ರಕ್ರಿಯೆ ಸರಳಗೊಳಿಸಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ದತ್ತು ಸ್ವೀಕಾರ ಯೋಜನೆ ರೂಪಿಸಬೇಕು ಎಂದು ಕೋರಿ ಸರ್ಕಾರೇತರ ಸಂಸ್ಥೆ 'ಟೆಂಪಲ್ ಆಫ್ ಹೀಲಿಂಗ್' ಸಲ್ಲಿಸಿದ್ದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Bar & Bench

ಭಾರತದಲ್ಲಿ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಪ್ರಕ್ರಿಯೆ ಸರಳೀಕರಿಸಲು ಇದು ಸುಸಮಯ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ [ಟೆಂಪಲ್ ಆಫ್ ಹೀಲಿಂಗ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ದತ್ತು ಸ್ವೀಕಾರ ಯೋಜನೆ ರೂಪಿಸಬೇಕು ಎಂದು ಕೋರಿ ಸರ್ಕಾರೇತರ ಸಂಸ್ಥೆ ಟೆಂಪಲ್ ಆಫ್ ಹೀಲಿಂಗ್ ಸಲ್ಲಿಸಿದ್ದ ಮನವಿಯ ವಿಚಾರಣೆ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎ ಎಸ್ ಬೋಪಣ್ಣ ಹಾಗೂ ಜೆ ಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠದಲ್ಲಿ ನಡೆಯಿತು.

ಲಕ್ಷಾಂತರ ಮಕ್ಕಳು ತಮ್ಮನ್ನು ದತ್ತು ಪಡೆಯಲೆಂದು ಕಾಯುತ್ತಿದ್ದು ದಂಪತಿಗಳು ಕೂಡ ಹಲವು ವರ್ಷಗಳ ಕಾಲ ಅದಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ ಎಂದು ನ್ಯಾಯಾಲಯ ಹೇಳಿತು.

“ಇದೊಂದು ಪ್ರಮುಖ ವಿಷಯವಾಗಿದ್ದು ನೈಜ ಮನವಿಯಾಗಿದೆ. ಲಕ್ಷ ಲಕ್ಷ ಮಕ್ಕಳು ತಮ್ಮನ್ನು ದತ್ತು ಪಡೆಯಲು ಕಾಯುತ್ತಿದ್ದು ಮೂರ್ನಾಲ್ಕು ವರ್ಷಗಳವರೆಗೆ ಜನ ಹಾಗೂ ದಂಪತಿಗಳು ದತ್ತು ತೆಗೆದುಕೊಳ್ಳಲು ಸಾಧ್ಯವಿಲ್ಲದಂತಾಗಿದೆ !” ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.

ಅರ್ಜಿದಾರರು ಪ್ರಮುಖ ಸಲಹೆಗಳನ್ನು ಪ್ರಸ್ತಾಪಿಸಿರುವುದರಿಂದ ಕೇಂದ್ರ ಸರ್ಕಾರದ ಸಂಬಂಧಿತ ಸಚಿವಾಲಯದ ಯಾರಾದರೂ ಹಿರಿಯ ಅಧಿಕಾರಿ ಅವರನ್ನು ಭೇಟಿಯಾಗಬೇಕೆಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಸಚಿವಾಲಯಕ್ಕೆ ಸೂಚಿಸಿದರು. ಅಲ್ಲದೆ ಭಾರತದಲ್ಲಿ ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ಪ್ರಕ್ರಿಯೆಯನ್ನು ಹೇಗೆ ಸರಳಗೊಳಿಸಲಾಗಿದೆ ಎಂಬ ಕುರಿತು ಮೂರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪೀಠ ಸೂಚಿಸಿತು.

ದತ್ತು ಪ್ರಕ್ರಿಯೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ, ಹಿಂದೂ ದತ್ತಕ ಮತ್ತು ಜೀವನಾಂಶ ಕಾಯಿದೆ (HAMA), 1956ರ ಅಡಿ ಅಂತರ್‌ದೇಶೀಯ ದತ್ತ ಸ್ವೀಕಾರಕ್ಕೆ ಸಂಬಂಧಿಸಿದಂತೆ ಶಾಶ್ವತ ಕಾರ್ಯವಿಧಾನ ರೂಪಿಸಬೇಕು ಎಂದು ದೆಹಲಿ ಹೈಕೋರ್ಟ್ ಕಳೆದ ವರ್ಷ ಸಚಿವಾಲಯಕ್ಕೆ ಸೂಚಿಸಿತ್ತು.