ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರ ಸಹೋದರಿ ಯಾಸ್ಮಿನ್ ವಾಂಖೆಡೆ ಮುಂಬೈ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ.
ವಕೀಲ ವಿವೇಕ್ ಪಾಂಡೆ ಅವರ ಮೂಲಕ ಸಲ್ಲಿಸಿದ ದೂರಿನಲ್ಲಿ ತಮ್ಮ ವಿರುದ್ಧ ಮಲಿಕ್ ಮಾಡಿರುವ ವಿವಿಧ ಟ್ವೀಟ್‌ಗಳು ಹಾಗೂ ಟಿವಿ ಸಂದರ್ಶನಗಳ ಬಗ್ಗೆ ಯಾಸ್ಮಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ವಿರುದ್ಧದ ಆರೋಪಗಳು ಸುಳ್ಳು ಎಂದು ಸಂಪೂರ್ಣವಾಗಿ ತಿಳಿದಿದ್ದರೂ ಮಲಿಕ್ ಅವರು ಮಾನಹಾನಿಕರ ಆರೋಪ ಮಾಡಿದ್ದಾರೆ ಎಂಬುದಾಗಿ ಅವರು ಹೇಳಿದ್ದಾರೆ.
ಬಾಲಿವುಡ್‌ನಲ್ಲಿ ಕೆಲ ಅಕ್ರಮಗಳಲ್ಲಿ ತೊಡಗಿರುವ ಫ್ಲೆಚರ್ ಪಟೇಲ್ ಅವರೊಂದಿಗೆ ಯಾಸ್ಮಿನ್ ಅವರು ಸಂಪರ್ಕ ಹೊಂದಿದ್ದರು. ಸುಲಿಗೆ ಹಣ ಬಳಸಿ ಯಾಸ್ಮಿನ್ ಮಾಲ್ಡೀವ್ಸ್‌ಗೆ ಪ್ರವಾಸ ಕೈಗೊಂಡಿದ್ದರು. ಮಾದಕವಸ್ತು ದಂಧೆಕೋರರ ಜೊತೆ ಮಾತುಕತೆ ತಾನು ಮಾತುಕತೆ ನಡೆಸಿದ್ದೇನೆ ಇತ್ಯಾದಿ ಆರೋಪಗಳನ್ನು ಮಲಿಕ್ ಮಾಡಿದ್ದು ಅವು ಆಧಾರರಹಿತವಾಗಿವೆ. ಕೆಲವೆಡೆ ತಿರುಚಿದ ಛಾಯಾಚಿತ್ರಗಳನ್ನು ಬಳಸಲಾಗಿದೆ ಎಂದು ಯಾಸ್ಮಿನ್ ದೂರಿದ್ದಾರೆ.
ತಮ್ಮ ವರ್ಚಸ್ಸು ಮತ್ತು ಖ್ಯಾತಿಗೆ ಧಕ್ಕೆ ತರುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ. ತಾವು ಜನರಿಂದ ಹಣ ವಸೂಲಿ ಮಾಡುವುದಾಗಿ ಬಿಂಬಿಸಿರುವ ಟ್ವೀಟ್‌ಗಳು ನಿಜವಲ್ಲ. ಎನ್‌ಸಿಬಿ ಎಂಬ ಸರ್ಕಾರಿ ಸಂಸ್ಥೆಗೆ ಬೆದರಿಕೆ ಮತ್ತು ಒತ್ತಡ ಹೇರುವ ದೃಷ್ಟಿಯಿಂದ ಇಂತಹ ಆರೋಪ ಮಾಡಲಾಗಿದೆ. ಮಾನಹಾನಿ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಆದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 354 (ಹಿಂಬಾಲಿಸುವಿಕೆ), 499, 500 (ಮಾನಹಾನಿ) ಮತ್ತು 509ರ (ಮಹಿಳೆಯ ಮಾನಹರಣಕ್ಕೆ ಪದ, ಸನ್ನೆ ಬಳಕೆ) ಅಡಿ ನೋಟಿಸ್ ನೀಡುವಂತೆ ಕೋರಿ ಮುಂಬೈನ ಅಂಧೇರಿಯಲ್ಲಿರುವ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರನ್ನು ಯಾಸ್ಮಿನ್ ಸಂಪರ್ಕಿಸಿದ್ದಾರೆ.